Advertisement
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುರುವುದನ್ನು ತಡೆಗಟ್ಟುವ, ಸೋಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮತ್ತು ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಇಬ್ಬರೂ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಣೆ ಮಾಡುತ್ತ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.
Related Articles
Advertisement
ಪ್ರತಿ ನಿತ್ಯ ಕೋವಿಡ್ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆಯುವ ಜೊತೆಗೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುವಂತೆ ತಾಕೀತು ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ದಾವಣಗೆರೆ ಹೊರ ವಲಯದಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರುಗಳು ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿನ ಆಗು-ಹೋಗುಗಳ ಬಗ್ಗೆ ಸದಾ ಗಮನ ಹರಿಸುವ ಮೂಲಕ ಸೋಂಕಿತರಿಗೆ ಅಗತ್ಯ ನೆರವು ಒದಗಿಸುತ್ತಿದ್ದಾರೆ.
ಲಸಿಕೆಗೆ 9 ಕೋಟಿ ರೂ. ನೀಡುವ ವಾಗ್ಧಾನ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವಯೋಮಿತಿಯ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆ, ಆಸ್ಪತ್ರೆ, ಕೇರ್ ಸೆಂಟರ್‌ಗಳ ಭೇಟಿ ಸಂದರ್ಭದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲವಾದರೂ ತಮ್ಮ ಗೃಹ ಕಚೇರಿಯಲ್ಲಿ ನಿಗದಿತ ಅವಧಿಯಲ್ಲಿ ಸಭೆ ನಡೆಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.
ಎರಡು ಆಸ್ಪತ್ರೆ, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜುಗಳ ಆಡಳಿತ ಅನುಭವ ಹೊಂದಿರುವ ಅವರು ಆರೋಗ್ಯ ಕ್ಷೇತ್ರ ಒಳಗೊಂಡಂತೆ ಎಲ್ಲ ಅಧಿಕಾರಿಗಳ ವರ್ಗಕ್ಕೆ ಸಕಾಲಿಕ ಸಲಹೆ, ಸೂಚನೆ ನೀಡುತ್ತಿದ್ದಾರೆ. ಸಲಹೆ, ಸೂಚನೆಗಳ ಪಾಲನೆಯತ್ತ ಗಮನ ನೀಡುತ್ತಿದ್ದಾರೆ.
ನಿಗದಿತ ಸಮಯದಲ್ಲಿ ತಮ್ಮ ಒಡೆತನದ ಬಾಪೂಜಿ ಮತ್ತು ಎಸ್.ಎಸ್. ಹೈಟೆಕ್ ಆಸ್ಪತ್ರೆಯ ವೈದ್ಯರ ಸಭೆಗಳನ್ನು ನಡೆಸುವ ಮೂಲಕ ಕೊರೊನಾ ಸೋಂಕಿತರಿಗೆ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ 2 ಲಕ್ಷ ಡೋಸ್ ಕೊರೊನಾ ಲಸಿಕೆಗೆ ತಗುಲುವ 18 ಕೋಟಿ ರೂ. ವೆಚ್ಚದ ಅರ್ಧ ಭಾಗ 9 ಕೋಟಿ ರೂ. ನೀಡುವ ವಾಗ್ಧಾನ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲು, ಅಗತ್ಯ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ವಹಿಸಿದ್ದರೂ ಸದಾ ನಿಗಾವಹಿಸುವ ಕೆಲಸ ಮಾಡುತ್ತಿದ್ದಾರೆ.
ನಗರದ ಕೆ.ಆರ್. ರಸ್ತೆಯಲ್ಲಿರುವ ತಮ್ಮ ಒಡೆತನದ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ಜಿಲ್ಲಾಡಳಿತದ ಜೊತೆ ಚರ್ಚಿಸಿದ್ದಾರೆ. ಸರ್ಕಾರ ಖಾಸಗಿಯಾಗಿ ಲಸಿಕೆ ಖರೀದಿಗೆ ಅನುಮತಿ ನೀಡಿದಲ್ಲಿ ಲಸಿಕೆ ಖರೀದಿಗೂ ಸಜ್ಜಾಗಿದ್ದಾರೆ.
ಈಗಾಗಲೇ 2-3 ಕಂಪನಿಗಳ ಜೊತೆ ಚರ್ಚೆಯೂ ನಡೆದಿದೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದ ಇಬ್ಬರು ಶಾಸಕರು ಕೊರೊನಾ ನಿಯಂತ್ರಿಸುವ ಮತ್ತು ಸೋಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಕಾರ್ಯತತ್ಪತರಾಗಿದ್ದಾರೆ