Advertisement

ಎಲ್ಲೆಡೆ ನಾಕಾಬಂದಿ; ಜನರೆಲ್ಲ ಗೃಹ ಬಂಧಿ

09:38 PM May 26, 2021 | Team Udayavani |

ದಾವಣಗೆರೆ: ಮಹಾಮಾರಿ ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್‌ಡೌನ್‌ಗೆ ಮಂಗಳವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ದಾವಣಗೆರೆ ಜಿಲ್ಲಾಡಳಿತ ಮೇ 31ರ ವರೆಗೆ ಸಂಪೂರ್ಣ ಲಾಕ್‌ಡೌನ್‌ ವಿಸ್ತರಣೆ ಮಾಡಿ ದಿನಸಿ, ತರಕಾರಿ ಒಳಗೊಂಡಂತೆ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ. ಹಾಗಾಗಿ ದಿನಸಿ, ತರಕಾರಿ ಅಂಗಡಿ ತೆರೆದಿರಲಿಲ್ಲ. ಸೋಮವಾರವೇ ಎಷ್ಟು ಸಾಧ್ಯವೋ ಅಷ್ಟು ದಿನಸಿ ಖರೀದಿ ಮಾಡಲಾಗಿತ್ತು. ಮಾಹಿತಿ ಇಲ್ಲದ ಕೆಲವರು ದಿನಸಿ, ತರಕಾರಿಗಾಗಿ ಅಲ್ಲಲ್ಲಿ ಎಡತಾಕಿದರು.

ಹಾಲಿನ ಕೇಂದ್ರ, ಔಷಧಿ ಅಂಗಡಿ, ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿತ್ತು. ವಿನೋಬ ನಗರ ಒಳಗೊಂಡಂತೆ ಕೆಲ ಭಾಗದಲ್ಲಿನ ಹಾಲಿನ ಕೇಂದ್ರ ಬಂದ್‌ ಮಾಡಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ಇರದ ಕಾರಣ ಕೆ.ಆರ್‌. ಮಾರ್ಕೆಟ್‌,ಗಡಿಯಾರ ಕಂಬದ ರಸ್ತೆ, ವಿಜಯಲಕ್ಷ್ಮೀ ರಸ್ತೆ, ಮಂಡಿಪೇಟೆ, ಚೌಕಿಪೇಟೆ, ಚಾಮರಾಜಪೇಟೆ, ಕೆ.ಆರ್‌. ರಸ್ತೆ, ಬಿನ್ನಿ ಕಂಪನಿ ರಸ್ತೆ, ದೊಡ್ಡಪೇಟೆ, ಅಶೋಕ ರಸ್ತೆ ಇತರೆ ಭಾಗದಲ್ಲಿ ಜನರ ಸುಳಿವೇ ಇರಲಿಲ್ಲ.

ಅಲ್ಲಲ್ಲಿ, ಆಗಾಗ ವಾಹನಗಳ ಸಂಚಾರ ಕಂಡು ಬಂತು. ಸೋಮವಾರದಂತೆ ಜನಜಂಗುಳಿ ಎಲ್ಲಿಯೂ ಕಂಡು ಬರಲಿಲ್ಲ. ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ವಿವಿಧ ಭಾಗದಲ್ಲಿ ಸಂಚರಿಸಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ತಿಳಿ ಹೇಳುವ ಜೊತೆಗೆ ಎಚ್ಚರಿಕೆ ನೀಡಿದರು.

ಕೊರೊನಾದಿಂದ ಸುರಕ್ಷಿತವಾಗಿ ಇರಬೇಕಾದರೆ ಯಾರೂ ಸಹ ಮನೆಯಿಂದ ಹೊರ ಬರಬಾರದು ಎನ್ನುವ ಕಾರಣಕ್ಕೆ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ತಮ್ಮ ಹಾಗೂ ತಮ್ಮವರ ಸುರಕ್ಷತೆಗೆ ಮನೆಯಲ್ಲೇ ಇರಬೇಕು ಎಂದು ಜಾಗೃತಿ ಮೂಡಿಸಲಾಯಿತು.

Advertisement

ನಗರದ ಹೊರ ವಲಯ, ಬಡಾವಣೆಯಲ್ಲಿ ಜನ ಮತ್ತು ವಾಹನ ಸಂಚಾರ ಇಲ್ಲದ ಕಾರಣಕ್ಕೆ ಕೆಲವರು ರಸ್ತೆಯಲ್ಲಿ ಕ್ರಿಕೆಟ್‌, ಬ್ಯಾಡ್ಮಿಂಟನ್‌ ಆಡಿದರು. ಜನ ನಿಬಿಡ ರಸ್ತೆಯಲ್ಲೂ ಜನರು ಕ್ರಿಕೆಟ್‌ ಆಡುವುದು ಕಂಡು ಬಂತು. ಕೆಲವು ಕಡೆ ಅಂಗಡಿ, ಮುಂಗಟ್ಟು, ಹೋಟೆಲ್‌ ಮುಚ್ಚಿದ್ದರೆ, ಹಲವೆಡೆ ಎಂದಿನಂತೆ ತೆರೆದಿದ್ದವು. ಕೆಲವು ಕಡೆ ಕದ್ದುಮುಚ್ಚಿ ವ್ಯಾಪಾರ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next