Advertisement

ಲಾಕ್‌ಡೌನ್‌ ಆತಂಕ: ಖರೀದಿಯ ಧಾವಂತ

09:49 PM May 09, 2021 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಸೋಮವಾರದಿಂದ ಕರ್ಫ್ಯೂವನ್ನು ಇನ್ನಷ್ಟು ಬಿಗಿಗೊಳಿಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು, ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್‌ ಆಗಬಹುದೆಂಬ ಆತಂಕದೊಂದಿಗೆ ಶನಿವಾರ ಅವಶ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿರುವುದು ಕಂಡು ಬಂತು. ಅವಶ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಿರುವ ಬೆಳಿಗ್ಗೆ 6ರಿಂದ 10ಗಂಟೆ ವರೆಗಿನ ಅವಧಿಯಲ್ಲಿ ಶನಿವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ದೊಡ್ಡ ಪ್ರಮಾಣದಲ್ಲಿ ಅವಶ್ಯಕ ವಸ್ತು ಖರೀದಿಯ ಧಾವಂತ ತೋರಿದರು.

Advertisement

ಹೀಗಾಗಿ ಬಹುತೇಕ ಎಲ್ಲ ದಿನಸಿ ಅಂಗಡಿಗಳ ಎದುರು ಗ್ರಾಹಕರ ಸಂಖ್ಯೆ ಅಧಿಕವಾಗಿರುವುದು ಗೋಚರಿಸಿತು. ಇನ್ನು ಈಗಾಗಲೇ ಮದುವೆ ದಿನಾಂಕ ನಿಗದಿ ಮಾಡಿಕೊಂಡವರು, ಸಣ್ಣ ವ್ಯಾಪಾರಸ್ಥರು ಹೋಲ್‌ಸೇಲ್‌ ಅಂಗಡಿಗಳಲ್ಲಿ ತಾಸುಗಟ್ಟಲೆ ನಿಂತು ದಿನಸಿ ಸಾಮಗ್ರಿಗಳನ್ನು ಖರೀದಿಸಿದರು. ಖರೀದಿ ಪ್ರಕ್ರಿಯ ಜೋರಾಗಿದ್ದರಿಂದ ಬೆಳಗಿನ ವೇಳೆ ಮಹಾನಗರದ ಬಹುತೇಕ ರಸ್ತೆಗಳು ಜನ, ವಾಹನ ಸಂಚಾರದಿಂದ ತುಂಬಿ ಹೋಗಿದ್ದವು. ಕೆಲವು ಪ್ರದೇಶಗಳಲ್ಲಿ ವಾಹನ ದಟ್ಟಣೆಯುಂಟಾಗಿ ಸುಗಮ ಸಂಚಾರಕ್ಕೂ ಅಡ್ಡಿಯಾಯಿತು. ಎಲ್ಲಿ ನೋಡಿದರೂ ಜನವೋ ಜನ, ಖರೀದಿಯೋ ಖರೀದಿ ಎನ್ನುವಂಥ ವಾತಾವರಣ ನಿರ್ಮಾಣವಾಗಿತ್ತು. ಬಹುತೇಕ ಯಾವ ಅಂಗಡಿಯಲ್ಲಿಯೂ ಅಂತರ ಕಾಯ್ದುಕೊಳ್ಳುವಿಕೆಯ ನಿಯಮ ಪಾಲನೆಯಾಗಿಲ್ಲ. ಇನ್ನು ಲಸಿಕಾ ಕೇಂದ್ರಗಳಲ್ಲಿಯೂ ಲಸಿಕೆ ಪಡೆಯಲು ಬಂದಿದ್ದ ನೂರಾರು ಜನ ಯಾವುದೇ ಅಂತರವಿಲ್ಲದೆ ಗುಂಪು ಗುಂಪಾಗಿ ನಿಂತಿದ್ದರು.

ಅಂಗಡಿ ಬಂದ್‌, ಬೈಕ್‌ ವಶ: ಮದುವೆ ಹಂಗಾಮು ಇದಾಗಿರುವುದರಿಂದ ನಗರದಲ್ಲಿ ಕೆಲವು ಜವಳಿ ವ್ಯಾಪಾರಸ್ಥರು ಮುಂಜಾನೆಯಿಂದಲೇ ಎದುರಿನ ಬಾಗಿಲು ಹಾಕಿ ಒಳಗೆ ವ್ಯಾಪಾರ ಮಾಡುತ್ತಿದ್ದರು. ಇನ್ನು ಕೆಲವರು ಅಂಗಡಿ ಮೇಲಿರುವ ತಮ್ಮ ಮನೆಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಚೌಕಿಪೇಟೆ, ಚಿಗಟೇರಿಗಲ್ಲಿ, ಕಾಯಿಪೇಟೆ, ವಿಜಯಲಕ್ಷ್ಮೀ ರಸ್ತೆ ಸೇರಿದಂತೆ ವಿವಿಧೆಡೆ ಭೇಟಿ ನೀಡಿದ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ವ್ಯಾಪಾರ ಬಂದ್‌ ಮಾಡಿಸಿದರು.

ಅಂಗಡಿ ಮುಚ್ಚಿಸಿ ವರ್ತಕರಿಗೆ 25 ಸಾವಿರ ರೂ.ಗಳಿಗೂ ಅಧಿಕ ಮೊತ್ತದ ದಂಡದ ಬಿಸಿಯನ್ನೂ ಮುಟ್ಟಿಸಿದರು. ಅವಶ್ಯಕ ವಸ್ತುಗಳ ಖರೀದಿಗೆ ನಿಗದಿಪಡಿಸಿದ ಸಮಯದ ಬಳಿಕ ರಸ್ತೆಯಲ್ಲಿ ಅನಗತ್ಯವಾಗಿ ಬೈಕ್‌ನಲ್ಲಿ ಓಡಾಡುತ್ತಿದ್ದವರ ಬೈಕ್‌ಗಳನ್ನು ನಗರದ ಹದಡಿ ರಸ್ತೆ, ಅರುಣ ವೃತ್ತ, ಜಯದೇವ ವೃತ್ತ , ಐಟಿಐ ಕಾಲೇಜು ರಸ್ತೆ, ಗುಂಡಿ ಸರ್ಕಲ್‌, ಕೊಂಡಜ್ಜಿ ರಸ್ತೆ ಸೇರಿದಂತೆ ಕೆಲವೆಡೆ ಪೊಲೀಸರು ವಶಪಡಿಸಿಕೊಂಡರು. ಅವಶ್ಯಕ ವಸ್ತುಗಳ ಖರೀದಿಯ ಬೆಳಗಿನ ಅವಧಿ ಬಳಿಕ ಅಂಗಡಿ ಮುಂಗಟ್ಟುಗಳು ಬಂದ್‌ ಆದವು. ಜನ, ವಾಹನ ಸಂಚಾರ ಸ್ಥಗಿತಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next