ದಾವಣಗೆರೆ: ಆಖೀಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯ ಮಟ್ಟದ ಸಮಾವೇಶ ಜ. 23 ಮತ್ತು 24 ರಂದು ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ನಿಸರ್ಗಧಾಮದಲ್ಲಿ ನಡೆಯಲಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಮಹದೇವಯ್ಯ ಮಠಪತಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ರಾಜ್ಯ ಸಮಾವೇಶದಲ್ಲಿ ನೌಕರರಿಗೆ ಆಗುತ್ತಿರುವ ಸಮಸ್ಯೆ, ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ಚರ್ಚಿಸಿ, ಠರಾವು ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯೂ ನಡೆಯಲಿದೆ ಎಂದರು.
ಇದನ್ನೂ ಓದಿ : ‘ಯುಪಿಎಸ್ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ
ಶನಿವಾರ ಮಧ್ಯಾಹ್ನ 1:30ಕ್ಕೆ ಮೇಯರ್ ಬಿ.ಜಿ. ಅಜಯ್ಕುಮಾರ್ ರಾಜ್ಯ ಸಮಾವೇಶ ಉದ್ಘಾಟಿಸುವರು.ಡಿಸಿ ಮಹಾಂತೇಶ ಜಿ. ಬೀಳಗಿ, ದಾವಣಗೆರೆ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್ ಇತರರು ಭಾಗವಹಿಸುವರು. ಒಕ್ಕೂಟದ ಗೌರವಾಧ್ಯಕ್ಷ ರೇಣುಕಾರಾಧ್ಯ ಅಧ್ಯಕ್ಷತೆ ವಹಿಸುವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೌಕರ ವರ್ಗದ ಪಾತ್ರ, ಸಮಸ್ಯೆಗಳು ಮತ್ತು ಸವಾಲುಗಳು ವಿಷಯದ ಕುರಿತು ಡಾ| ಕಿರಣ್ ಎಂ. ಗಾಜನೂರು ಉಪನ್ಯಾಸ ನೀಡುವರು. 24 ರಂದು ಬೆಳಗ್ಗೆ 9:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಎನ್.ಇ.ನಟರಾಜ್, ಎಚ್.ಎಚ್. ಜೈಕುಮಾರ್ ಭಾಗವಹಿಸುವರುಎಂದರು.
ರಾಜ್ಯದಲ್ಲಿ 2.5 ಲಕ್ಷದಷ್ಟು ಹುದ್ದೆ ಖಾಲಿ ಇವೆ. ಸರ್ಕಾರ ಹೊಸ ನೇಮಕಾತಿಗೆ ಮುಂದಾಗುತ್ತಿಲ್ಲ. ದೇಶದಲ್ಲಿ ಅತಿ ಕಡಿಮೆ ವೇತನ ಪಡೆಯುತ್ತಿದ್ದಾರೆ. ಆದರೂ ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿರುವುದಕ್ಕೆ ನೌಕರರು ದಕ್ಷತೆಯಿಂದ ಕೆಲಸ ಮಾಡುತ್ತಿರುವುದೇ ಕಾರಣ. ಹೊಸ ನೇಮಕಾತಿ ಬದಲಿಗೆ ಒಂದು ಹುದ್ದೆಗೆ 3-4 ಜನರನ್ನು ಹೊರ ಗುತ್ತಿಗೆ ಆಧಾರದಲ್ಲಿ ನಿಯೋಜಿಸುವ ಮೂಲಕ ಸರ್ಕಾರವೇ ನೌಕರರ ಮತ್ತು ಕಾರ್ಮಿಕರ ಶೋಷಣೆ ಮಾಡುತ್ತಿದೆ. ಏಜೆನ್ಸಿಗಳು ಮತ್ತು ಹಿರಿಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿರುವರೇ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವಾಗ ನೌಕರರ ಸಮಸ್ಯೆ, ಬೇಡಿಕೆ ಈಡೇರಿಸಲಿಕ್ಕೆ ಆಗುವುದಿಲ್ಲ. ನಮ್ಮ ಪ್ರಕಾರ ಸಂಘ ಸರ್ಕಾರದ ಕೃಪಾಪೋಷಿತ ಮಂಡಳಿ ಇದ್ದಂತೆ. ಮಾತುಕತೆಯ ಮೂಲಕ ಬೇಡಿಕೆ ಈಡೇರಿಸುತ್ತೇವೆ ಎಂದು ಅವರು ಹೇಳುತ್ತಾರೆ. ನಾವು ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯುತ್ತೇವೆ ಎಂದು ಹೇಳುತ್ತೇವೆ. ಈಗಲಾದರೂ ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ : ಮರಳಿ ಕಾಡು ಸೇರಿದ ಹೆಬ್ಟಾವು
ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷ ಎನ್.ಇ. ನಟರಾಜ್, ಗೋವಿಂದರಾಜ್, ಗೋವಿಂದಪ್ಪ ಸಾವಜ್ಜಿ, ಕೆ. ರೇವಣಸಿದ್ದಪ್ಪ, ಡಿ. ರಮೇಶ್, ಕೆ.ಎನ್. ರಂಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.