ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮ ಒಡೆತನದ ಎರಡು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸರ್ಕಾರಿ ಕೋಟಾದಲ್ಲಿ ಮೀಸಲಾದ ಬೆಡ್‌ಗಳನ್ನು ನೀಡುವ ಮೂಲಕ ಪ್ರಾಮಾಣಿಕತೆ ತೋರಬೇಕು ಎಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶಾಮನೂರು ಶಿವಶಂಕರಪ್ಪ 25 ವರ್ಷದಿಂದ ಶಾಸಕರಾಗಿದ್ದಾರೆ. ಸಂಸದರು, ಮಂತ್ರಿಯೂ ಆಗಿದ್ದಾರೆ. ದಕ್ಷಿಣ ದಲ್ಲಿ ಒಂದೇ ಒಂದು ಒಳ್ಳೆಯ ಆಸ್ಪತ್ರೆ ಮಾಡಿಲ್ಲ. ಈಗ ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ನಾಗರಿಕರಿಗೆ 2 ಲಕ್ಷ ಡೋಸ್ ಕೋವಿಡ್ ಲಸಿಕೆಗೆ 9 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ.
ಲಸಿಕೆಗೆ ಹಣ ನೀಡುವುದಕ್ಕಿಂತಲೂ ಮುಂಚೆ ಅವರ ಒಡೆತನದ ಎರಡು ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ನೀಡಬೇಕಾಗಿರುವ ತಲಾ 850 ಹಾಸಿಗೆಗಳನ್ನು ಪ್ರಾಮಾಣಿಕವಾಗಿ ನೀಡಬೇಕು. ಆ ನಂತರ ಲಸಿಕೆಗೆ ಹಣ ನೀಡಲಿ ಎಂದರು. ಕೊರೊನಾ ವಾರಿಯರ್ಸ್‌ಗೆ ಪೂರಕವಾಗಿ ಮಾತನಾಡಬೇಕು. ಯಾವುದೇ ಕಾರಣಕ್ಕೂ ಕಾಲು ಎಳೆಯುವ ಕೆಲಸ ಮಾಡಬಾರದು. ಕಾಂಗ್ರೆಸ್‌ನವರು ಮೊದಲು ಲಸಿಕೆ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡಿದರು.
ಈಗ ಲಸಿಕೆ ಇಲ್ಲ. ವೆಂಟಿಲೇಟರ್, ಆಕ್ಸಿಜನ್ ಇಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಇದು ರಾಜಕೀಯ ಮಾಡುವಂತಹ ಕಾಲ ಅಲ್ಲ. ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಮಾಡೋಣ. ಈಗ ರಾಜಕೀಯ ಬಿಟ್ಟು ಎಲ್ಲರೂ ಕೊರೊನಾ ವಿರುದ್ಧ ಹೋರಾಡೋಣ ಎಂದು ಹೇಳಿದರು. ಶಾಮನೂರು ಶಿವಶಂಕರಪ್ಪ ಒಡೆತನದ ಆಸ್ಪತ್ರೆಯಲ್ಲಿ ನಮ್ಮ ಸಂಬಂಧಿಕರೊಬ್ಬರು ಮೂರು ದಿನ ಚಿಕಿತ್ಸೆ ಪಡೆದು ವೆಂಟಿಲೇಟರ್‌ಗೆ ಹೋಗಿರಲಿಲ್ಲ. ಆದರೂ 53 ಸಾವಿರ ರೂಪಾಯಿ ಬಿಲ್ ಆಗಿದೆ. ಇಂತಹ ಅನೇಕ ಪ್ರಕರಣಗಳಿವೆ. ಒಂದು ರೀತಿಯ ಹಗಲು ದರೋಡೆ ನಡೆಸಲಾಗುತ್ತಿದೆ. ನಾಟಕ, ಸುಳ್ಳು, ಅಪಪ್ರಚಾರ ಬಿಟ್ಟು ಸರ್ಕಾರಕ್ಕೆ ಕೊಡಬೇಕಾದ ಬೆಡ್‌ಗಳನ್ನು ಪ್ರಾಮಾಣಿಕವಾಗಿ ಕೊಡಿ ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ರಾಜಕೀಯ ಮಾಡುವ ಬದಲಿಗೆ ಮಾನವೀಯತೆ ಮೆರೆಯಬೇಕು. ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಆದರೆ ಕಾಂಗ್ರೆಸ್‌ನವರು ಆರೋಪ, ಟೀಕೆ ಮಾಡುವ ಮೂಲಕ ಕೊರೊನಾ ವಾರಿಯರ್‌ಗಳ ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಲಸಿಕೆ ಬಂದಾಗ ಇಲ್ಲ ಸಲ್ಲದ ಅಪಪ್ರಚಾರ ಮಾಡುವ ಮೂಲಕ ಜನರ ದಾರಿ ತಪ್ಪಿಸಿದವರೇ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಆಕ್ಸಿಜನ್, ವೆಂಟಿಲೇಟರ್ ಕೊರತೆ ಇದೆ. ಆದರೂ ಸಂಸದ ಸಿದ್ದೇಶ್ವರ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿ ದ್ದಾರೆ.
ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಖಂಡನೀಯ. ಜಿಲ್ಲಾಧಿಕಾರಿಗಳ ಜೊತೆ ಹಲವಾರು ಕಡೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಸುಸೂತ್ರವಾಗಿ ನಡೆಯವಂತೆ ಮಾಡಿದ್ದಾರೆ. ಬಾಪೂಜಿ, ಎಸ್.ಎಸ್. ಆಸ್ಪತ್ರೆಯಲ್ಲಿ 1,100 ಹಾಸಿಗೆ ನೀಡಬೇಕಾಗಿರುವ ಜಾಗದಲ್ಲಿ ಒಟ್ಟು 115 ಹಾಸಿಗೆ ಮಾತ್ರ ಸರ್ಕಾರಕ್ಕೆ ನೀಡಲಾಗಿದೆ. ಸರ್ಕಾರದ ಕೋಟಾದಂತೆ ಹಾಸಿಗೆ ನೀಡಿ ಪ್ರಾಮಾಣಿಕತೆ ತೋರಲಿ. ಕಾಂಗ್ರೆಸ್‌ನ ಮಾಜಿ ಸಚಿವರು ಎಲ್ಲಿಗೆ ಭೇಟಿ ನೀಡಿದ್ದಾರೆ, ಎಷ್ಟು ಜನರಿಗೆ ಸಾಂತ್ವನ ಹೇಳಿದ್ದಾರೆ ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪ್ರಚಾರಕ್ಕಾದರೂ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಆಪತ್ಕಾಲದಲ್ಲಿ ದೂಷಣೆ ಮಾಡುವುದನ್ನು ಬಿಟ್ಟು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಲಿ. ಮಹಾನಗರ ಪಾಲಿಕೆಯಿಂದ ಸಾಕಷ್ಟು ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು. ಜಿಲ್ಲಾ ಉಪಾಧ್ಯಕ್ಷ ಜಿ. ಮಂಜು ನಾಯ್ಕ, ವಕ್ತಾರ ಡಿ.ಎಸ್. ಶಿವಶಂಕರ್, ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿದ್ದರು.