ದಾವಣಗೆರೆ: ಲಾಕ್‌ಡೌನ್ ಮುಗಿದ ನಂತರ ಸ್ನಾತಕ ಪದವಿಯ ಒಂದು, ಮೂರು ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.
ಸೋಮವಾರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸೋಮವಾರ ನೇರ ಫೋನ್-ಇನ್- ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರೀಕ್ಷಾ ಫಲಿತಾಂಶದ ಬಗ್ಗೆ ಎಲ್ಲ ವಿದ್ಯಾರ್ಥಿಗಳಲ್ಲಿ ಕುತೂಹಲ ಇದೆ. ಕೊರೊನಾ ಕಾರಣಕ್ಕಾಗಿ ಫಲಿತಾಂಶ ಪ್ರಕಟಣೆಗೆ ಸಿದ್ಧತೆ ಸ್ಥಗಿತಗೊಳಿಸಲಾಗಿದೆ. ಕಾಲೇಜು ಆರಂಭಕ್ಕೆ ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್-19ರ ಕಾರಣಕ್ಕಾಗಿ ಬಿಇಡಿ ಪದವಿಯ ಪಠ್ಯ ಮತ್ತು ಪ್ರಾಯೋಗಿಕ ಪರೀಕ್ಷೆಯೂ ವಿಳಂಬವಾಗಿದೆ. ಎರಡು ವರ್ಷದಲ್ಲಿ ಮುಗಿಯಬೇಕಾಗಿದ್ದ ಪದವಿ ಮೂರು ವರ್ಷವಾಗುತ್ತಿದೆ. ಕೆಲವು ಕಾಲೇಜುಗಳಲ್ಲಿ ಕೋ ಆರ್ಡಿನೇಷನ್ ಸಮಿತಿ ಸಭೆಯಾಗಿ ವರದಿ ಬರಲು ತಡವಾದ ಕಾರಣ ಮಾರ್ಚ್ ಒಳಗೆ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ. ವೇಳಾಪಟ್ಟಿ ಸಿದ್ಧಪಡಿಸಿ ಪರೀಕ್ಷೆಗೆ ಅಣಿಯಾಗುತ್ತಿದ್ದಂತೆ ಕೋವಿಡ್-19ನಿಂದಾಗಿ ರಜೆ ನೀಡಲಾಗಿದೆ. ಲಾಕ್‌ಡೌನ್ ನಂತರ ಆದ್ಯತೆ ಮೇರೆಗೆ ಪರೀಕ್ಷೆ ನಡೆಸಲಾಗುವುದು ಎಂದರು.
ಸದ್ಯಕ್ಕೆ ಯಾವುದೇ ತರಗತಿಗೂ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತೇರ್ಗಡೆ ಮಾಡುವ ಉದ್ದೇಶ ವಿಶ್ವವಿದ್ಯಾಲಯಕ್ಕೆ ಇಲ್ಲ. ಅಲ್ಲದೆ ಮುಂದಿನ ತರಗತಿಗಳಿಗೆ ಮೇ 12ರಿಂದ ಆನ್‌ಲೈನ್‌ನಲ್ಲಿ ಪಾಠ ಆರಂಭಿಸುವಂತೆ ಎಲ್ಲ ಕಾಲೇಜು ಪ್ರಾಧ್ಯಾಪಕರಿಗೂ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯದಂತೆ ಗಮನ ನೀಡಲು ಆದ್ಯತೆ ನೀಡುವಂತೆಯೂ ತಿಳಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಸಿಗದೆ ಆನ್‌ಲೈನ್ ತರಗತಿಗಳಿಂದ ವಂಚಿತರಾಗುವ ಸಾಧ್ಯತೆಗಳಿವೆ. ಹಾಗಾಗಿ ಪರ್ಯಾಯ ವ್ಯವಸ್ಥೆಗೂ ಆದ್ಯತೆ ನೀಡಬೇಕು. ಕೆಲವು ಕಾಲೇಜುಗಳಲ್ಲಿ ಆನ್ ಲೈನ್‌ನಲ್ಲೂ ಪಾಠ ನಡೆಸುತ್ತಿಲ್ಲ. ಕಳೆದ ವರ್ಷ ಶೇ. 50ರಷ್ಟೂ ಪಾಠವನ್ನು ಹೇಳದೆ ಪರೀಕ್ಷೆ ನಡೆಸಲಾಯಿತು. ಅದರಿಂದ ಅಭ್ಯಾಸ್ಕಕೆ ಅಡ್ಡಿ ಆಯಿತು ಎಂದು ಕೆಲ ವಿದ್ಯಾರ್ಥಿಗಳು ದೂರಿದರು.
ವಿದ್ಯಾರ್ಥಿಗಳ ಆತಂಕಕ್ಕೆ ಸ್ಪಂದಿಸಿದ ಕುಲಪತಿಗಳು, ಕಳೆದ ಬಾರಿಯೂ ಕಡ್ಡಾಯವಾಗಿ ಪಾಠ ಮಾಡುವಂತೆ ಸೂಚಿಸಲಾಗಿತ್ತು. ಆಗಿರುವ ಲೋಪದ ಬಗ್ಗೆ ವಿಚಾರಣೆ ನಡೆಸಲಾಗುವುದು. ಈ ಬಾರಿ ಅದು ಮುಂದುವರಿಯಲು ಅವಕಾಶ ನೀಡುವುದಿಲ್ಲ. ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ. ಆನ್‌ಲೈನ್ ಅಲ್ಲದೆ ಲಾಕ್ ಡೌನ್ ನಂತರ ಭೌತಿಕವಾಗಿಯೂ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಅರ್ಥೈಸುವಂತೆ ಮಾಡಲಾಗುವುದು. ಜೊತೆಗೆ ಪಠ್ಯಪೂರಕ ಅಧ್ಯಯನ ಸಾಮಗ್ರಿಗಳನ್ನು ವಿದ್ಯಾರ್ಥಿಗಳ ಪೋರ್ಟಲ್‌ಗೆ ಒದಗಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಆಡಳಿತ ಕುಲಸಚಿವೆ ಪ್ರೊ| ಗಾಯತ್ರಿ ದೇವರಾಜ್, ಪರೀಕ್ಷಾಂಗ ಕುಲಸಚಿವೆ ಪ್ರೊ| ಎಚ್.ಎಸ್. ಅನಿತಾ ಇದ್ದರು.