ಹರಿಹರ: ಕೋವಿಡ್-19 ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಹಾಕಬೇಕು ಹಾಗೂ ಸೂಕ್ತ ಸಲಕರಣೆಗಳನ್ನು ವಿತರಣೆ ಮಾಡಬೇಕೆಂದು ಆಗ್ರಹಿಸಿ ಬುಧವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಹೆಗಡೆ, ಸರಕಾರ, ಜಿಲ್ಲಾಡಳಿತ, ತಾಲೂಕು ಆಡಳಿತದ ಸೂಚನೆಯಂತೆ ಶಾಲಾ ಶಿಕ್ಷಕರು ವಿವಿಧ ಹಂತದಲ್ಲಿ ಕೋವಿಡ್-19 ನಿಯಂತ್ರಣದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಸರಕಾರಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ, ಚೆಕ್‌ಪೋಸ್ಟ, ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿರುವ ಮತಗಟ್ಟೆ ಅಧಿ ಕಾರಿಯಾಗಿರುವ ಶಿಕ್ಷಕರು ಡಾಟಾ ಎಂಟ್ರಿ, ವಾರ್ ರೂಂ, ತನಿಖಾಧಿ ಕಾರಿ, ಯೋಗ ತರಬೇತಿ, ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಶಿಕ್ಷಕರು ಭಾಗಿಯಾಗುತ್ತಿದ್ದಾರೆ. ಹೀಗೆ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಹಲವಾರು ಶಿಕ್ಷಕರು ಕೋವಿಡ್ ಸೋಂಕಿತರಾಗಿದ್ದಾರೆ. ಹೀಗಾಗಿ ಎಲ್ಲಾ ಶಿಕ್ಷಕರನ್ನು ಫ್ರಂಟ್‌ಲನ್ ವಾರಿಯರ್ ಎಂದು ಘೋಷಿಸಿದ್ದಾರೆ.
ಆದರೆ ಅವರಿಗೆ ಕೋವಿಡ್ ಲಸಿಕೆ ಹಾಕಿಸುವಲ್ಲಿ ಆದ್ಯತೆ ನೀಡುತ್ತಿಲ್ಲ. ಜಿಲ್ಲಾ ಹಾಗೂ ತಾಲೂಕು ಆಡಳಿತ ಮೊದಲ ಆದ್ಯತೆ ಮೇರೆಗೆ ಶಿಕ್ಷಕರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಕೋವಿಡ್-19 ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಶಿಕ್ಷಕರಿಗೆ ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್ ಇತರೆ ಅಗತ್ಯ ಸಾಧನ, ಸಲಕರಣೆಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್, ಈ ಕುರಿತು ಜಿಲ್ಲಾ ಧಿಕಾರಿಯವರೊಂದಿಗೆ ಚರ್ಚಿಸುತ್ತೇನೆ ಎಂದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಚನ್ನಬಸಪ್ಪ, ತಾಲೂಕು ಖಜಾಂಚಿ ರುದ್ರಪ್ಪ, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಶಿವಮೂರ್ತಿ, ಮಂಜಪ್ಪ ಬಿದರಿ, ಸಿಆರ್‌ಪಿ ಕೆ.ಎನ್. ಬಸವರಾಜಯ್ಯ ಇತರರು ಇದ್ದರು.