Advertisement

ಕೊರೊನಾ ಸಂಕಷ್ಟದಲ್ಲೂ ಉದ್ಯೋಗ ಖಾತ್ರಿ

08:42 PM May 18, 2021 | Team Udayavani |

„ರಾ. ರವಿಬಾಬು

Advertisement

ದಾವಣಗೆರೆ: ಮಹಾಮಾರಿ ಕೊರೊನಾ ಹಾವಳಿಯಿಂದ ಕೈಯಲ್ಲಿದ್ದ ಕೆಲಸ ಕಳೆದುಕೊಂಡಂತಹವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜೀವನ ನಿರ್ವಹಣೆಯ ಪ್ರಮುಖ ಆಸರೆಯಾಗಿದೆ ಎನ್ನುವುದಕ್ಕೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಖಾತ್ರಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಜ್ವಲಂತ ಸಾಕ್ಷಿ. ಕೊರೊನಾ, ಕರ್ಫ್ಯೂ ಪರಿಣಾಮ ನಗರ ಪ್ರದೇಶದಲ್ಲಿನ ಅನೇಕರು ಕೈಯಲ್ಲಿದ್ದ ಕೆಲಸ ಕಳೆದುಕೊಂಡು ಗ್ರಾಮೀಣ ಭಾಗಗಳಿಗೆ ಹಿಂತಿರುಗಿದ್ದಾರೆ.

ಹಳ್ಳಿಗಳಲ್ಲೂ ಕೂಲಿ ಕೆಲಸ ಕಡಿಮೆ ಆಗುತ್ತಿರುವ ಸಂಕಷ್ಟದ ಸಮಯದಲ್ಲಿ ಅನೇಕರಿಗೆ ಉದ್ಯೋಗ ಖಾತ್ರಿ ಯೋಜನೆ ಕೈ ಹಿಡಿಯುವ ಮೂಲಕ ಜೀವನಕ್ಕೆ ಆಸರೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಪ್ರತಿ ನಿತ್ಯ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕೆಲಸ ಮಾಡುತ್ತಿದ್ದಾರೆ. ಗಂಡು ಮತ್ತು ಹೆಣ್ಣುಮಕ್ಕಳಿಗೆ ಪ್ರತಿ ದಿನ 285 ರೂ. ದೊರೆಯುತ್ತಿದೆ. 15 ದಿನಗಳಲ್ಲಿ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗುವುದರಿಂದ ನಿರಾಂತಕವಾಗಿ ಕೆಲಸ ಮಾಡುತ್ತಿದ್ದಾರೆ.

ದಾವಣಗೆರೆ ತಾಲೂಕಿನ ಆನಗೋಡು, ಆಲೂರು, ಐಗೂರು, ಕಂದನಕೋವಿ, ಅಣಜಿ, ಗುಡಾಳ್‌, ಹೆಬ್ಟಾಳು, ಕುರ್ಕಿ, ಹೊನ್ನೂರು, ಕೈದಾಳೆ, ಕೊಡಗನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆರೆ, ಹೊಂಡ, ಗೋಕಟ್ಟೆ, ಕಾಲುವೆ, ಹಳ್ಳಗಳಲ್ಲಿನ ಹೂಳೆತ್ತುವ ಕೆಲಸದಲ್ಲಿ ಒಟ್ಟು 1,144 (643 ಮಹಿಳೆಯರು, 501 ಪುರುಷರು,) ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈವರೆಗೆ 2969 ಮಾನವ ದಿನಗಳ ಸೃಜಿಸಲಾಗಿದೆ. ಮಹಿಳೆಯರೇ ಖಾತ್ರಿ ಯೋಜನೆಯಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದಾರೆ.

ಆನಗೋಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು 42 ಜನ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. 19 ಮಹಿಳೆಯರು, 23 ಗಂಡು ಮಕ್ಕಳು ಹೊಂಡ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದು, 138 ಮಾನವ ದಿನಗಳ ಸೃಜಿಸಲಾಗಿದೆ. ಆಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 51 ಮಹಿಳೆಯರು, 68 ಪುರುಷರುಒಳಗೊಂಡಂತೆ 119 ಜನ ಕೂಲಿಕಾರರು ಕೆಲಸ ಮಾಡುತ್ತಿದ್ದು, 639 ಮಾನವ ದಿನಗಳನ್ನು ಸೃಜಿಸಲಾಗಿದೆ. ಐಗೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 1843 ಮಾನವ ದಿನಗಳನ್ನು ಸೃಜಿಸಲಾಗಿದೆ.

Advertisement

ಇಲ್ಲಿ 175 ಹೆಣ್ಣು, 124 ಪುರುಷರು ಹಳ್ಳದ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಕಂದನಕೋವಿ ಗ್ರಾಮದಲ್ಲಿ 18 ಮಹಿಳೆಯರು, 17 ಜನ ಗಂಡುಮಕ್ಕಳು ಗೋಕಟ್ಟೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. 349 ಮಾನವ ದಿನಗಳ ನಿರ್ಮಾಣವಾಗಿವೆ.

ಹೊಸ ಕಾಮಗಾರಿ: ಅಣಜಿ, ಗುಡಾಳ್‌, ಹೆಬ್ಟಾಳು, ಕುರ್ಕಿ, ಹೊನ್ನೂರು, ಕೈದಾಳೆ, ಕೊಡಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೊಸ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. ಅಣಜಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟಾರೆ 39 ಜನ ಕೂಲಿಕಾರರು ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದು, 13 ಮಹಿಳೆಯರು, 26 ಜನ ಗಂಡುಮಕ್ಕಳು ಕೆಲಸ ನಿರ್ವಹಿಸುತ್ತಿದ್ದಾರೆ. ಗುಡಾಳ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಳ್ಳ ಹೂಳೆತ್ತುವ ಕೆಲಸದಲ್ಲಿ 25 ಹೆಣ್ಣುಮಕ್ಕಳು, 18 ಜನ ಪುರುಷರು ಒಳಗೊಂಡಂತೆ 43 ಜನರು ಖಾತ್ರಿ ಕೆಲಸದಲ್ಲಿ ನಿರತರಾಗಿದ್ದಾರೆ.

ಕೈದಾಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು 227 ಜನರು ಕೆಲಸ ಮಾಡುತ್ತಿದ್ದಾರೆ. 140 ಮಹಿಳೆಯರು, 87 ಪುರುಷರು ಕಾಲುವೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ನೀರಾವರಿ ಪ್ರದೇಶ ಆಗಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೆಲಸಗಳು ಕಡಿಮೆಯಾದರೂ ಗ್ರಾಮ ಪಂಚಾಯತ್‌ ಆಡಳಿತ ಮಂಡಳಿ, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಆಸಕ್ತಿಯಿಂದ ಅರಸಿ ಬಂದಂತಹವರಿಗೆ ಕೆಲಸ ನೀಡಲಾಗುತ್ತಿದೆ.

ಹೆಬ್ಟಾಳು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕೆರೆ ಹೂಳೆತ್ತುವ ಕೆಲಸದಲ್ಲಿ 72 ಮಹಿಳೆಯರು, 51 ಜನ ಗಂಡು ಮಕ್ಕಳು ಸೇರಿದಂತೆ 123 ಜನರು ಕೆಲಸ ಮಾಡುತ್ತಿದ್ದಾರೆ. ಹೊನ್ನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 102 ಜನರು ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ.

72 ಮಹಿಳೆಯರು, 30 ಪುರುಷರು ಇದ್ದಾರೆ. ಕೊಡಗನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 22 ಮಹಿಳೆಯರು, 23 ಪುರುಷರು ಒಳಗೊಂಡಂತೆ 45 ಕೂಲಿಕಾರರು ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿನ ಕೆರೆ, ಹಳ್ಳ, ಗೋಕಟ್ಟೆಯಲ್ಲಿನ ಹೂಳೆತ್ತುವ ಕೆಲಸದಿಂದ ಕೊರೊನಾ ಸಂಕಷ್ಟದಲ್ಲಿ ಕೆಲಸದ ಅಗತ್ಯ ಇದ್ದವರಿಗೆ ಕೆಲಸ ದೊರೆಯುತ್ತಿದೆ.

ಜತೆಗೆ ಮಳೆಯಿಂದ ಕೆರೆ, ಗೋಕಟ್ಟೆಗಳಲ್ಲಿ ನೀರು ಸಂಗ್ರಹವಾಗುವುದು ಅಂತರ್ಜಲ ಹೆಚ್ಚಳದ ಜೊತೆಗೆ ಜಾನುವಾರುಗಳಿಗೆ ಅನುಕೂಲ ಆಗಲಿದೆ.

ಲಾಕ್‌ಡೌನ್‌ನಿಂದ ಅನೇಕರು ನಗರ ಪ್ರದೇಶ ಬಿಟ್ಟು ಹಳ್ಳಿಗಳಿಗೆ ತೆರಳಿದ್ದಾರೆ. ಅಂತಹವರ ಅನುಕೂಲಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು ಕೆಲಸ ದೊರೆಯುವಂತಾಗಬೇಕು. ಸಾಕಷ್ಟು ಜನರು ಕೂಲಿಯನ್ನೇ ನಂಬಿ ಜೀವನ ಮಾಡುತ್ತಿರುತ್ತಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಖಾತ್ರಿ ಯೋಜನೆಯಡಿ ಹೆಚ್ಚು ಕೆಲಸ ನೀಡಿದರೆ ಸಾಕಷ್ಟು ಅನುಕೂಲ ಆಗುತ್ತದೆ.

ಮಮತಾ ಮಲ್ಲೇಶಪ್ಪ, ಅಧ್ಯಕ್ಷರು, ದಾವಣಗೆರೆ ತಾಪಂ

Advertisement

Udayavani is now on Telegram. Click here to join our channel and stay updated with the latest news.

Next