ಮಲೇಬೆನ್ನೂರು: ಅಧಿಕಾರಕ್ಕಿಂತ ಪ್ರಾಮಾಣಿಕ ವಾಗಿ ಕೆಲಸ ಮಾಡುವ ದಿಟ್ಟ ಸಂಕಲ್ಪ ಮತ್ತು ಇಚ್ಛಾಶಕ್ತಿ ಇದ್ದಲ್ಲಿ ಯಾವ ಕೆಲಸವೂ ಅಸಾಧ್ಯವಾದುದ್ದಲ್ಲ ಎಂದು ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾ ಧಿಕಾರ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅಭಿಪ್ರಾಯಪಟ್ಟರು.
ಭದ್ರಾ ಅಚ್ಚುಕಟ್ಟಿಗೆ ಸೇರಿರುವ ಹರಿಹರ ತಾಲೂಕಿನ ಕೊನೆಭಾಗದ ಜಮೀನುಗಳಲ್ಲಿ ಭತ್ತದ ಕಟಾವಿಗೆ ಚಾಲನೆ ನೀಡಿ ಅವರು ರೈತರೊಂದಿಗೆ ಮಾತನಾಡಿದರು. ಕಾಡಾ ಸಲಹಾ ಸಮಿತಿ ಸಭೆಯನ್ನು ಮೊಟ್ಟಮೊದಲ ಭಾರಿಗೆ ಮಲೇಬೆನ್ನೂರಿನಲ್ಲಿ ನಡೆಸಿದಾಗ ಹರಿಹರ ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ನೀರನ್ನು ತಲುಪಿಸುತ್ತೇನೆ ಎಂದು ರೈತರಿಗೆ ಮಾತು ಕೊಟ್ಟಿದ್ದೆ. ಅದನ್ನು ನಿಭಾಯಿಸಿದ್ದೇನೆ ಮತ್ತು ಕೊನೆ ಭಾಗದ ಜಮೀನುಗಳಲ್ಲಿ ಬೆಳೆದ ಭತ್ತ ಕಟಾವಿಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಸುಮಾರು 20 ವರ್ಷಗಳಿಂದ ಕೊನೆಭಾಗದ ಜಮೀನುಗಳಿಗೆ ನೀರು ತಲುಪದೇ ರೈತರು ಸಂಕಷ್ಟದಲ್ಲಿದ್ದರು. ಇಂದು ಅದೇ ರೈತರು ಸಂತಸದಿಂದ ಭತ್ತ ಕಟಾವು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ವಿವಿಧ ಕಾಡಾ ಅಧ್ಯಕ್ಷರಾದ ಕ್ಷಣವೇ ರೈತರಿಗೆ ಒಳಿತು ಮಾಡಲು ಪಣ ತೊಟ್ಟಿದ್ದೆ ಎಂದರು.
ನೀರು ಬರುತ್ತಿಲ್ಲ ಎಂದು ಎಂಜಿನಿಯರ್ ಗಳಿಗೆ ರೈತರು ಹಳ್ಳಿ ಭಾಷೆಯಲ್ಲಿ ಬೈಯುತ್ತಿದ್ದರು. ಆ ಬೈಯುಳ ಕೇಳಿ ಅವರು ಲ್ಡ್‌ಗೆ ಬರದೆ ತಪ್ಪಿಸಿಕೊಳ್ಳುತ್ತಿದ್ದರು. ಇದನ್ನು ಅರಿತು ಎಂಜಿನಿಯರ್‌ಗಳಿಗೆ ಮತ್ತು ರೈತರಿಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದೆ. ಎಂಜಿನಿಯರ್‌ಗಳ ಸಭೆ ನಡೆಸಿ ಒಂದೊಂದು ಡಿಸ್ಟ್ರೆಬ್ಯೂಟರ್‌ಗಳಿಗೆ ಒಬ್ಬ ಎಂಜಿನಿಯರ್ ಮತ್ತು ಆಪ್ತ ಕಾರ್ಯದರ್ಶಿ ಗುರುಮೂರ್ತಿ ಮತ್ತು ಪ್ರಕಾಶ್ ಕೂಡ ನೀರಿಗಾಗಿ ಹಗಲು ರಾತ್ರಿ ಓಡಾಡಿದ್ದಾರೆ. ಕೊನೆ ಭಾಗದ ಜಮೀನುಗಳಿಗೆ ನೀರು ತಲುಪಲು ಅವರ ಶ್ರಮವೂ ಇದೆ ಎಂದರು.
ಭದ್ರಾ ಜಲಾಶಯದಿಂದ ನೀರನ್ನು ಮೇ 20 ರಂದು ನಿಲ್ಲಿಸಲಾಗುವುದು. ಇದುವರೆಗೆ 2 ಸಾವಿರ ಕ್ಯೂಸೆಕ್ ನೀರು ನಾಲೆಗೆ ಬಿಡಲಾಗುತ್ತಿದೆ. ಇಂದಿನಿಂದ 500 ಕ್ಯೂಸೆಕ್ಸ್ ನೀರನ್ನು ಕಡಿಮೆ ಮಾಡಿ 1.5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚಿಸಿದ್ದೇನೆ ಎಂದರು.
ಮಲೇಬೆನ್ನೂರಿನ ಕಚೇರಿಯನ್ನು ಹೊನ್ನಾಳಿಗೆ ಸ್ಥಳಾಂತರಿಸುವ ವಿಷಯವಾಗಿ ಮಾತನಾಡಿ, ಹೊನ್ನಾಳಿಯಲ್ಲಿ ಬೇಕಾದರೆ ಇನ್ನೊಂದು ಕಚೇರಿ ಪ್ರಾರಂಭಿಸಲಿ. ಈ ಕಚೇರಿ ಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದರು. ರೈತರಾದ ರುದ್ರಪ್ಪ, ಶಾಂತಪ್ಪ, ಪರಶುರಾಮ, ದೇವರಾಜಪ್ಪ ಮತ್ತಿತರು ಇದ್ದರು.