ಹೊನ್ನಾಳಿ: “ನನಗೆ ಹೊಡೆದರೂ, ಬೈದರೂ ಪರವಾಗಿಲ್ಲ. ಮೊದಲು ಗ್ರಾಮಸ್ಥರೆಲ್ಲರೂ ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ’ ಹೀಗೆ ಮನವಿ ಮಾಡಿದ್ದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ. ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮಕ್ಕೆ ಸತತ ನಾಲ್ಕನೇ ದಿನವೂ ಭೇಟಿ ನೀಡಿ ಗ್ರಾಮಸ್ಥರಲ್ಲಿ ಅವರು ಮನವಿ ಮಾಡಿದರು.
“ನಿಮ್ಮ ತೆರಿಗೆ ಹಣದಲ್ಲಿ ನನ್ನ ವೇತನ, ಇತರ ಭತ್ಯೆಗಳು, ಅಧಿ ಕಾರಿಗಳ ವೇತನ ಮತ್ತು ಬಹುಮುಖ್ಯವಾಗಿ ರಾಜ್ಯದ ಅಭಿವೃದ್ಧಿಯೂ ಸಹ ನಡೆಯುತ್ತೆ. ಹಾಗಾಗಿ ನಿಮ್ಮ ಆರೋಗ್ಯವನ್ನು ಕಾಪಾಡುವುದು ಜನಪ್ರತಿನಿಧಿ ಯಾದ ನನ್ನ ಜವಾಬ್ದಾರಿ. ದಯಮಾಡಿ ಮೊದಲು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಗ್ರಾಮಸ್ಥರಲ್ಲಿ ವಿನಮ್ರವಾಗಿ ಪ್ರಾರ್ಥಿಸಿದರು.
ಗ್ರಾಮದಲ್ಲಿ 1591 ಜನಸಂಖ್ಯೆ ಇದ್ದು ಅವರಲ್ಲಿ 384 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ 51 ಜನರಿಗೆ ಪಾಸಿಟಿವ್ ಪತ್ತೆಯಾಗಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ. ಗ್ರಾಮ ಕೊರೊನಾದಿಂದ ವ್ಯಾಪಕತೆ ಪಡೆದಿದೆ. ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಗ್ರಾಮಸ್ಥರಿಗೆ ಆತ್ಮಸ್ಥೆçರ್ಯ ತುಂಬಿದರು.
ಅಧಿಕಾರಿಗಳಿಗೆ ಕಿವಿಮಾತು: ಗ್ರಾಮಸ್ಥರನ್ನು ಮನವೊಲಿಸಿ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಿ ಹಾಗೂ ಯಾರಿಗೆ ಪಾಸಿಟಿವ್ ಬರುತ್ತೋ ಅಂತವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ತಹಶೀಲ್ದಾರ್ ತನುಜ ಸವದತ್ತಿ, ಉಪ ತಹಶೀಲ್ದಾರ್ ನ್ಯಾಮತಿ ನಾಗರಾಜ್ ಅವರಿಗೆ ಸೂಚಿಸಿದರು.
ಕಂಟೈನ್ಮೆಂಟ್ ಝೋನ್; ಗ್ರಾಮದಲ್ಲಿ 51 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅಲ್ಲದೆ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ 1200 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕಾಗಿರುವುದರಿಂದ ಗ್ರಾಮವನ್ನು ಕಂಟೈನ್ಮಂಟ್ ಝೋನ್ ಎಂದು ಘೋಷಿಸಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಇಲ್ಲೇ ಬೀಡು ಬಿಟ್ಟಿದೆ. ಗ್ರಾಮದಲ್ಲಿ ಯಾರಿಗೆ ಆಹಾರ ಸಾಮಗ್ರಿ ಮತ್ತೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಅಗತ್ಯ ಇದೆಯೋ ಅಂತಹವರಿಗೆ ಫುಡ್‌ಕಿಟ್ ಹಾಗೂ ಅಗತ್ಯ ತರಕಾರಿ ನೀಡುವ ಭರವಸೆ ನೀಡಿದರು.
ತಹಶೀಲ್ದಾರ್ ತನುಜ ಸವದತ್ತಿ, ಉಪ ತಹಶೀಲ್ದಾರ್ ನ್ಯಾಮತಿ ನಾಗರಾಜ್, ಪಿಡಿಒ ಪ್ರದೀಪ್‌ಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.