ದಾವಣಗೆರೆ: ಕೊರೊನಾ ನಿಯಂತ್ರಣ, ಅಗತ್ಯ ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಇತರೆ ಸೌಲಭ್ಯ ಒದಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ದೂರಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರಗಳು ಉಪ ಚುನಾವಣೆ ಮುಂದೂಡಿ ಕೊರೊನಾ ನಿಯಂತ್ರಣಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದಿತ್ತು. ಆದರೆ ಜನರ ಆರೋಗ್ಯ, ಜೀವ ರಕ್ಷಣೆಗಿಂತ ಚುನಾವಣೆಯೇ ಮುಖ್ಯವಾಗಿತ್ತು. ಕೊರೊನಾ ಉಲ್ಬಣಗೊಂಡ ನಂತರವೂ ಅಗತ್ಯ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮಾತ್ರ ಪರಿಹಾರ ಅಲ್ಲ. ಲಸಿಕೆಯನ್ನು ಹೆಚ್ಚೆಚ್ಚು ನೀಡುವಂತಾಗಬೇಕು. ಆದರೆ ಸರ್ಕಾರಗಳು ಕೋವಿಡ್ ಲಸಿಕೆ ಪೂರೈಸುವಲ್ಲಿ ವಿಫಲವಾಗಿವೆ. ಕೂಡಲೇ ಸಮರ್ಪಕವಾಗಿ ಲಸಿಕೆ, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಕ್ಸಿಜನ್, ವೆಂಟಿಲೇಟರ್ ಇತರೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ದಾವಣಗೆರೆ ಸಂಸದರು ಬರೀ ಫೋಟೋಕ್ಕೆ ಫೋಸ್ ಕೊಡುವುದರಿಂದ ಏನೂ ಆಗುವುದಿಲ್ಲ. ಸೋಂಕಿತರಿಗೆ ಅತಿ ಅಗತ್ಯವಾದ ರೆಮ್‌ಡಿಸಿವರ್ ಇಂಜೆಕ್ಷನ್, ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯ ಒದಗಿಸುವತ್ತ ಹೆಚ್ಚು ಗಮನ ನೀಡಬೇಕು. ಬಿಜೆಪಿ ಸಂಸದರು, ಮುಖ್ಯಮಂತ್ರಿಗಳಿಗೆ ರಾಜ್ಯಕ್ಕೆ ಬೇಕಾದ ಸವಲತ್ತುಗಳ ಬಗ್ಗೆ ಪ್ರಧಾನಮಂತ್ರಿ ಮುಂದೆ ನಿಂತು ಕೇಳುವ ಶಕ್ತಿ ಇಲ್ಲ. ಹಾಗಾಗಿ ರಾಜ್ಯಕ್ಕೆ ದೊರೆಯಬೇಕಾದ ಸೌಲಭ್ಯ ದೊರಕುತ್ತಿಲ್ಲ ಎಂದ ವಾಗ್ಧಾಳಿ ನಡೆಸಿದರು.
ಬಿಜೆಪಿ ಮುಖಂಡರು ನ್ಯಾಯಾಧೀಶರ ಬಗ್ಗೆಯೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನ್ಯಾಯಾಂಗ ನಿಂದನೆ ಮಾಡುವಂತೆ ಹೇಳಿಕೆ ನೀಡುತ್ತಾರೆ. ಉದ್ಧಟತನದ ಹೇಳಿಕೆ ನೀಡುವಂತಹವರು ಜನಸಾಮಾನ್ಯರಿಗೆ ನ್ಯಾಯ ಕೊಡಿಸಬಲ್ಲರೇ ಎಂಬ ಪ್ರಶ್ನೆ ಉದ್ಬವವಾಗುತ್ತದೆ ಎಂ ಮಂಜಪ್ಪ, ಕೊರೊನಾ ಕರ್ಫ್ಯೂನಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಸೂಕ್ತ ಪ್ಯಾಕೇಜ್, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ಆಮ್ಲಜನಕ ಕೊರತೆಯಿಂದ ಚಾಮರಾಜನಗರದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲಾಧಿಕಾರಿಗಳು ದಾನಿಗಳಿಂದ ನೆರವು ಕೋರಿರುವುದನ್ನ ನೋಡಿದರೆ ರಾಜ್ಯ ಸರ್ಕಾರ ಎಷ್ಟು ದಿವಾಳಿತನಕ್ಕೆ ಬಂದಿದೆ ಎಂಬುದು ಗೊತ್ತಾಗುತ್ತದೆ ಎಂದು ಕುಟುಕಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಮಹಾನಗರ ಪಾಲಿಕೆಯಿಂದ ದಿನಕ್ಕೆ ಕನಿಷ್ಠ 30-40 ಮರಣ ಪ್ರಮಾಣಪತ್ರ ಕೊಂಡೊಯ್ಯಲಾಗುತ್ತಿದೆ. ಆದರೆ ಕೊರೊನಾದಿಂದ ಸಾವಿನ ಸಂಖ್ಯೆ ಕಡಿಮೆ ತೋರಿಸಿ ಎಲ್ಲವನ್ನೂ ಮುಚ್ಚಿಡಲಾಗುತ್ತಿದೆ. ಕೊರೊನಾ ಲಸಿಕೆಗಾಗಿ ಜನರು ಪ್ರತಿ ದಿನ ಅಲೆದಾಟ ನಡೆಸುತ್ತಿದ್ದಾರೆ.
ಎರಡು ಕಂಪನಿಗಳಿಗೆ ಮಾತ್ರವೇ ನೀಡಿರುವುದರಿಂದ ತೊಂದರೆ ಆಗುತ್ತಿದೆ. ಆದ್ದರಿಂದ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾರ್ಯದರ್ಶಿ ಎ. ನಾಗರಾಜ್ ಮಾತನಾಡಿ, ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿರುವ 31 ವೆಂಟಿಲೇಟರ್ ಪೈಕಿ 12 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಬಹಳಷ್ಟು ಸೋಂಕಿತರು ವೆಂಟಿಲೇಟರ್ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಒಂದು ವರ್ಷವಾದರೂ ವೆಂಟಿಲೇಟರ್‌ಗಳ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿಲ್ಲ. ಲಸಿಕೆ ಪೂರೈಕೆಯ ಹುಳುಕು ಮುಚ್ಚಿಕೊಳ್ಳಲು ಎರಡನೇ ಡೋಸ್ ಅವಧಿ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.
ಜಿಲ್ಲಾ ವಕ್ತಾರ ಎಂ. ನಾಗೇಂದ್ರಪ್ಪ ಮಾತನಾಡಿ, ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತನೊಬ್ಬನಿಗೆ ನೀಡುತ್ತಿದ್ದ ಆಕ್ಸಿಜನ್ ಪೂರೈಕೆಯನ್ನೇ ನಿಲ್ಲಿಸಿ ಅದೇ ಸಿಲಿಂಡರ್ ಅನ್ನು ಮಾಜಿ ಶಾಸಕರು ಉದ್ಘಾಟನೆ ಮಾಡಿದಂತೆ ಫೋಟೋಗಳಿಗೆ ಪೋಸ್ ನೀಡಲಾಗಿದೆ. ಆಕ್ಸಿಜನ್ ಸ್ಥಗಿತಗೊಳಿಸಿದ್ದರ ಪರಿಣಾಮ ಸೋಂಕಿತ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ ಎಂಬ ಆರೋಪಿಸಿದರು.