Advertisement

‌ಕರ್ಫ್ಯೂ ಮಧ್ಯೆಯೂ ಜಲ ಸಂರಕ್ಷಣೆ ಕೈಂಕರ್ಯ

08:28 PM May 19, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ನಗರ, ಮಹಾನಗರಗಳನ್ನು ತೊರೆದು ಗ್ರಾಮೀಣ ಪ್ರದೇಶಗಳಿಗೆ ಮರಳಿರುವ ಜನರು, ನರೇಗಾ ಯೋಜನೆಯಡಿ ಉದ್ಯೋಗ ಪಡೆದುಕೊಂಡು ಜಲ ಸಂರಕ್ಷಣೆ ಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಲಶಕ್ತಿ ಅಭಿಯಾನ ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್‌ ಇಲಾಖೆ, ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಬಂದವರಿಗೆ ಹೊಸದಾಗಿ ಉದ್ಯೋಗ ಚೀಟಿ ನೀಡಿ, ಜಲಶಕ್ತಿ ಅಭಿಯಾನ ಯೋಜನೆಯಡಿ ಜಲ ಸಂರಕ್ಷಣೆಯ ವಿವಿಧ ಕಾಮಗಾರಿಗಳಲ್ಲಿ ತೊಡಗಿಸಿದೆ. ಕರ್ಫ್ಯೂ ಕಾರಣದಿಂದಾಗಿ ಮಹಾನಗರಗಳಿಂದ ವಲಸೆ ಬಂದವರಿಗೆ ಹಾಗೂ ಸ್ಥಳೀಯವಾಗಿ ಬೇರೆ ಬೇರೆ ಕೆಲಸ ಮಾಡುತ್ತಿದ್ದವರಿಗೆ ಉದ್ಯೋಗ ಖಾತ್ರಿ ಯೋಜನೆ ದುಡಿಯುವ ಕೈಗಳಿಗೆ ಕೆಲಸ ನೀಡಿ ಆಸರೆಯಾಗಿದೆ. ಏಪ್ರಿಲ್‌ ಹಾಗೂ ಮೇ ಎರಡು ತಿಂಗಳಲ್ಲಿ ಸಾವಿರಾರು ಜನರು ಹೊಸದಾಗಿ ಉದ್ಯೋಗ ಚೀಟಿ ಪಡೆದು ನರೇಗಾ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಏನೇನು ಕಾಮಗಾರಿ?: ಜಲಶಕ್ತಿ ಅಭಿಯಾನದಡಿ ಹಳ್ಳಿಗಳಲ್ಲಿ ಸಮಗ್ರ ಕೆರೆ ಅಭಿವೃದ್ಧಿ, ನಾಲಾ ದುರಸ್ತಿ, ಕಲ್ಯಾಣಿ ದುರಸ್ತಿ, ಗೋಕಟ್ಟೆ ನಿರ್ಮಾಣ, ಮಳೆಕೊಯ್ಲು, ಚೆಕ್‌ಡ್ಯಾಮ್‌ ನಿರ್ಮಾಣ, ಇಂಗುಗುಂಡಿ ನಿರ್ಮಾಣ, ಜಲಮರುಪೂರಣ, ಅರಣೀಕರಣ, ಕೃಷಿ ಹೊಂಡ, ಜಮೀನುಗಳಲ್ಲಿ ಬದುಹೊಂಡ ನಿರ್ಮಾಣ, ನಾಲಾ ಪುನಶ್ಚೇತನ, ತೆರೆದಬಾವಿ ಪುನಶ್ಚೇತನದಂಥ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಕಾರ್ಮಿಕರು ಈ ಕಾಮಗಾರಿಗಳನ್ನು ಮಾಡುವ ಮೂಲಕ ಪರೋಕ್ಷವಾಗಿ ಜಲಸಂರಕ್ಷಣೆಯ ಕಾಯಕಕ್ಕೆ ಕೈಜೋಡಿಸಿದಂತಾಗಿದೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಗಳು ಚುರುಕಾಗಿ ನಡೆಯುತ್ತಿದ್ದು ಜನರಿಗೆ ಉದ್ಯೋಗ ನೀಡುವ ಜತೆಗೆ ಜಲಮೂಲಗಳ ರಕ್ಷಣೆಯ ಕೆಲಸವೂ ಆಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರಿಗೆ ನೀರು, ನೆರಳು, ಪ್ರಥಮ ಚಿಕಿತ್ಸೆಗಾಗಿ ವೈದ್ಯಕೀಯ ಕಿಟ್‌ ವ್ಯವಸ್ಥೆ ಮಾಡಿದ್ದು ಕೂಲಿ ಕಾರ್ಮಿಕರ ಆರೋಗ್ಯದ ಮೇಲೆಯೂ ನಿಗಾ ವಹಿಸಲಾಗಿದೆ. ಹೀಗಾಗಿ ದಿನದಿಂದ ದಿನಕ್ಕೆ ನರೇಗಾ ಉದ್ಯೋಗ ಅರಸಿ ಬರುವವರ ಸಂಖ್ಯೆ ಅಧಿಕವಾಗುತ್ತಿದ್ದು ಹೊಸದಾಗಿ ಬರುವವರಿಗೆಲ್ಲ ಉದ್ಯೋಗ ಚೀಟಿ ನೀಡಿ ಉದ್ಯೋಗ ನೀಡಲಾಗುತ್ತಿದೆ.

Advertisement

ಕಾಮಗಾರಿ ವಿವರ: ಜಿಲ್ಲೆಯಲ್ಲಿ ಸಮಗ್ರ ಕೆರೆ ಅಭಿವೃದ್ಧಿಗಾಗಿ 41 ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಇವುಗಳಲ್ಲಿ 17 ಕಾಮಗಾರಿಗಳು ಪ್ರಗತಿಯಲ್ಲಿವೆ. ನಾಲಾ ದುರಸ್ತಿಗೆ ಸಂಬಂಧಿಸಿ 125 ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು ಇವುಗಳಲ್ಲಿ 37 ಕಾಮಗಾರಿಗಳು ಪ್ರಗತಿಯಲ್ಲಿವೆ. ಕಲ್ಯಾಣಿ ದುರಸ್ತಿಗಾಗಿ ಆರು ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿದ್ದು ಎರಡು ಕಾಮಗಾರಿ ನಡೆಯುತ್ತಿವೆ. ಇನ್ನು ಗೋಕಟ್ಟೆ ನಿರ್ಮಾಣಕ್ಕಾಗಿ 19 ಕಾಮಗಾರಿಗಳಿಗಾಗಿ ಕ್ರಿಯಾಯೋಜನೆ ತಯಾರಿಸಲಾಗಿದ್ದು ಇವುಗಳಲ್ಲಿ ಆರು ಕಾಮಗಾರಿಗಳ ಕೆಲಸ ಮುಂದುವರಿದಿದೆ.

ಮಳೆ ಕೊಯ್ಲಿಗಾಗಿ 20 ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು ಮೂರು ಕಾಮಗಾರಿಗಳು ಪ್ರಗತಿಯಲ್ಲಿವೆ. ಚೆಕ್‌ಡ್ಯಾಮ್‌ ನಿರ್ಮಾಣಕ್ಕೆ ಸಂಬಂಧಿಸಿ ಒಂದು ಕ್ರಿಯಾಯೋಜನೆ ತಯಾರಿಸಲಾಗಿದ್ದು ಇನ್ನಷ್ಟೇ ಆರಂಭವಾಗಬೇಕಿದೆ. ಇಂಗುಗುಂಡಿಗೆ ಸಂಬಂಧಿಸಿ 64 ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು 239 ಕಾಮಗಾರಿಗಳು ಪ್ರಗತಿಯಲ್ಲಿವೆ. ಜಲಪುನಶ್ಚೇತನಕ್ಕೆ ಸಂಬಂಧಿಸಿ ಆರು ಕಾಮಗಾರಿಗಳಿಗೆ, ಅರಣ್ಯೀಕರಣಕ್ಕಾಗಿ ಒಂದು ಕಾಮಗಾರಿಯ ಕ್ರಿಯಾಯೋಜನೆ ತಯಾರಾಗಿದ್ದು ಕಾಮಗಾರಿ ಆರಂಭಿಸಲು ಸಿದ್ಧತೆ ನಡೆದಿದೆ. ಕೃಷಿ ಹೊಂಡ ನಿರ್ಮಾಣಕ್ಕೆ ಸಂಬಂಧಿಸಿ 121ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು, 34 ಕಾಮಗಾರಿಗಳ ಕೆಲಸ ನಡೆಯುತ್ತಿದೆ. ಜಮೀನುಗಳಲ್ಲಿ ಬದು ನಿರ್ಮಾಣಕ್ಕೆ ಸಂಬಂಧಿಸಿದಂತೆ 182 ಕಾಮಗಾರಿಗಳನ್ನು ಮಾಡಲು ಯೋಜನೆ ರೂಪಿಸಿದ್ದು 117 ಕಾಮಗಾರಿಗಳಲ್ಲಿ ಕೆಲಸ ಭರದಿಂದ ಸಾಗಿದೆ.

ಒಟ್ಟಾರೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಉದ್ಯೋಗ ಕೊಡುವ ಮೂಲಕ ಜಲರಕ್ಷಣೆಯ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆದಿದ್ದು ಸಾವಿರಾರು ಜನರು ಇದರಲ್ಲಿ ತೊಡಗಿಕೊಂಡಿರುವುದು ಉತ್ತಮ ಬೆಳವಣಿಗೆ.

Advertisement

Udayavani is now on Telegram. Click here to join our channel and stay updated with the latest news.

Next