ದಾವಣಗೆರೆ: ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸಾಂಕ್ರಾಮಿಕ ಸೋಂಕಿನ ಸರಪಳಿಯನ್ನು ತುಂಡರಿಸುವ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ನಿಬಂಧನೆಗಳಿಗೆ ಒಳಪಡಿಸಿ ಮೇ 24 ರಂದು ಸೋಮವಾರ ಬೆಳಗ್ಗೆ 10 ರಿಂದ ಮೇ 31 ರಂದು ಬೆಳಗ್ಗೆ 6 ವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ಕೋವಿಡ್-19 ಪರಿಸ್ಥಿತಿ ಪರಿಗಣಿಸಿ ಪುನರಾವಲೋಕನ ಮಾಡಿದ ಹಿನ್ನೆಲೆಯಲ್ಲಿ ಸಾಂಕ್ರಮಿಕ ರೋಗ ತಡೆಗಟ್ಟಲು ಸರ್ಕಾರದ ನಿರ್ದೇಶನದಂತೆ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಆದೇಶದನ್ವಯ ಎಲ್ಲಾ ಅಂಗಡಿ ಮುಂಗಟ್ಟು, ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿ ಸಲಾಗಿದೆ. ಸಾರ್ವಜನಿಕರು ಅಗತ್ಯ ಚಟುವಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿ ಸಿ ನಡೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.
ಮದುವೆ ಸಮಾರಂಭಕ್ಕೆ ಈಗಾಗಲೇ ನೀಡಲಾಗಿರುವ ಅನುಮತಿಯಂತೆ 10 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಮೇ 31 ರವರೆಗೆ ಎಲ್ಲ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭ ನಿರ್ಬಂಧಿ ಸಲಾಗಿದೆ. ಅಂತ್ಯಸಂಸ್ಕಾರಕ್ಕೆ ಗರಿಷ್ಟ 5 ಜನರಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ.
ದಾವಣಗೆರೆ ಜಿಲ್ಲೆಗೆ ಆಗಮಿಸುವವರನ್ನು ಪ್ರತಿ ಚೆಕ್‌ಪೋಸ್ಟ್ ಗಳಲ್ಲಿ ವಿಚಾರಣೆ ನಡೆಸಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಪಡೆದುಕೊಳ್ಳಲಾಗುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ವಾಹನ ಬಳಸಬಹುದು.
ವೈದ್ಯಕೀಯ ದಾಖಲೆಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ತೋರಿಸಬೇಕು. ಇತರೆ ಎಲ್ಲಾ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಕೃಷಿ ಅವಲಂಬಿತ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅನುಮತಿಸಿದೆ. ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಬೀಜ, ಗೊಬ್ಬರ, ಕೀಟ ನಾಶಕಗಳು, ಕೊಯ್ಲು ಯಂತ್ರೋಪಕರಣಗಳ ಸಾಗಣೆ ಮತ್ತು ಸಂಬಂ ಧಿಸಿದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡ ಲಾಗಿದೆ.
ಹೋಟೆಲ್, ರೆಸ್ಟೋರೆಂಟ್‌ಗಳು, ಉಪಾಹಾರ ಗೃಹಗಳು ಪಾರ್ಸಲ್ ಸೇವೆಗಳನ್ನು ಮನೆಬಾಗಿಲಿಗೆ ವಿತರಿಸಲು ಮಾತ್ರ ಅನುಮತಿ ಇದೆ. ಯಾವುದೇ ರೀತಿಯ ಪಾರ್ಸ್‌ಲ್‌ಗಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶ ನೀಡಲಾಗಿಲ್ಲ. ಹಾಲು, ಡೈರಿ ಹಾಗೂ ಹಾಲಿನ ಬೂತುಗಳು ಮತ್ತು ಮೊಟ್ಟೆ ಅಂಗಡಿಗಳು ಪ್ರತಿ ದಿನ ಬೆಳಗ್ಗೆ 6 ರಿಂದ 10 ರವರೆಗೆ ತೆರೆಯಬಹುದು.
ಔಷ ಧಿ ಅಂಗಡಿ, ಆಸ್ಪತ್ರೆ, ಪೆಟ್ರೋಲ್ ಬಂಕ್‌ಗಳಿಗೆ ಅನುಮತಿ ನೀಡಲಾಗಿದೆ. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ವ್ಯಕ್ತಿಗಳ ಸಂಚಾರಕ್ಕೆ ಸರ್ಕಾರದ ಆದೇಶದಂತೆ ಅನುಮತಿ ಇದೆ. ಸೀಮಿತ ಸಂಖ್ಯೆಯಲ್ಲಿ ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಿರಾಣಿ ಅಂಗಡಿ, ಹಣ್ಣು, ತರಕಾರಿ, ಮಾಂಸ ಮತ್ತು ಮೀನು, ಹಾಗೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆ, ಎಲ್ಲ ರೀತಿಯ ಮದ್ಯದಂಗಡಿಗಳನ್ನು ಮತ್ತು ಬಾರ್ ತೆರೆಯುವಂತಿಲ್ಲ.