ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿದ್ದ ಕರ್ಫ್ಯೂ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಇದ್ದ ಬೆಳಗಿನ ಸಮಯವನ್ನು ಸಹ ತೆಗೆದು ಹಾಕಿ ಜಿಲ್ಲಾಡಳಿತ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿದೆ. ಇಡೀ ದಿನ ಜಿಲ್ಲೆ ಸಂಪೂರ್ಣ ಸ್ತಬ್ಧವಾಗುತ್ತಿದೆ. ಲಾಕ್‌ಡೌನ್‌ನಿಂದ ವಿನಾಯಿತಿ ಇರುವ ಕ್ಷೇತ್ರದ ಜನರ ಓಡಾಟ, ತುರ್ತು ಕೆಲಸಗಳಿಗಾಗಿ ಓಡಾಟ ಹೊರತುಪಡಿಸಿದರೆ ಉಳಿದೆಲ್ಲರೂ ಮನೆಯಲ್ಲಿಯೇ ಇದ್ದು ಲಾಕ್‌ಡೌನ್‌ಗೆ ಸಹಕರಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಗಳಂತೆ ಹಳ್ಳಿಗಳಲ್ಲಿಯೂ ಕಾರ್ಯಪಡೆಗಳು ಜನರ ಅನಗತ್ಯ ಸಂಚಾರಕ್ಕೆ ತಡೆಯೊಡ್ಡಿವೆ. ಆರಂಭದಲ್ಲಿ ವಿಧಿಸಿದ್ದ ಕರ್ಫ್ಯೂ ವೇಳೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಅವಶ್ಯ ವಸ್ತುಗಳ ಮಾರಾಟ ಅಂಗಡಿಗಳು ಸೇರಿದಂತೆ ಉಳಿದೆಲ್ಲ ಅಂಗಡಿಗಳು ತೆರೆದಿರುತ್ತಿದ್ದವು.
ಈ ಅವಧಿಯಲ್ಲಿ ಜನ, ವಾಹನ ಸಂಚಾರ ಅತ್ಯಧಿಕವಾಗಿ ಜನಸಂದಣಿ ಉಂಟಾಗುತ್ತಿತ್ತು. ದೈಹಿಕ ಅಂತರ ಪಾಲನೆ, ಮಾಸ್ಕ್ ಮರೆಯಲಾಗುತ್ತಿತ್ತು. ಇದನ್ನರಿತ ಜಿಲ್ಲಾಡಳಿತ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿದ್ದು ಜನರು ಈಗ ತರಕಾರಿಗಾಗಿ ನಿತ್ಯ ಬೆಳಿಗ್ಗೆ ಮನೆಯಿಂದ ಹೊರಗೆ ಬರುವುದು ನಿಂತಿದೆ. ತರಕಾರಿ, ಹಣ್ಣುಗಳಿಗಾಗಿ ಮನೆ ಬಾಗಿಲಿಗೆ ಬರುವ ತಳ್ಳುವ ಗಾಡಿಗಳನ್ನೇ ನೆಚ್ಚಿಕೊಂಡಿದ್ದಾರೆ.
ತರಕಾರಿ, ಹಣ್ಣುಗಳೇನೋ ಮನೆ ಬಾಗಿಲಿಗೆ ತಳ್ಳುವ ಗಾಡಿಗಳಲ್ಲಿ ಬರುತ್ತಿವೆ. ಆದರೆ ನಿತ್ಯ ಬಳಕೆಗೆ ಬೇಕಾದ ದಿನಸಿ ವಸ್ತುಗಳು ಸಿಗದೆ ಕೆಲವು ಪ್ರದೇಶಗಳಲ್ಲಿ ಜನರು ಪರದಾಡುತ್ತಿದ್ದಾರೆ. ಲಾಕ್‌ಡೌನ್ ಮಧ್ಯೆಯೂ ಕೆಲ ಪ್ರದೇಶಗಳಲ್ಲಿ ವರ್ತಕರು ನಸುಕಿನ 5 ಗಂಟೆಗೆ ಅಂಗಡಿ ತೆರೆಯುತ್ತಿದ್ದು, ಅವಶ್ಯಕ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ.
ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲಾಡಳಿತ ದಿನಸಿ ಖರೀದಿಗೆ ಎರಡು ದಿನಗಳಿಗೊಮ್ಮೆಯಾದರೂ ಅವಕಾಶ ಮಾಡಿಕೊಡಬೇಕು. ಬಡ ಹಾಗೂ ಮಧ್ಯಮ ವರ್ಗದವರು ನಿತ್ಯ ಕಿರಾಣಿ ವಸ್ತುಗಳನ್ನು ಖರೀದಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಜಿಲ್ಲಾಡಳಿತ, ದಿನಸಿ ಖರೀದಿಗೆ ಅವಕಾಶ ಮಾಡಿಕೊಡಬೇಕು. ಈ ಸಮಯದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಪಾಲನೆಯಾಗುವಂತೆ ಅಧಿಕಾರಿ ಗಳು, ಪೊಲೀಸರು ನೋಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.