Advertisement

ಬಿತ್ತನೆ ಬೀಜ-ಗೊಬ್ಬರ ಸಮರ್ಪಕವಾಗಿ ಪೂರೈಸಿ

09:58 PM May 09, 2021 | Team Udayavani |

ದಾವಣಗೆರೆ: ಮಳೆ ಆರಂಭವಾಗುತ್ತಿದ್ದಂತೆ ಬಿತ್ತನೆ ಆರಂಭವಾಗಲಿದ್ದು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಮತ್ತು ಇತರೆ ಪರಿಕರಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೂನ್‌ ಮತ್ತು ಜುಲೈ ತಿಂಗಳಿಗೆ ಸಂಬಂಧಿಸಿದಂತೆ ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ಜಂಟಿ ಕೃಷಿ ನಿರ್ದೇಶಕರು ನೋಡಿಕೊಳ್ಳಬೇಕು. ಏನಾದರೂ ಕೊರತೆ ಇದ್ದರೆ ನನಗೆ ತಿಳಿಸಬೇಕು. ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 2,44,297 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಪ್ರಮುಖ ಬೆಳೆಗಳಾದ ಭತ್ತ 66037 ಹೆಕ್ಟೇರ್‌, ಜೋಳ 2400 ಹೆಕ್ಟೇರ್‌, ಮುಸುಕಿನ ಜೋಳ 1,26,708 ಹೆಕ್ಟೇರ್‌, ರಾಗಿ 7295 ಹೆಕ್ಟೇರ್‌, ತೊಗರಿ 7215 ಹೆಕ್ಟೇರ್‌, ಶೇಂಗಾ 13,775 ಹೆಕ್ಟೇರ್‌, ಸೂರ್ಯಕಾಂತಿ 2190 ಹೆಕ್ಟೇರ್‌, ಹತ್ತಿ 10,327 ಹೆಕ್ಟೇರ್‌ ಮತ್ತು ಕಬ್ಬು 1529 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆಯ 20 ರೈತ ಸಂಪರ್ಕ ಕೇಂದ್ರಗಳು ಹಾಗೂ 10 ಹೆಚ್ಚುವರಿ ವಿತರಣಾ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಪ್ರತಿನಿ ಧಿಗಳೊಂದಿಗೆ ಹಾಗೂ ದಾಸ್ತಾನು ಸಂಸ್ಥೆಯವರೊಡನೆ ಸಭೆ ನಡೆಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಲಾರಿ ಮಾಲೀಕರ ಸಂಘದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಸಗೊಬ್ಬರಗಳ ಸುಗಮ ಸರಬರಾಜಿಗೆ ಕ್ರಮ ವಹಿಸಲಾಗಿದೆ. ಕೃಷಿ ಪರಿಕರ ಮಾರಾಟಗಾರರು ಮತ್ತು ಕೃಷಿ ಯಂತ್ರಧಾರೆ ಕೇಂದ್ರದವರಿಗೆ 534 ಗ್ರೀನ್‌ ಪಾಸ್‌ ವಿತರಿಸಲಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್‌ ಬೊಮ್ಮನ್ನಾರ್‌ ಮಾತನಾಡಿ, ಬಾಳೆ, ಮಾವು, ನಿಂಬೆ, ಕಲ್ಲಂಗಡಿ, ಪಪ್ಪಾಯ, ದಾಳಿಂಬೆ, ಪೇರಲೆ ಮತ್ತು ಸಪೋಟಾ ಸೇರಿದಂತೆ ಒಟ್ಟಾರೆ 2081 ಹೆಕ್ಟೇರ್‌ ಪ್ರದೇಶದಲ್ಲಿ 29,131 ಮೆಟ್ರಿಕ್‌ ಟನ್‌ ಬೆಳೆಯಲಾಗಿದೆ. ಇದರಲ್ಲಿ ಹೆಚ್ಚಾಗಿ ಬಾಳೆ 807 ಮತ್ತು ಮಾವು 1148 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಟೊಮ್ಯಾಟೊ, ಈರುಳ್ಳಿ, ಹಸಿಮೆಣಸು, ಬದನೆ, ಬೆಂಡೆಕಾಯಿ, ಕೋಸು, ಪರಂಗಿ, ಬೂದುಗುಂಬಳ, ಕ್ಯಾಪ್ಸಿಕಂ ಮತ್ತು ಇತರೆ ತರಕಾರಿಗಳನ್ನು 2922 ಹೆಕ್ಟೇರ್‌ ಪ್ರದೇಶದಲ್ಲಿ 79,132 ಮೆಟ್ರಿಕ್‌ ಟನ್‌ ಬೆಳೆಯಲಾಗಿದೆ ಎಂದರು.

Advertisement

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ಡಾ| ವಿಜಯಮಹಾಂತೇಶ ದಾನಮ್ಮನವರ್‌, ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ, ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್‌, ಪದಾಧಿಕಾರಿಗಳಾದ ಪಾಪಣ್ಣ, ಮಹಾಂತೇಶ, ಕೃಷ್ಣಮೂರ್ತಿ, ಸುರೇಶ್‌, ಸೋಮಶೇಖರ್‌, ಇತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next