ದಾವಣಗೆರೆ: ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಕೋವಿಡ್ ಲಸಿಕೆ ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ದೂರಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ದಿನ ಸಾವಿರಾರು ಜನರು ಕೋವಿಡ್ ಲಸಿಕೆಗಾಗಿ ಲಸಿಕಾ ಕೇಂದ್ರಕ್ಕೆ ಅಲೆಯುವಂತಾಗಿದೆ. ಬೆಳಗ್ಗೆಯಿಂದ ಕಾಯುವುದು ಸಾಮಾನ್ಯವಾಗಿದೆ. ಲಸಿಕೆಗಳ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಸರಿಯಾದ ಮಾಹಿತಿ ನೀಡಬೇಕು. ಕೇಂದ್ರಗಳ ಮುಂದೆ ಲಸಿಕೆ ಲಭ್ಯತೆಯ ಬಗ್ಗೆ ಪ್ರಚುರಪಡಿಸಬೇಕು. ಕೊರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಲಸಿಕೆಯನ್ನು ಸಮರ್ಪಕ ಪ್ರಮಾಣದಲ್ಲಿ ಪೂರೈಕೆ ಮಾಡಿ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ನಿಯಂತ್ರಣಕ್ಕೆ ಲಸಿಕೆಯೇ ಸೂಕ್ತ ಪರಿಹಾರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಹೇರುವುದಕ್ಕೆ ಶ್ರಮ ವ್ಯಯ ಮಾಡುವ ಬದಲಿಗೆ ಲಸಿಕೆ ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಕೊರೊನಾ ಲಸಿಕೆ ನೀಡಿದ್ದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆ ಆಗುತ್ತಿತ್ತು. ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್, ಆಕ್ಸಿಜನ್ ಬೆಡ್ ಕೊರತೆಯೇ ಕಂಡು ಬರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಒಂದು ಮಾಹಿತಿ ಪ್ರಕಾರ ರಾಜ್ಯ ಸರ್ಕಾರ ಲಸಿಕೆ ಕಂಪನಿಗಳಿಗೆ 4,500 ಕೋಟಿ ರೂ. ನೀಡಬೇಕಿದೆ. ಅಷ್ಟೊಂದು ಹಣ ಕೊಡದೇ ಇದ್ದಾಗ ಯಾವ ಕಂಪನಿಗಳೂ ಲಸಿಕೆ ನೀಡುವುದಿಲ್ಲ. ಲಸಿಕೆ ಇಲ್ಲದಿದ್ದರೂ 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ನೀಡಲಾಗುವುದು ಎಂದು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲಾಯಿತು. ಇಂತಹ ಸುಳ್ಳು ಪ್ರಚಾರ ಏಕೆ ಎಂದು ಪ್ರಶ್ನಿಸಿದರು. ದಾವಣಗೆರೆ ಜಿಲ್ಲೆಗೆ ಪ್ರತಿ ದಿನಕ್ಕೆ 15 ಸಾವಿರ ಡೋಸ್ ಲಸಿಕೆ ಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಲಸಿಕೆ ಜಿಲ್ಲೆಗೆ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಲಬರುಗಿ ಸಂಸದರಿಗೆ ರೆಮ್‌ಡಿಸಿವರ್ ಇಂಜೆಕ್ಷನ್ ದೊರೆಯುವಾಗ ನಮ್ಮ ಸಂಸದರಿಗೆ ಲಸಿಕೆ ಸಿಗದಂತಾಗಿದೆ. ಕೂಡಲೇ ಎಲ್ಲ ಕಡೆ ಲಸಿಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಒಟ್ಟು 41 ವೆಂಟಿಲೇಟರ್‌ಗಳಲ್ಲಿ 20 ಕೆಲಸ ಮಾಡುತ್ತಿವೆ. 21 ವೆಂಟಿಲೇಟರ್ ಕಾರ್ಯ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಇಲ್ಲ ಎಂದು ಹೇಳಲಾಗುತ್ತಿದೆ. ಅಗತ್ಯ ಸಿಬ್ಬಂದಿಗೆ ನಿಯೋಜನೆಗೆ ಒಂದು ವರ್ಷ ಬೇಕು ಎಂದರೆ ಹೇಗೆ, ಮಹಾನಗರ ಪಾಲಿಕೆಯ ಸಹಾಯಕ ಎಂಜಿನಿಯರ್ ರಾಮಚಂದ್ರಪ್ಪ ಎಂಬುವವರು ವೆಂಟಿಲೇಟರ್ ಇಲ್ಲದೆ ತೀವ್ರ ಅಸ್ವಸ್ಥರಾಗಿದ್ದರು. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗಮನಕ್ಕೆ ತಂದ ನಂತರ ಎಸ್. ಎಸ್. ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಲಾಯಿತು. ಸರ್ಕಾರಿ ಅಧಿಕಾರಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಅಬ್ದುಲ್ ಲತೀಫ್, ಇಟ್ಟಿಗುಡಿ ಮಂಜುನಾಥ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.