ಹೊನ್ನಾಳಿ: ಕೋರೊನಾ ಸೋಂಕಿತರ ಬೇಸರ ದೂರ ಮಾಡಲು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಮವಾರ ರಾತ್ರಿ ಶಿವಮೊಗ್ಗ ಮೂಲದ ಚೇತನ್ ಹಾಗೂ ಪ್ರೀತಂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದರು.
ಅಲ್ಲದೆ ಸ್ವತಃ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು. ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದ ಬಳಿ ಇರುವ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 102 ಜನ ಸೋಂಕಿತರು ಕ್ವಾರಂಟೈನ್‌ನಲ್ಲಿದ್ದಾರೆ. ಅವರಿಗೆ ಮನರಂಜನೆ ನೀಡಬೇಕೆಂದು ಯೋಚಿಸಿದ ಶಾಸಕರು, ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದರು.
ಈ ವೇಳೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಕೋವಿಡ್ ಕೇರ್ ಸೆಂಟರ್‌ನಲ್ಲಿರುವವರಿಗೆ ಮಾನಸಿಕವಾಗಿ ಉಲ್ಲಾಸದಿಂದ ಕಾಲ ಕಳೆಯಬೇಕೆಂದು ಹಾಗೂ ಸೋಂಕಿತರು ಎನ್ನುವ ಭಾವನೆ ಬರಬಾರದು ಎಂಬ ಉದ್ದೇಶದಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲ್ಲಿರುವವರು ಮನೆಯ ಕಡೆ ಯೋಚನೆ ಮಾಡುತ್ತಾ ನೋವು ಪಡುತ್ತಿದ್ದಾರೆ.ಅವರಿಗೆ ಸಂತೋಷವನ್ನುಂಟು ಮಾಡಬೇ ಕೆಂಬುದು ನಮ್ಮ ಉದ್ದೇಶ ಎಂದರು.
ಹಾಡಿಗೆ ಹೆಜ್ಜೆ ಹಾಕಿದ ರೇಣುಕಾಚಾರ್ಯ: ಕೋವಿಡ್ ಕೇರ್ ಸೆಂಟರ್‌ನಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಡಿಗೆ ಹೆಜ್ಜೆ ಹಾಕಿದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಂಗೀತ ಕಾರ್ಯಕ್ರಮ ಮಾಡಬೇಕೆಂದಾಗ ಶಿವಮೊಗ್ಗ ಮೂಲದ ಚೇತನ್ ಹಾಗೂ ಪ್ರೀತಂ ಆರಂಭದಲ್ಲಿ ಹಿಂದೇಟು ಹಾಕಿದ್ದರು.
ಕೊನೆಗೆ ಇದು ನಮ್ಮ ಸೇವೆ ಎಂದು ತಿಳಿದ ಗಾಯಕರು ಕಾರ್ಯಕ್ರಮ ನಡೆಸಿಕೊಟ್ಟರು. ಸೋಂಕಿತರ ಮನೋಲ್ಲಾಕ್ಕಾಗಿ ನೀಡಿದ ಕಾರ್ಯಕ್ರಮ ಮನಸ್ಸಿಗೆ ನೆಮ್ಮದಿ ನೀಡಿದೆ ಎಂದರು.
ಜಿಪಂ ಸದಸ್ಯ ಸುರೇಂದ್ರ ನಾಯ್ಕ, ಸಿಪಿಐ ದೇವರಾಜ್, ತಹಶೀಲ್ದಾರ್ ಬಸನಗೌಡ ಕೋಟೂರ, ಪಿಎಸ್‌ಐ ಬಸವನಗೌಡ ಬಿರಾದಾರ್ ಇತರರು ಇದ್ದರು.