Advertisement

ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

10:00 PM May 13, 2021 | Team Udayavani |

ದಾವಣಗೆರೆ: ಕೊರೊನಾ ಸೋಂಕಿತರು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಪಡೆದು ಎಬಿಎಆರ್‌ಕೆ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ವತಿಯಿಂದ ಸರ್ಕಾರ ಜಾರಿಗೊಳಿಸಿರುವ ಎಬಿಎಆರ್‌ ಕೆ ಯೋಜನೆಯಡಿ ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯವನ್ನು ಜನ ಸಾಮಾನ್ಯರು ಪಡೆಯಬೇಕು ಎಂದು ತಿಳಿಸಿದರು.

Advertisement

ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಮತ್ತು ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ ಶೇ.75 ಬೆಡ್‌ಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಬೇಕು ಎಂಬ ನಿಯಮ ಇದೆ. ಇದುವರೆಗೆ ಎಬಿಎಆರ್‌ಕೆ ಯಿಂದ ಖಾಸಗಿ ಆಸ್ಪತ್ರೆಗೆ ರೆಫರೆನ್ಸ್‌ ಪಡೆದು ಕೇವಲ 64 ಜನರು ಮಾತ್ರ ಉಚಿತ ಚಿಕಿತ್ಸೆಯ ಸದುಪಯೋಗ ಪಡೆದಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಆಸ್ಪತ್ರೆ ಹೊರತುಪಡಿಸಿ ಖಾಸಗಿಯಲ್ಲಿ 1,535 ಬೆಡ್‌ಗಳು ರೋಗಿಗಳಿಗೆ ನಿಗದಿ ಆಗಿದ್ದರೂ ಬಹಳಷ್ಟು ಜನರು ಯೋಜನೆಯ ಬಳಕೆ ಮಾಡುತ್ತಿಲ್ಲ. ಇನ್ನು ಮುಂದೆ ಸೋಂಕಿತರು ಸರ್ಕಾರಿ ಆಸ್ಪತ್ರೆಯಲ್ಲಿ ರೆಫರೆನ್ಸ್‌ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಿದ ವೆಚ್ಚ ಭರಿಸ ಲಾಗುವುದು ಎಂದರು.

ಹೆಲ್ಪ್ಡೆಸ್ಕ್ ತಂಡ: ಎಬಿಎಆರ್‌ಕೆ ಅಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ರೆಫರೆನ್ಸ್‌ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡುವ ವೈದ್ಯರು ಸೇರಿದಂತೆ 8 ಜನರ ಹೆಲ್ಪ್ಡೆಸ್ಕ್ ತಂಡ ರಚಿಸಲಾಗಿದೆ. ತಂಡದಿಂದ ಖಾಸಗಿ ಆಸ್ಪತ್ರೆ ದಾಖಲಾತಿಗೆ ಮುನ್ನ ರೆಫರೆನ್ಸ್‌ ಪಡೆಯಬೇಕು ಎಂದು ತಿಳಿಸಿದರು. ಪ್ರತಿಷ್ಟಿತ ಬಡಾವಣೆಗಳಲ್ಲಿಯೇ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರತ್ಯೇಕ ಕೊಠಡಿ ಇತರೆ ವ್ಯವಸ್ಥೆ ಇದೆ ಎಂದು ಮನೆಯಲ್ಲಿಯೇ ಐಸೊಲೇಟ್‌ ಆಗುತ್ತಿದ್ದಾರೆ.

ಆದರೆ, ಸಮರ್ಪಕವಾಗಿ ಐಸೊಲೇಷನ್‌ ನಿಯಮ ಪಾಲಿಸದೆ ಮನೆಯವರೆಲ್ಲ ಪಾಸಿಟಿವ್‌ ಆಗುತ್ತಿರುವುದು ಕಂಡು ಬಂದಿದೆ. ತರಳಬಾಳು ಶ್ರೀಗಳು ಎಲ್ಲ ರೀತಿಯ ವ್ಯವಸ್ಥೆ ಇರುವ ತರಳಬಾಳು ಬಾಲಕಿಯರ ಹಾಸ್ಟೆಲ್‌ನ್ನು ಕೋವಿಡ್‌ ಆರೈಕೆ ಕೇಂದ್ರಕ್ಕೆ ನೀಡಿದ್ದು 90 ಜನರಿಗೆ ಅವಕಾಶವಿದೆ. ಐಸೋಲೇಟ್‌ ಆಗುವ ಮೂಲಕ ಕೋವಿಡ್‌ ಸರಪಳಿ ತುಂಡರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಾಮಾಣಿಕ ಪ್ರಯತ್ನ: ಪ್ರಸ್ತುತ ಜಿಲ್ಲೆಯಲ್ಲಿ ಸ್ವಲ್ಪ ಆಕ್ಸಿಜನ್‌ ಕೊರತೆ ಇರುವುದು ನಿಜ. 14 ಕೆ. ಎಲ್‌. ಆಕ್ಸಿಜನ್‌ ಸರಬರಾಜಾಗುತ್ತಿದೆ. 23 ಕೆಎಲ್‌ಗೆ ಒತ್ತಾಯ ಮಾಡಲಾಗುತ್ತಿದೆ. ಆಕ್ಸಿಜನ್‌ ಸಮಸ್ಯೆಯನ್ನು ಪರಿಹರಿಸಲು ಕೇಂದ್ರದ ಸಚಿವರು ಹಾಗೂ ಮುಖ್ಯಮಂತ್ರಿ, ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರೆಮಿಡಿಸಿವಿರ್‌ ಇಂಜೆಕ್ಷನ್‌ ಇಲ್ಲ. ಜಿಲ್ಲಾ ಧಿಕಾರಿಗಳ ಬಳಿ ಹೋಗಿ ಕೇಳಿದರೆ ಕೊಡುತ್ತಾರೆ ಎಂದು ಕಳುಹಿಸಿದ್ದಾರೆ.

Advertisement

ಆಕ್ಸಿಜನ್‌ ಇಲ್ಲ. ನೀವೇ ವ್ಯವಸ್ಥೆ ಮಾಡಿದರೆ ಚಿಕಿತ್ಸೆ ನೀಡುತ್ತೇವೆ ಎಂದು ರೋಗಿಗಳ ಕಡೆಯವರಿಗೇ ವ್ಯವಸ್ಥೆ ಮಾಡಲು ತಿಳಿಸಿರುವುದು ಗಮನಕ್ಕೆ ಬಂದಿದೆ. ರೋಗಿಗಳ ಬಳಿಯೇ ವ್ಯವಸ್ಥೆ ಮಾಡಿಸುವು ದಾದರೆ ಖಾಸಗಿ ಆಸ್ಪತ್ರೆಗಳ ಪಾತ್ರವೇನು. ಇನ್ನು ಮುಂದೆ ಆ ರೀತಿ ಮಾಡುವುದು ಗಮನಕ್ಕೆ ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಧಿಕಾರಿ ಮಹಾಂತೇಶ್‌ ಜಿ. ಬೀಳಗಿ ಮಾತನಾಡಿ, ಖಾಸಗಿ ಆಸ್ಪತ್ರೆಯವರು ರೋಗಿಗಳ ಕಡೆಯಿಂದಲೇ ಔಷಧ ಮತ್ತೂಂದು ವ್ಯವಸ್ಥೆ ಮಾಡಿಕೊಡುವಂತೆ ಕೇಳಿದರೆ ಕೆಪಿಎಂಇ ಅಡಿಯಲ್ಲಿ ನೋಟಿಸ್‌ ನೀಡಿ ಸೇವೆ ನಿಲಂಬನೆಗೊಳಿಸುವ ಕ್ರಮ ಜರುಗಿಸಲಾಗುವುದು. ಏನಾದರೂ ಕೊರತೆ ಇದ್ದರೆ ತಮ್ಮ ಬಳಿ ಚರ್ಚೆ ಮಾಡಬೇಕು. ಅದು ಬಿಟ್ಟು ರೋಗಿಗಳ ಕಡೆಯವರಿಗೆ ವ್ಯವಸ್ಥೆ ಮಾಡುವಂತೆ ತಿಳಿಸಬಾರದು ಎಂದು ಎಚ್ಚರಿಸಿದರು.

ಕೋವಿಡ್‌ ಕೇರ್‌ ಸೆಂಟರ್‌: ತಾಲೂಕುಗಳಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ಗಳ ಬಳಕೆಯನ್ನು ಜನರು ಮಾಡಿಕೊಳ್ಳಬೇಕು. ಹೋಂ ಐಸೊಲೇಷನ್‌ ಸಮರ್ಪಕವಾಗಿ ಮಾಡಿಕೊಳ್ಳದಿದ್ದರೆ ಮನೆಯವರೆಲ್ಲಾ ಪಾಸಿಟಿವ್‌ ಆಗುತ್ತಾರೆ. ಹಾಗಾಗಿ ಸೋಂಕಿತರು ಕೇರ್‌ ಸೆಂಟರ್‌ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಬಹಳಷ್ಟು ಜನರಿಗೆ ಕೋವಿಡ್‌ ಸೋಂಕು ತಗುಲಿದ್ದು ಕಂಟೈನ್‌ಮೆಂಟ್‌ ಝೋನ್‌ ಮಾಡಲಾಗಿದೆ. ಆದ ಕಾರಣ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ 17 ಜನ ತಜ್ಞ ವೈದ್ಯರು ಮತ್ತು 30 ದಾದಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅನಸ್ತೇಷಿಯಾ ಮತ್ತು ಪಲ್ಮನರಿ ವೈದ್ಯರ ಕೊರತೆ ಇದೆ. ನೇಮಕಾತಿ ಸಂಬಂಧ ಅರ್ಜಿ ಕರೆದಿದ್ದು ಹುದ್ದೆ ಭರ್ತಿಯಾದಲ್ಲಿ ಸಿಬ್ಬಂದಿ ಕೊರತೆಯಿಂದ ಚಾಲನೆಯಲ್ಲಿ ಇಲ್ಲದ ವೆಂಟಿಲೇಟರ್‌ ಚಾಲನೆಗೊಳಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಇತ್ತೀಚೆಗೆ ಜಿಲ್ಲಾಸ್ಪತ್ರೆಯಲ್ಲಿ ಉಂಟಾದ ಅಭಾವದಿಂದ ಸ್ವಲ್ಪ ವ್ಯತ್ಯಯವಾಗಿದೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಸರಿ ಹೋಗಲಿದೆ. ಮುಂದಿನ ದಿನಗಳಲ್ಲಿ ಯಾವುದೇ ತೊಡಕಿಲ್ಲದೆ ನಿರಂತರವಾಗಿ ಆಕ್ಸಿಜನ್‌ ಪೂರೈಕೆ ಮಾಡುವ ಭರವಸೆ ನೀಡಿದರು. ಮೇಯರ್‌ ಎಸ್‌.ಟಿ. ವೀರೇಶ್‌, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ ಉಪ ಕಾರ್ಯದರ್ಶಿ ಆನಂದ್‌, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next