ದಾವಣಗೆರೆ: ನಗರದ ಬಾಪೂಜಿ ಆಸ್ಪತ್ರೆ ಮತ್ತು ಎಸ್.ಎಸ್. ಹೈಟೆಕ್ ಆಸ್ಪತ್ರೆಗಳ ಆವರಣದಲ್ಲಿ ತಲಾ ಒಂದೊಂದು ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡುವ ವಿಚಾರವಾಗಿ ಈಗಾಗಲೇ ಎರಡು ವಿದೇಶಿ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇನ್ನೊಂದು ತಿಂಗಳಿನಲ್ಲಿ ಕೆಲಸ ಪ್ರಾರಂಭ ಮಾಡಲಾಗುವುದು. ಒಂದು ಘಟಕಕ್ಕೆ ಎರಡೂವರೆ ಕೋಟಿ ರೂ. ವೆಚ್ಚ ತಗುಲಲಿದೆ ಎಂದರು.
ಬಾಪೂಜಿ ಆಸ್ಪತ್ರೆಗೂ ಚಿಗಟೇರಿ ಜಿಲ್ಲಾಸ್ಪತ್ರೆಗೂ ಸಂಬಂಧವಿದೆ. ಚಿಗಟೇರಿ ಆಸ್ಪತ್ರೆಯಲ್ಲಿ ಕೇವಲ 40 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದವರು ನಮ್ಮ ಆಸ್ಪತ್ರೆಗಳ ವೈದ್ಯರು, ತಜ್ಞರೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನಾವು ವೇತನ ಕೊಡುತ್ತಿದ್ದೇವೆ. ಆದರೂ ಕೆಲಸಕ್ಕೆ ಬಾರದ ಕೆಲವರು ನಮ್ಮನ್ನೇ ಹೀಯಾಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂಭತ್ತು ವೆಂಟಿಲೇಟರ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದವುಗಳ ನಿರ್ವಹಣೆ ಮಾಡಲು ತಜ್ಞರಿಲ್ಲವೆಂದು ಹಾಗೆಯೇ ಇಟ್ಟಿದ್ದಾರೆ. ಇದು ಆಡಳಿತ ವೈಫಲ್ಯ ಅಲ್ಲವೇ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ್, ಜಿಲ್ಲಾ ಧಿಕಾರಿಯವರು ತಮ್ಮೊಂದಿಗೆ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ವಾರ್ ರೂಂ ಸ್ಥಾಪಿಸಲಿ: ಕೊರೊನಾ ಸಂಕಷ್ಟದ ಕಾಲಘಟ್ಟದಲ್ಲಿ ಸರ್ಕಾರ ಮೊದಲಿಗೆ ವ್ಯಾಕ್ಸಿನ್ ಮತ್ತು ಆಕ್ಸಿಜನ್ ಬೆಡ್ ಗಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನಹರಿಸಬೇಕು.ಜಿಲ್ಲೆಯಲ್ಲಿ ಜಿಲ್ಲಾ ಧಿಕಾರಿಗಳ ಕಚೇರಿ ಅಥವಾ ಜಿಲ್ಲಾಸ್ಪತ್ರೆಯಲ್ಲಿ ವಾರ್ ರೂಂ ಸ್ಥಾಪಿಸಿ ಅದರ ಮೂಲಕ ಸೋಂಕಿತರಿಗೆ ಬೆಡ್‌ಗಳನ್ನು ನೀಡುವ ಕೆಲಸ ಮಾಡಬೇಕು. ಜೊತೆಗೆ ಸಮರ್ಪಕ ನಿರ್ವಹಣೆ ಮಾಡಬೇಕು. ಜನರ ಪ್ರಾಣ ರಕ್ಷಿಸಬೇಕಾಗಿರುವುದು ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ನಾವು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.
ಸಂಸದರು ದೆಹಲಿಗೆ ಹೋಗಲಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ರೆಮ್‌ಡಿಸಿವಿರ್, ಆಕ್ಸಿಜನ್ ಕೊರೊತೆ ಇದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರು ದೆಹಲಿ ಹೋಗಿ ಅಲ್ಲಿ ಮಾತನಾಡಿ ಜಿಲ್ಲೆಗೆ ಬೇಕಾದ ಅಗತ್ಯತೆಗಳನ್ನು ಪೂರೈಸುವಂತಾಗಬೇಕು. ಈಗ ಅಗತ್ಯವಿರುವುದು ಕೋವಿಡ್ ಸೆಂಟರ್ ಕೇರ್ ಅಲ್ಲ, ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಆದರೆ ಇದನ್ನು ಬಿಟ್ಟು ಸಂಸದರು ತಾವೇ ಜಿಲ್ಲಾ ಮಂತ್ರಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡರಾದ ಸೈಯದ್ ಸೈಫುಲ್ಲಾ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಚಮನ್ ಸಾಬ್, ಮಂಜುನಾಥ ಗಡಿಗುಡಾಳ್, ಇಟ್ಟಿಗುಡಿ ಮಂಜುನಾಥ, ಮುಖಂಡರಾದ ಮುದೇಗೌಡ್ರು ಗಿರೀಶ್, ದಿನೇಶ್ ಕೆ. ಶೆಟ್ಟಿ, ಗಣೇಶ್ ಹುಲ್ಮಮನಿ ಆಯೂಬ್ ಪೈಲ್ವಾನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.