ಹೊನ್ನಾಳಿ: ಆಕ್ಸಿಜನ್ ಕೊರತೆಯಿಂದ ಉಂಟಾಗಬಹುದಾಗಿದ್ದ ಎರಡನೇ ದೊಡ್ಡ ಅವಘಡವನ್ನು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಅಧಿಕಾರಿಗಳು ತಪ್ಪಿಸಿದ್ದಾರೆ.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ 44 ಮಂದಿ ಕೊರೊನಾ ಸೋಂಕಿತರು ಆಕ್ಸಿಜನ್ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ 11:30ರ ಹೊತ್ತಿಗೆ ಆಕ್ಸಿಜನ್ ಖಾಲಿಯಾಗುವ ಹಂತಕ್ಕೆ ಬಂದಿದೆ. ತಕ್ಷಣ ಆಸ್ಪತ್ರೆ ಆಡಳಿತಾ ಧಿಕಾರಿ ಡಾ| ಚಂದ್ರಪ್ಪ, ತಾಲೂಕು ಕಚೇರಿಯಲ್ಲಿ ಟಾಸ್ಕ್ಫೋಸ್ ಸಭೆಯಲ್ಲಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಮಾಹಿತಿ ನೀಡಿದರು.
ರೇಣುಕಾಚಾರ್ಯ ಅವರನ್ನು ತಕ್ಷಣ ಸಭೆಯನ್ನು ಮೊಟಕುಗೊಳಿಸಿದರು. ತಹಶೀಲ್ದಾರ್ ಬಸನಗೌಡ ಕೊಟೂರ, ಸಿಪಿಐ ದೇವರಾಜ್, ಪಿಎಸ್‌ಐ ಬಸವರಾಜ ಬಿರಾದಾರ್ ಅವರೊಂದಿಗೆ ಖಾಲಿ ಸಿಲಿಂಡರ್‌ಗಳನ್ನು ತೆಗೆದುಕೊಂಡು ಹರಿಹರದ ಸದರನ್ ಗ್ಯಾಸ್ ಕಂಪನಿಗೆ ಭೇಟಿ ನೀಡಿದರು. 21 ಜಂಬೋ ಸಿಲಿಂಡರ್ ವ್ಯವಸ್ಥೆ ಮಾಡಿಕೊಂಡು ಮಧ್ಯಾಹ್ನ 3:30ಕ್ಕೆ ಹೊನ್ನಾಳಿಗೆ ಧಾವಿಸಿ 44 ಜನರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
21 ಆಕ್ಸಿಜನ್ ಸಿಲಿಂಡರ್‌ಗಳು ಬುಧವಾರ ಬೆಳಗಿನ ಜಾವ 4:30 ರವರೆಗೆ ಸಾಕಾಗುತ್ತವೆ. ಮತ್ತೆ ತೊಂದರೆಯಾಗಬಾರದೆಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಿವಮೊಗ್ಗ ಜಿಲ್ಲಾಧಿ ಕಾರಿಗಳಿಗೆ ದೂರವಾಣಿ ಕರೆ ಮಾಡಿ ಭದ್ರಾವತಿಯಿಂದ 25 ಆಕ್ಸಿಜನ್ ಸಿಲಿಂಡರ್ ಗಳನ್ನು ರಾತ್ರಿ ವೇಳೆಗೆ ಕಳುಹಿಸಿಸಿಕೊಡುವಂತೆ ಕೇಳಿಕೊಂಡರು.
ಮೂರು ದಿನ ಸಂಪೂರ್ಣ ಲಾಕ್‌ಡೌನ್: ಹೊನ್ನಾಳಿ ಹಾಗೂ ನ್ಯಾಮತಿ ಪಟ್ಟಣಗಳು ಸೇರಿದಂತೆ ಎರಡು ತಾಲೂಕಿನ ಹಳ್ಳಿಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ, ಶುಕ್ರವಾರ ಹಾಗೂ ಶನಿವಾರ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲಾಗುವುದು ಎಂದು ತಹಶೀಲ್ದಾರ್ ಬಸನಗೌಡ ಕೋಟೂರು ತಿಳಿಸಿದ್ದಾರೆ.
ಬುಧವಾರದವರೆಗೆ ಎಂದಿನಂತೆ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಎಲ್ಲಾ ವಹಿವಾಟುಗಳು ನಡೆಯಲಿವೆ. ಈ ಸಂದರ್ಭದಲ್ಲಿ ಜನರು ಮೂರು ದಿನಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಖರೀಸಿ ಇಟ್ಟುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.