ದಾವಣಗೆರೆ: ಕೊರೊನಾ ಸೋಂಕಿತರ ಮನೆಯವರು, ಎಸ್‌ಎಆರ್‌ಐ (ಸಾರಿ) ಮತ್ತು ಐಎಲ್‌ಐ ಪ್ರಕರಣಗಳಲ್ಲಿ ಮಾತ್ರವೇ ಕೋವಿಡ್ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಸೂಚಿಸಿದ್ದಾರೆ.
ಗುರುವಾರ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ನಡೆದ ವಿಡಿಯೋ ಸಂವಾದದ ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಪರೀಕ್ಷೆ ಮಾಡಲು ಇರುವ 36 ತಂಡಗಳನ್ನು ಸಮರ್ಪಕವಾಗಿ ಬಳಸಿಕೊಂಡು ಎಸ್‌ಎಆರ್‌ಐ (ಸಾರಿ) ಮತ್ತು ಐಎಲ್‌ಐ ಪ್ರಕರಣ ಹಾಗೂ ಸೋಂಕಿತರ ಮನೆಯವರಿಗೆ ಮಾತ್ರ ಪರೀಕ್ಷೆ ಮಾಡಬೇಕು.
ಉಳಿದಂತೆ ಬೇರೆಯವರಿಗೆ ಅನಗತ್ಯ ಪರೀಕ್ಷೆ ಮಾಡಿದ್ದು ಗಮನಕ್ಕೆ ಬಂದರೆ ಅದಕ್ಕೆ ಜಿಲ್ಲಾ ಸರ್ವೇಕ್ಷಣಾ ಧಿಕಾರಿಗಳು ನೇರ ಹೊಣೆಯಾಗಲಿದ್ದು, ಅವರಿಂದ ಹಣ ವಸೂಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಜನರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಬರುತ್ತಿದ್ದಾರೆ.
ದಿನಕ್ಕೆ ಇಷ್ಟೇ ಜನ ಎಂದು ಸೀಮಿತಗೊಳಿಸಿ, ಯೋಜನೆ ರೂಪಿಸಿಕೊಂಡು ಲಸಿಕೆ ನೀಡಬೇಕು ಎಂದು ಸಂಬಂಧಿತರಿಗೆ ಸೂಚಿಸಿದರು. ವೈದ್ಯಕೀಯ ತಜ್ಞರ ಸಲಹೆಯ ಆಧಾರದ ಮೇಲೆ ಆಕ್ಸಿಜನ್ ಹಾಗೂ ಬೆಡ್ ನೀಡಬೇಕು. ಬೆಡ್‌ನ ಅವಶ್ಯವಿಲ್ಲದೆಯೂ ಬೆಡ್‌ಗಾಗಿ ಒತ್ತಾಯಿಸಿದರೆ ಅಂತಹವರಿಗೆ ಬೆಡ್ ಕೊಡಬೇಡಿ. ಖಾಸಗಿ ಆಸ್ಪತ್ರೆಯವರು ಸ್ವಲ್ಪ ಹಣ ಖರ್ಚು ಮಾಡಿ ತಮ್ಮ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಪ್ರಮಾಣ ಜಾಸ್ತಿ ಮಾಡಿಕೊಂಡು ಜನರನ್ನು ರಕ್ಷಣೆ ಮಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೋವಿಡ್ ಲಸಿಕೆ, ರೆಮಿಡೆಸಿವರ್ ಸೇರಿದಂತೆ ಇತರೆ ಔಷ ಧಿಗಳು ಮತ್ತು ಆಕ್ಸಿಜನ್, ಬೆಡ್‌ಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹೊರಭಾಗದಿಂದ ಬಂದವರಿಗೆ ಕೋವಿಡ್ ಲಕ್ಷಣವಿದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿ ಫಲಿತಾಂಶ ಬರುವವರೆಗೆ ಅವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸೋಂಕಿತರ ಮನೆಗಳಲ್ಲಿ ಉತ್ತಮ ವ್ಯವಸ್ಥೆ ಇದ್ದರೆ ಮನೆಗಳಲ್ಲೆ ಕ್ವಾರಂಟೈನ್ ಮಾಡಬೇಕು. ಹೋಂ ಐಸೋಲೇಶನ್ ಮಾಡಲು ಸೂಕ್ತ ವಾತಾವರಣ ಇಲ್ಲದ ಪಕ್ಷದಲ್ಲಿ ಅಂತಹವರನ್ನು ಕೋವಿಡ್ ಸೆಂಟರ್‌ಗೆ ಕರೆ ತಂದು ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.