Advertisement
ಭರಮಸಾಗರ : ಕೊರೊನಾ ವೈರಾಣು ದಿನದಿಂದ ದಿನಕ್ಕೆ ಹಳ್ಳಿಗಳತ್ತ ತನ್ನ ಕಬಂಧ ಬಾಹು ಚಾಚುತ್ತಿದ್ದು, ಹಳ್ಳಿಗರನ್ನು ಹೈರಾಣವಾಗಿಸುತ್ತಿದೆ. ಭರಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರನ್ನು ಕೊರೊನಾ ಬೆಂಬಿಡದೆ ಕಾಡಲು ಆರಂಭಿಸಿದೆ. ಕಳೆದ ಕೆಲ ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ. ಅಕ್ಸಿಜನ್, ವೆಂಟಿಲೇಟರ್, ಐಸಿಯು ಸೇರಿದಂತೆ ಕೊರೊನಾ ಸಂಬಂಧಿತ ಚಿಕಿತ್ಸೆಗಾಗಿ ಜನರು ಜಿಲ್ಲಾ ಕೇಂದ್ರಗಳಲ್ಲಿನ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
Related Articles
Advertisement
ಕೋಗುಂಡೆ-7, ಕೊಳಹಾಳು, ಭರಮಸಾಗರ, ಕೆ.ಜಿ. ಹಟ್ಟಿ, ಎಮ್ಮೆಹಟ್ಟಿ, ಹೆಗ್ಗೆರೆ, ಹಂಪನೂರು ಮತ್ತಿತರರ ಗ್ರಾಮಗಳಲ್ಲಿ 29 ಕೊರೊನಾ ಪ್ರಕರಣಗಳಿವೆ. ಜನರಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಕುರಿತು ಜಾಗೃತಿ ಇಲ್ಲದ ಕಾರಣ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹೊರಗಿನಿಂದ ಬಂದವರಿಂದಲೇ ಸೋಂಕು: ದಾವಣಗೆರೆ ಸೇರಿದಂತೆ ಇತರೆ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನಿಂದ ಬಂದವರಿಂದಲೂ ಕೊರೊನಾ ಹಬ್ಬಿರುವ ಶಂಕೆಯಿದೆ. ಹೆಚ್ಚು ಕೇಸ್‌ಗಳಿರುವ ಹಳ್ಳಿಗಳಲ್ಲಿ ಸೀಲ್‌ಡೌನ್ ಮಾಡಿಕೊಳ್ಳಲು ಸಲಹೆ ನೀಡಲಾಗುತ್ತಿದೆ. ಜನರ ಓಡಾಟ ಇಲ್ಲದಂತೆ ಒಂದು ವಾರದ ಮಟ್ಟಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚಿತ್ರದುರ್ಗ ತಾಲೂಕು ವೈದ್ಯಾಧಿ ಕಾರಿ ಡಾ| ಗಿರೀಶ್ ತಿಳಿಸಿದ್ದಾರೆ.
ಪಾಸಿಟಿವ್ ಕೇಸ್‌ಗಳು ಕಂಡುಬಂದಲ್ಲಿ ಮಾತ್ರ ಅಂಥ ಕುಟುಂಬದವರಿಗೆ ಅಥವಾ ಒಂದಕ್ಕಿಂತ ಹೆಚ್ಚು ಕೇಸ್‌ಗಳಿದ್ದಲ್ಲಿ ಅಂತಹ ಹಳ್ಳಿಯಲ್ಲಿ ರ್‍ಯಾಂಡಮ್ ಆಗಿ ತಪಾಸಣೆ ನಡೆಸಲಾಗುತ್ತಿರುವುದನ್ನು ಬಿಟ್ಟರೆ ಮೊದಲ ಕೊರೊನಾ ಅಲೆ ವೇಳೆ ಕಂಡುಬಂದಂತಹ ಆಸ್ಪತ್ರೆಗಳ ವತಿಯಿಂದಲೇ ಸಾಮೂಹಿಕ ತಪಾಸಣೆ ನಡೆಸುವ ಕಾರ್ಯವನ್ನು ಎರಡನೇ ಅಲೆ ಶುರುವಾದಗಿನಿಂದ ಕೈಬಿಡಲಾಗಿದೆ. ಹೋಂ ಐಸೋಲೇಷನ್‌ಗೆ ಒಳಪಟ್ಟವರ ಸಮರ್ಪಕ ಮಾಹಿತಿ ಆಸ್ಪತ್ರೆಗಳ ಬಳಿ ಇಲ್ಲ.
ಸೋಂಕಿತರ ಪತ್ತೆ ಕಾರ್ಯವೂ ಆಗ್ತಿಲ್ಲ: ಎಮ್ಮೆಹಟ್ಟಿ, ಬೇವಿನಹಳ್ಳಿ, ಭರಮಸಾಗರ, ಬಹದ್ದೂರ್‌ಘಟ್ಟ, ಕಾಲಗೆರೆ, ಹಂಪನೂರು, ಬಸವನಶಿವನಕೆರೆ, ಸೇರಿದಂತೆ ಪ್ರಮುಖ ಹಳ್ಳಿಗಳಲ್ಲಿ ಕೊರೊನಾ ಸಂಬಂಧ ಸಾವುಗಳಾಗಿವೆ. ರೋಗ ಲಕ್ಷಣಗಳಿರುವ ಜನರು ಇಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗಳಲ್ಲೇ ಚಿಕಿತ್ಸೆ ಮುಂದುವರೆಸುತ್ತಿದ್ದಾರೆ. ಇವರೆಲ್ಲಾ ಸರ್ಕಾರಿ ಲೆಕ್ಕದಿಂದ ಕೈ ಬಿಟ್ಟು ಹೋಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಅವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಕಾಯಿಲೆ ಬಿಗಡಾಯಿಸಿದಾಗ ಜಿಲ್ಲಾಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ಜಾಗೃತಿ ಮೂಡಿಸುವಲ್ಲಿ ಕ್ರಿಯಾಶೀಲರಾಗಬೇಕಾದ ಗ್ರಾಪಂಗಳು ಧ್ವನಿವರ್ಧಕಗಳ ಮೂಲಕ ಕೊರೊನಾ ಜಾಗೃತಿ ಮೂಡಿಸಿ ಸ್ಯಾನಿಟೈಸ್ ಮಾಡಿಸಿ ಕೈತೊಳೆದುಕೊಳ್ಳುತ್ತಿವೆ. ಜನಪ್ರತಿನಿಧಿಗಳು ಕೊರೊನಾ ರೋಗಿಗಳ ನೆರವಿಗೆ ಧಾವಿಸುತ್ತಿಲ್ಲ ಎಂಬ ಆರೋಪಗಳಿವೆ.
ಭರಮಸಾಗರ ಹೋಬಳಿ ವ್ಯಾಪ್ತಿಯಗ್ರಾಮಗಳ ಜನರಿಗೆ ಜಿಲ್ಲಾಸ್ಪತ್ರೆ, ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ನರಳಾಟ ನಡೆಸುತ್ತಿದ್ದಾರೆ. ಸಂಬಂಧಿಸಿದವರು ಕೂಡಲೇ ಕೊರೊನಾ ಸೋಂಕಿತರ ನೆರವಿಗೆ ಧಾವಿಸಬೇಕಾದ ಅವಶ್ಯಕತೆ ಇದೆ.