ಎಚ್.ಕೆ. ನಟರಾಜ
ದಾವಣಗೆರೆ: ನರೇಗಾ (ರೈತ ಸಿರಿ) ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಜಿಲ್ಲೆಯ ರೈತರು, ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಕೊರೊನಾ ಕರ್ಫ್ಯೂನಿಂದಾಗಿ ಮಹಾನಗರಗಳನ್ನು ಬಿಟ್ಟು ಗ್ರಾಮಗಳಿಗೆ ಮರಳುತ್ತಿರುವ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಕೆಲಸವೇ ಆಸರೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ತಮಗಿರುವ ಕಡಿಮೆ ಭೂಮಿಯಲ್ಲೇ ನರೇಗಾ ಯೋಜನೆಯಡಿ ಸ್ವತಃ ತೋಟಗಾರಿಕೆ ಬೆಳೆ ಬೆಳೆದು ಆರ್ಥಿಕವಾಗಿ ಮುಂದೆ ಬರಬಹುದು ಎಂಬುದಕ್ಕೆ ಜಿಲ್ಲೆಯ ರೈತರ ಪ್ರಗತಿ ಪ್ರೇರಣಾದಾಯಕವಾಗಿದೆ.
ತೋಟಗಾರಿಕೆ ಇಲಾಖೆಯ ಅಂಕಿ-ಅಂಶದ ಪ್ರಕಾರ ಜಿಲ್ಲೆಯ ರೈತರು ಈವರೆಗೆ 12.40 ಲಕ್ಷ ಮಾನವ ದಿನ ಕೆಲಸ ಮಾಡಿ ಬರೋಬ್ಬರಿ 32.5 ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ಉದ್ಯೋಗಖಾತ್ರಿ ಯೋಜನೆಯಡಿ ಪಡೆದು ದಾಖಲೆ ಮಾಡಿದ್ದಾರೆ. ಜಿಲ್ಲೆಯ ಒಟ್ಟು 4396 ರೈತರು 4087 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುವ ಜತೆಗೆ ತೋಟಗಾರಿಕೆ ಅಭಿವೃದ್ಧಿ ಕೆಲಸಗಳನ್ನೂ ಮಾಡಿಕೊಂಡಿದ್ದಾರೆ.
ಬಾಳೆ, ನುಗ್ಗೆ, ಗುಲಾಬಿ, ತೆಂಗು, ಡ್ರಾಗನ್ ಫೂಟ್, ಪಪ್ಪಾಯಿ, ಎಲೆಬಳ್ಳಿ ಬೆಳೆಯಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಒಟ್ಟು 12.40 ಲಕ್ಷ ಮಾನವ ದಿನಗಳನ್ನು ನೀಡಲಾಗಿದ್ದು, ಈವರೆಗೆ ರೈತರಿಗೆ ಒಟ್ಟು 32 ಕೋಟಿ ರೂ. ಪಾವತಿಸಲಾಗಿದೆ. ಇದರಲ್ಲಿ ಅಡಕೆ ಬೆಳೆಯುವ ತಾಲೂಕುಗಳಾದ ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ 8.90 ಲಕ್ಷ ಮಾನವ ದಿನಗಳನ್ನು ನೀಡಿ, 24 ಕೋಟಿ ರೂ.ಗಳನ್ನು ರೈತರಿಗೆ ಪಾವತಿಸಲಾಗಿದೆ.
ಯಾವ ಬೆಳೆ, ಎಷ್ಟಿದೆ?: 12 ಎಕರೆ ಮಾವು, 35 ಎಕರೆ ಗುಲಾಬಿ, 10 ಎಕರೆನಿಂಬೆ, 22 ಎಕರೆ ತೆಂಗು, 211 ಎಕರೆ ನುಗ್ಗೆ, 2.5 ಎಕರೆ ಚಿಕ್ಕು, 3.5ಎಕರೆ ಸೀಬೆ, 6 ಎಕರೆ ದಾಳಿಂಬೆ, 4 ಎಕರೆ ಹುಣಸೆ, 2.5 ಎಕರೆ ನೇರಳೆ, 212 ಎಕರೆ ಬಾಳೆ, 15 ಎಕರೆ ಬಾರೆ, 17 ಎಕರೆ ಎಲೆಬಳ್ಳಿ, 19 ಎಕರೆ ಪಪ್ಪಾಯಿ, 1 ಎಕರೆ ಅಂಜೂರ, 2.5 ಎಕರೆ ಕಿತ್ತಲೆ, 109 ಎಕರೆ ಕಾಳುಮೆಣಸು, 3358 ಎಕರೆ ಅಡಕೆ, 34 ಎಕರೆ ಕೋಕೋ, 10 ಎಕರೆ ಗೋಡಂಬಿ, 1 ಎಕರೆ ಡ್ರಾಗನ್ ಫ್ರೂಟ್ ಬೆಳೆಗಳನ್ನು ಜಿಲ್ಲೆಯ ರೈತರು ನರೇಗಾದಡಿ ಬೆಳೆದಿದ್ದಾರೆ.
ಇದರ ಜತೆಗೆ 119 ಕೃಷಿ ಹೊಂಡ, 1 ಕೊಳವೆ ಬಾವಿ ಮರುಪೂರಣ, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿ (120), ಪೌಷ್ಟಿಕ ತೋಟ (50) ನಿರ್ಮಿಸಿಕೊಂಡಿದ್ದಾರೆ.