ಹೊನ್ನಾಳಿ: ಪಟ್ಟಣದ ತಾಲೂಕು ಆಸ್ಪತ್ರೆಗೆ ಹೊಸದಾಗಿ 20 ಮೆಡಿಕಲ್ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಬೆಂಗಳೂರಿನಿಂದ ತರಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಗುರುವಾರ ಆಸ್ಪತ್ರೆಗೆ ಬಂದ ಕಾನ್ಸಂಟ್ರೇಟರ್‌ಗಳನ್ನು ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಹಿಂದೆ ತಾಲೂಕು ಆಸ್ಪತ್ರೆಗೆ ಮೊದಲ ಹಂತದಲ್ಲಿ 18, ಎರಡನೇ ಹಂತದಲ್ಲಿ 25 ಹಾಗೂ ಮೂರನೇ ಹಂತವಾಗಿ 20 ಸೇರಿದಂತೆ ಒಟ್ಟು 63 ಕಾನ್ಸಂಟ್ರೇಟರ್ ಗಳನ್ನು ಸರ್ಕಾರದ ವತಿಯಿಂದ ತರಿಸಲಾಗಿದೆ ಎಂದರು. ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರ ಕೊರತೆ ಇದೆ.
ಆದಷ್ಟು ಬೇಗ ಸಿಬ್ಬಂದಿ ಕೊರತೆಯನ್ನು ನೀಗಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ತಾಲೂಕು ಆಸ್ಪತ್ರೆಯಲ್ಲೂ ಲಭ್ಯವಾಗುವಂತೆ ಮಾಡಲಾಗುವುದು. ಅವಳಿ ತಾಲೂಕುಗಳ ಎಲ್ಲಾ ಹಳ್ಳಿಗಳಿಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನಾನು ಕಂದಾಯ ಇಲಾಖೆ, ತಾಪಂ ಮತ್ತು ವೈದ್ಯರ ತಂಡ ಗಾಣದೆತ್ತಿನಂತೆ ತಿರುಗಾಡುತ್ತಿದ್ದೇವೆ. ಜನರು ಮಾತ್ರ ತಾತ್ಸಾರ ಮಾಡುತ್ತಿದ್ದಾರೆ. ಕೊರೊನಾ ತಗುಲಿ ಉಲ್ಬಣವಾದ ಮೇಲೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಉಸಿರಾಟದ ತೊಂದರೆಯಾಗಿ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಈಗಾಗಲೆ 4 ಕೋವಿಡ್ ಕೇಂದ್ರಗಳಿದ್ದು, ಇವುಗಳಲ್ಲಿ ಸಾಸ್ವೆಹಳ್ಳಿ ಮತ್ತು ಜೀನಹಳ್ಳಿ ಕೋವಿಡ್ ಕೇಂದ್ರಗಳನ್ನು ತೆಗೆದು ತಾಲೂಕಿನ ಅರಬಟ್ಟೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 500 ಬೆಡ್‌ಗಳ ಕೋವಿಡ್ ಕೇಂದ್ರ ಸ್ಥಾಪನೆ ಮಾಡಲಾಗುವುದು.
ತಾಲೂಕಿನಾದ್ಯಂತ ಲಾಕ್‌ಡೌನ್ ಇದ್ದರೂ ಅನವಶ್ಯಕವಾಗಿ ತಿರುಗಾಟ, ಗುಂಪು ಸೇರುವುದು ನಿಂತಿಲ್ಲ. ಜನರಿಗೆ ಇದರ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ರೋಗ ಬಂದ ಮೇಲೆ ಚಿಂತಿಸುವುದಕ್ಕಿಂತ ಬಾರದಂತೆ ನೋಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಭಾಧ್ಯಕ್ಷ ಶ್ರೀಧರ್, ಡಾ| ರಾಜಕುಮಾರ್, ಪಿಎಸ್‌ಐ ಬಸವರಾಜ್ ಆರ್. ಬಿರಾದಾರ್ ಇದ್ದರು.