Advertisement

ಅದ್ಧೂರಿ ಕಲ್ಯಾಣ ಮಹೋತ್ಸವ ಕನಸಿಗೆ ಕೊರೊನಾ ಕೊಕ್ಕೆ !

09:54 PM May 13, 2021 | Team Udayavani |

„ರಾ. ರವಿಬಾಬು

Advertisement

ದಾವಣಗೆರೆ: ಒಬ್ಬಳೇ ಮಗಳ ಮದುವೆಯನ್ನ ಅದ್ಧೂರಿಯಾಗಿ ಮಾಡಿಕೊಡಬೇಕು ಅಂದು ಕೊಂಡಿದ್ದವು. ಒಳ್ಳೆಯ ವರ ಸಿಕ್ಕಿದ್ದು, ಡೇಟ್‌ ಫಿಕ್ಸ್ ಮಾಡಿ, ಚೌಟ್ರಿ ಸಹ ಬುಕ್‌ ಮಾಡಲಾಗಿತ್ತು. ಆದ್ರೆ, ಕೊರೊನಾ, ಕರ್ಫ್ಯೂ ಕಾರಣಕ್ಕೆ ಚೌಟ್ರಿಯಲ್ಲಿ ಮದುವೆ ಮಾಡಂಗಿಲ್ಲ. ಮನೆ ಮುಂದೇನೆ ಮಾಡಬೇಕು.

ಮಗಳ ಅದ್ಧೂರಿ ಮದುವೆ ಕನಸಾಗೇ ಉಳಿದು ಹೋಯ್ತು! ಕೊನೆಯ ತಮ್ಮನ ಬಹಳ ಚೆನ್ನಾಗಿ ಮಾಡಬೇಕು ಎಂದು ಸ್ವಲ್ಪ ತಡವಾಗಿಯೇ ಮದುವೆ ದೊಡ್ಡ ಕಲ್ಯಾಣ ಮಂಟಪ, ಅಡುಗೆಯವರು, ಡೆಕೋರೇಷನ್‌ ಎಲ್ಲದಕ್ಕೂ ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಲಾಕ್‌ಡೌನ್‌ ಬಂದಿದ್ದಕ್ಕೆ ಎಲ್ಲವೂ ಕ್ಯಾನ್ಸೆಲ್‌ ಮಾಡಬೇಕಾಯಿತು. ಇವು ವಿವಾಹ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದವರ ಮಾತುಗಳು.. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಚೈನ್‌ಲಿಂಕ್‌ ಕಡಿತಗೊಳಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಹೊಸ ಮಾರ್ಗಸೂಚಿ ಅನೇಕ ಕುಟುಂಬಗಳ ಕಲ್ಯಾಣ ಮಹೋತ್ಸವ ಕನಸಿಗೆ ಭಂಗ ಉಂಟು ಮಾಡಿದೆ.

ಕಳೆದ ವರ್ಷದಿಂದ ಎಡೆಬಿಡದೆ ಕಾಡುತ್ತಿರುವ ಕೊರೊನಾ ಕಾರಣಕ್ಕೆ ಅನೇಕರು ಮದುವೆ ಮಹೋತ್ಸವ ಮುಂದೂಡಿದ್ದರು. ಈ ವರ್ಷ ಪ್ರಾರಂಭದಲ್ಲಿ ಕೊರೊನಾದ ಅಬ್ಬರತೆ ಕಡಿಮೆ ಇದ್ದ ಕಾರಣಕ್ಕೆ ಅವರ ಅನುಕೂಲಕ್ಕೆ ತಕ್ಕಂತೆ ಮದುವೆಗೆ ಸಿದ್ಧತೆ ಸಹ ಮಾಡಿಕೊಂಡಿದ್ದರು. ಆದರೆ, ಏಕಾಏಕಿ ಕೊರೊನಾ ಪ್ರಮಾಣ ಹೆಚ್ಚಾಗಿದ್ದು, ಸರ್ಕಾರ ಲಾಕ್‌ ಡೌನ್‌ ಮಾದರಿಯ ನಿರ್ಬಂಧ ಹೇರಿರುವುದು ಮದುವೆ ಸಿದ್ಧತೆ ಮಾಡಿಕೊಂಡವರಿಗೆ ಅಕ್ಷರಶಃ ಬಿಸಿ ತುಪ್ಪವಾಗಿದೆ.

ಮದುವೆ ನಿಲ್ಲಿಸುವಂತೆ ಇಲ್ಲ. 40ಕ್ಕೂ ಹೆಚ್ಚು ಜನರನ್ನು ಸೇರಿಸಿಕೊಂಡು ಮಾಡುವಂತೆಯೂ ಇಲ್ಲ ಎನ್ನುವ ಸ್ಥಿತಿಯಿಂದ ಇರುವುದರಲ್ಲೇ ಮದುವೆಗೆ ಸಜ್ಜಾಗಿದ್ದಾರೆ. ಕಲ್ಯಾಣ ಮಂಟಪ, ಅಡುಗೆಯವರು, ಡೆಕೋರೇಷನ್‌ಗೆ ಅಡ್ವಾನ್ಸ್‌ ಕೊಟ್ಟಿದ್ದು ವಾಪಾಸ್‌ ಪಡೆದು, ಮನೆಯ ಮುಂದೆಯೇ ಸರಳವಾಗಿ ಮದುವೆ ಮಾಡಲು ನಿರ್ಧರಿಸಿದ್ದಾರೆ.

Advertisement

ಮದುವೆ ಎಂದರೆ ಭರ್ಜರಿಯಾಗಿಯೇ ಬಂಧು-ಬಳಗ, ಅತ್ಯಾಪ್ತರ ಕರೆದು, ಬಹು ಅದ್ಧೂರಿಯಾಗಿ ನೆರವೇರಿಸು ವುದು ಸಾಮಾನ್ಯ. ಆದರೆ, ಕೊರೊನಾ ಎಲ್ಲದಕ್ಕೂ ಬ್ರೇಕ್‌ ಹಾಕಿದೆ. ವಧು-ವರ, ತಂದೆ-ತಾಯಿ ಸೇರಿದಂತೆ 40 ಜನರನ್ನೂ ಮಾತ್ರ ಆಹ್ವಾನಿಸಬೇಕು. ಅಡುಗೆಯವರು, ಡೆಕೋರೇಷನ್‌, ವಾದ್ಯದವರು ಸೇರಿ 40 ಸಂಖ್ಯೆ ದಾಟುವಂತೆಯೇ ಇಲ್ಲ. ಒಂದೊಮ್ಮೆ ದಾಟಿದರೆ ದಂಡ ಕಟ್ಟಬೇಕಾಗುತ್ತದೆ ಎಂಬ ಭಯ ಕಾಡುತ್ತಿದೆ. ಮದುವೆಗೆ ತಮಗೆ ಬೇಕಾದವರನ್ನೂ ಕರೆಯುವುದಕ್ಕೆ ಸಂದಿಗ್ಧ ಪರಿಸ್ಥಿತಿ. ತಾಲೂಕು ಇಲ್ಲವೇ ಸ್ಥಳೀಯ ಸಂಸ್ಥೆಯಿಂದ ವಿತರಿಸಲಾಗುವ ಪಾಸ್‌ ನೀಡಿದವರು ಮಾತ್ರವೇ ಮದುವೆಗಳಿಗೆ ಹಾಜರಾಗಬೇಕು. ಹಾಗಾಗಿ ಯಾರಿಗೆ ಪಾಸ್‌ ನೀಡಬೇಕು.

ಪಾಸ್‌ ಕೊಟ್ಟವರಿಗೆ ಮಾತ್ರ ಮದುವೆಗೆ ಬನ್ನಿ ಎಂದು ಅಧಿಕೃತ ಆಹ್ವಾನ ನೀಡಿದಂತಾಗುತ್ತದೆ. ಪಾಸ್‌ ಕೊಡದೇ ಬರೀ ಆಹ್ವಾನ ಪತ್ರಿಕೆ ನೀಡಿದರೆ. ಮದುವೆ ಇದೆ ಎಂದು ತಿಳಿಸಿದಂತಾಗುತ್ತದೆ. ಹಿಂದಿನಂತೆ ಮದುವೆಗೇ ಬರಲೇಬೇಕು ಎಂಬ ಒತ್ತಾಯ ಮಾಡುವಂತೆಯೂ ಇಲ್ಲ. ಮದುವೆಗೆ ಅತ್ಯಾಪ್ತರನ್ನ ಕರೆಯದೇ ಇರುವಂತಿಲ್ಲ. ಒಂದು ಕಡೆ ಕರೆಯುವಂತೆಯೂ ಇಲ್ಲ. ಕರೆದರೆ ಒಂದು ಕಷ್ಟ. ಕರೆಯದೇ ಇದ್ದರೆ ಮತ್ತೂಂದು ತೊಂದರೆಯಲ್ಲಿ ತೊಳಲಾಡುವಂತಾಗಿದೆ. ಮಾರ್ಗಸೂಚಿ ಪಾಲಿಸುವ ಹಿನ್ನೆಲೆಯಲ್ಲಿ ಮದುವೆಗೆ ಕರೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕೌಟಂಬಿಕ ಸಂಬಂಧಗಳೇ ಮುರಿದು ಹೋಗುವ ಆತಂಕವೂ ಮನೆ ಮಾಡಿದೆ. ತಾಲೂಕು ಆಡಳಿತ, ಸ್ಥಳೀಯ ಸಂಸ್ಥೆಗಳು ವರ ಮತ್ತು ವಧುವಿನ ಕುಟುಂಬಕ್ಕೆ ತಲಾ 20 ರಂತೆ 40 ಪಾಸ್‌ ಮಾತ್ರ ವಿತರಣೆ ಮಾಡಲಾಗುತ್ತದೆ. 20 ಪಾಸ್‌ ಗಳನ್ನು ಯಾರಿಗೆ ಕೊಡಬೇಕು.

ಯಾರಿಗೆ ಬೀಡಬೇಕು ಎನ್ನುವುದೇ ವಧು-ವರರ ಕುಟುಂಬದವರಿಗೆ ಬಹು ದೊಡ್ಡ ಯಕ್ಷಪ್ರಶ್ನೆಯಾಗುತ್ತಿದೆ. ಒಟ್ಟಾರೆಯಾಗಿ ಕೊರೊನಾ ಎಂಬ ಮಹಾಮಾರಿ ಜೀವನದ ಪ್ರಮುಖ ಘಟ್ಟ ವಿವಾಹ ಮಹೋತ್ಸವಗಳ ಮೇಲೂ ತನ್ನ ಕರಿನೆರಳು ಚಾಚಿದೆ. ಮದುವೆ ಮಾತ್ರವಲ್ಲ ಶುಭ ಸಮಾರಂಭಗಳನ್ನೂ ಸಹ ಅದ್ಧೂರಿಯಾಗಿ ನಡೆಸದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next