ಹೊನ್ನಾಳಿ: ಕೊರೊನಾ ಹೆಮ್ಮಾರಿ ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರಣಕೇಕೆ ಹಾಕುತ್ತಿದೆ. ಇನ್ನಾದರೂ ಗ್ರಾಮೀಣ ಭಾಗದ ಜನರು ಎಚ್ಚೆತ್ತುಕೊಂಡು ಮನೆಯಿಂದ ಹೊರ ಬರದೆ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದರು.
ನ್ಯಾಮತಿ ತಾಲೂಕಿನ ಚೀಲೂರು, ದೊಡ್ಡೇರಿ, ಚಿ.ಕಡದಕಟ್ಟೆ, ಗಡೇಕಟ್ಟೆ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಕೊರೊನಾ ಸೋಂಕು ಶ್ವಾಸಕೋಶಕ್ಕೆ ಹಬ್ಬುತ್ತಿದ್ದಂತೆ ಜನರು ಬೆಡ್ ಕೊಡಿಸಿ ಎಂದು ಕರೆ ಮಾಡುತ್ತಾರೆ. ಇದಕ್ಕೂ ಮುನ್ನ ಕೆಮ್ಮು, ಶೀತದ ಲಕ್ಷಣಗಳು ಕಂಡು ಬಂದರೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ನನಗೆ ಅವಳಿ ತಾಲೂಕಿನ ಜನರ ಆರೋಗ್ಯವೇ ಮುಖ್ಯ. ಅದಕ್ಕಾಗಿ ಅವಳಿ ತಾಲೂಕಿನಾದ್ಯಂತ ಸಂಚರಿಸಿ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ನಿಜಕ್ಕೂ ಬೇಸರ ಮೂಡಿಸಿದೆ ಎಂದು ತಿಳಿಸಿದರು. ಚೆಕ್‌ಪೋಸ್ಟ್‌ಗೆ ಭೇಟಿ: ಚೀಲೂರು ಗ್ರಾಮದ ಚೆಕ್ ಪೋಸ್ಟ್‌ಗೆ ಭೇಟಿ ನೀಡಿದ ಶಾಸಕ ರೇಣುಕಾಚಾರ್ಯ, ಅಲ್ಲಿನ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದರು. ಇದೇ ವೇಳೆ ಚೆಕ್‌ಪೋಸ್ಟ್‌ನಲ್ಲಿ ಲಾರಿಯೊಂದು ಬಂದಾಗ ಚಾಲಕನಿಗೆ ಕೊರೊನಾ ಜಾಗೃತಿ ಮೂಡಿಸಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ತಿಳಿ ಹೇಳಿದರು.
ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಶುಕ್ರವಾರದಿಂದ 18 ವರ್ಷ ಮೇಲ್ಪಟ್ಟ 44 ವರ್ಷ ಒಳಗಿನ ಕೊರೊನಾ ವಾರಿಯರ್ ಗೆ ಹೊನ್ನಾಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಲಸಿಕೆ ನೀಡಲಾಗುತ್ತಿದೆ. 45 ವರ್ಷ ಮೇಲ್ಟಟ್ಟವರಿಗೆ ಕಿತ್ತೂರುರಾಣಿ ಚೆನ್ನಮ್ಮ ಸಮುದಾಯ ಭವನ ಸೇರಿದಂತೆ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಜನರು ಗೊಂದಲಕ್ಕೊಳಗಾಗದೆ ಲಸಿಕೆ ಹಾಕಿಸಿಕೊಳ್ಳಬೇಕೆಂದರು.
ಬಿಜೆಪಿಯ ಮಾಜಿ ತಾಲೂಕು ಅಧ್ಯಕ್ಷ ದೊಡ್ಡೇರಿ ಡಿ.ಜಿ. ರಾಜಪ್ಪ, ಸೋಮಶೇಖರ್, ಚನ್ನಯ್ಯ, ಗಿರೀಶ್ ಇದ್ದರು.