ಹೊನ್ನಾಳಿ: ಕೊರೊನಾ ಬಗ್ಗೆ ಅವಳಿ ತಾಲೂಕಿನ ಜನರು ತಾತ್ಸಾರ ಮಾಡುತ್ತಿದ್ದಾರೆ. ಜನರನ್ನು ಎಚ್ಚರಗೊಳಿಸಲು ಅಧಿ ಕಾರಿಗಳು ಕರ್ತವ್ಯ ನಿಷ್ಠೆ ತೋರಿಸಿ ಕೆಲಸ ಮಾಡುವುದು ಅನಿವಾರ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ತಾಲೂಕಿನ ಹಾಗೂ ಇತರ ಜಿಲ್ಲೆಗಳ ಜನರು ಸಂಕಷ್ಟದಲ್ಲಿರುವುದನ್ನು ಮನಗಂಡು ರಾಜ್ಯದ 6 ವಿಭಾಗದಲ್ಲಿ ಸಹಾಯವಾಣಿ ಆರಂಭಿಸಿದ್ದು, ಆರು ಜನರನ್ನು ನೇಮಕ ಮಾಡಿದ್ದೇನೆ. ಅವರು ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಅವರಿಗೂ ಮೀರಿದರೆ ನನಗೆ ದೂರವಾಣಿ ಕರೆ ಮಾಡುತ್ತಾರೆ. ನಾನು ತಕ್ಷಣ ಕಾರ್ಯಪ್ರವೃತ್ತನಾಗಿ ಕೆಲಸ ಮಾಡಿಕೊಡುತ್ತೇನೆ. ಆದರೆ ಅಧಿಕಾರಿಗಳು ಮಾತ್ರ ತಾತ್ಸಾರ ಮನೋಭಾವದಿಂದ ಇದ್ದಾರೆ. ನಾನು ತಾಲೂಕಿಗೆ ಬಂದಾಗ ಮಾತ್ರ ಕೆಲಸ ಮಾಡಿದಂತೆ ನಾಟಕವಾಡುತ್ತಿದ್ದಾರೆ. ಇದು ಸಲ್ಲದು ಎಂದು ತಾಕೀತು ಮಾಡಿದರು.
ಸ್ಥಳೀಯವಾಗಿ ವಾಸ ಮಾಡಿ: ತಾಲೂಕು ಮಟ್ಟದ ಹಲವಾರು ಅಧಿ ಕಾರಿಗಳು ತಾಲೂಕು ಕೇಂದ್ರದಲ್ಲಿ ವಾಸ ಮಾಡದೆ ದಾವಣಗೆರೆ, ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ವಾಸ ಮಾಡುತ್ತಿದ್ದಾರೆ. ನೌಕರಿಗೆ ಮಾತ್ರ ತಾಲೂಕಿಗೆ ಬಂದು ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿಇದು ಮುಂದುವರಿದರೆ ಅಂತಹ ಅ ಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಕೊರೊನಾ ಮೊದಲ ಅಲೆ ಅಪ್ಪಳಿಸಿದಾಗ ನಾನು ಬಡವರಿಗೆ ಫುಡ್ ಕಿಟ್, ಮಧ್ಯಾಹ್ನದ ಊಟ, ಮಾಸ್ಕ್ ಹಾಗೂ ಔಷ ಧಗಳನ್ನು ವಿತರಿಸುವ ಕಾರ್ಯ ಹಮ್ಮಿಕೊಂಡಿದ್ದೆ. ಈಗಲೂ ಬಡವರಿಗೆ ಔಷಧೋಪಚಾರಗಳನ್ನು ನನ್ನ ಸ್ವಂತ ಖರ್ಚಿನಲ್ಲಿ ವಿತರಿಸುತ್ತೇನೆ. ಆದರೆ ಇದು ದುರುಪಯೋಗವಾಗಬಾರದು ಎಂದರು.
ತಹಶೀಲ್ದಾರ್ ಬಸನಗೌಡ ಕೋಟೂರ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ವಾಸಿಸದ ಅ ಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗುರುವಾರದಿಂದ ಎಲ್ಲಾ ಅ ಧಿಕಾರಿಗಳು ತಮ್ಮ ನಿವಾಸದ ಬಗ್ಗೆ ಭಾವಚಿತ್ರದೊಂದಿಗೆ ಸಂಪೂರ್ಣ ಮಾಹಿತಿ ನೀಡಬೇಕು. ತಾಲೂಕು ಕಚೇರಿಯಲ್ಲಿ ಕೊರೊನಾ ಸಂಬಂಧ ಸಹಾಯವಾಣಿ ತೆರೆದು ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಮಸ್ಯೆಗೊಳಗಾದವರು ದೂರವಾಣಿ: 08188251025ಗೆ ಕರೆ ಮಾಡಿ ತಿಳಿಸಬಹುದು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಶ್ರೀಧರ್, ನ್ಯಾಮತಿ ತಹಶೀಲ್ದಾರ್ ತನುಜಾ ಸೌದತ್ತಿ ಇತರರು ಇದ್ದರು.