ಎಚ್.ಕೆ. ನಟರಾಜ
ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಮಹಾನಗರ, ನಗರ, ಪಟ್ಟಣಗಳಲ್ಲಿರುವ ಲಕ್ಷಾಂತರ ವಲಸಿಗರು ತಮ್ಮ ಹಳ್ಳಿಗಳಿಗೆ ತೆರಳಿದ್ದು, ಅಲ್ಲಿ ಸೋಂಕು ಹಬ್ಬುವುದನ್ನು ತಡೆಯಲು ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ಕಾರ್ಯ ಚುರುಕುಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಹೊಸ ಸುತ್ತೋಲೆ ಹೊರಡಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಹಾಗೂ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಕಳೆದ ವರ್ಷವೇ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಗ್ರಾಪಂ ಮಟ್ಟದ ಕಾರ್ಯಪಡೆ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಗಳನ್ನು ರಚಿಸಿತ್ತು. ವಲಸಿಗರಿಂದ ಹಳ್ಳಿಗಳಲ್ಲಿಯೂ ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಈ ಕಾರ್ಯಪಡೆಗಳನ್ನು ಮತ್ತೆ ಕೊರೊನಾ ಕಾರ್ಯಕ್ಕೆ ಅಣಿಗೊಳಿಸಲು ಮುಂದಾಗಿದೆ. ಕಾರ್ಯಪಡೆಗಳ ಕಾರ್ಯವೈಖರಿಗಳ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ಎಲ್ಲ ಗ್ರಾಪಂಗಳಿಗೆ ಅನ್ವಯಿಸುವಂತೆ ಏ. 28ರಂದು ಹೊಸ ಸುತ್ತೋಲೆ ಹೊರಡಿಸಿದ್ದಾರೆ.
ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಹಿಂದಿರುಗುವ ವಲಸೆ ಕಾರ್ಮಿಕರಿಗೆ, ಮಹಿಳಾ ಕಾರ್ಮಿಕರಿಗೆ ಮತ್ತು ದುರ್ಬಲ ವರ್ಗದವರಿಗೆ ಊಟ, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಒದಗಿಸಬೇಕು. ವಿಶೇಷವಾಗಿ ನಿರ್ಗತಿಕರಿಗೆ, ದುರ್ಬಲರಿಗೆ, ದಿವ್ಯಾಂಗರಿಗೆ, ಮಾಜಿ ದೇವದಾಸಿಯರಿಗೆ, ತೃತೀಯ ಲಿಂಗಿಗಳಿಗೆ, ಮಹಿಳೆಯರಿಗೆ ಸ್ವಯಂ ಸೇವಕರಿಗೆ ಅವಶ್ಯ ಸೌಲಭ್ಯ ಒದಗಿಸಬೇಕು. ಗ್ರಾಪಂ ಸಹಾಯವಾಣಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಕೊರೊನಾ ತಡೆಗಟ್ಟುವ ಕಾರ್ಯ ನಿರ್ವಹಿಸುವ ಸ್ವಯಂಸೇವಕರನ್ನು ಗುರುತಿಸಿ,ಅವರ ದೂರವಾಣಿ ಸಂಖ್ಯೆ ಪ್ರಕಟಿಸಿ, ಹಗಲು-ರಾತ್ರಿ ಪಾಳಿ ವ್ಯವಸ್ಥೆಯಲ್ಲಿ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಅನುದಾನ ಬಳಸಿ: ಗ್ರಾಪಂಗಳು ಮಾಸ್ಕ್, ಸಾಬೂನು, ಸ್ಯಾನಿಟೈಸರ್ ಮುಂತಾದ ಸ್ವತ್ಛತಾ ಪರಿಕರಗಳು, ಊಟ, ಇತ್ಯಾದಿಗಾಗಿ 14ನೇ ಹಣಕಾಸು ಆಯೋಗದ ಉಳಿಕೆ ಅನುದಾನ, 15ನೇ ಹಣಕಾಸು ಆಯೋಗದ ಅನುದಾನ ಇಲ್ಲವೇ ಸ್ವಂತ ಸಂಪನ್ಮೂಲ ಉಪಯೋಗಿಸಿಕೊಳ್ಳಬೇಕು. ಗ್ರಾಪಂ ಕಾರ್ಯಪಡೆ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಗಳನ್ನು ಲಸಿಕಾಕರಣದ ನೆರವಿಗೂ ಬಳಸಿಕೊಳ್ಳಬೇಕು. ಅರ್ಹ ವ್ಯಕ್ತಿಗಳಿಗೆ ಲಸಿಕೆ ಕೊಡಿಸುವಲ್ಲಿ ಕಾರ್ಯಪಡೆ ಕೆಲಸ ಮಾಡಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.
ಕಾರ್ಯಪಡೆಯಲ್ಲಿ ಯಾರಿದ್ದಾರೆ?
ಗ್ರಾಪಂ ಮಟ್ಟದ ಕಾರ್ಯಪಡೆಯಲ್ಲಿ ಗ್ರಾಪಂ ಆಡಳಿತಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು, ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರು, ಕೇಂದ್ರ ಸ್ಥಾನದ ಗ್ರಾಮ ಲೆಕ್ಕಾಧಿಕಾರಿ ಇಲ್ಲವೇ ಕಂದಾಯ ನಿರೀಕ್ಷಕರು, ಹೋಬಳಿ ಕೇಂದ್ರ ಸ್ಥಾನವಾಗಿದ್ದಲ್ಲಿ ಉಪ ತಹಶೀಲ್ದಾರ್, ಸ್ಥಳೀಯ ಪೊಲೀಸ್ ಠಾಣೆಯ ಪ್ರತಿನಿಧಿ, ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಥವಾ ಅವರ ಪ್ರತಿನಿಧಿ, ಅಂಗನವಾಡಿ ಮೇಲ್ವಿಚಾರಕರು ಅಥವಾ ಅವರ ಪ್ರತಿನಿಧಿ, ಎಎನ್‌ಎಂ ಅಥವಾ ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಪ್ರತಿನಿಧಿ, ಗ್ರಾಮ ಮಟ್ಟದ ಪುನರ್ ವಸತಿ ಕಾರ್ಯಕರ್ತರು, ಸ್ಥಳೀಯವಾಗಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಸ್ವಯಂಸೇವಕರು ಕಾರ್ಯಪಡೆಯ ಸದಸ್ಯರಾಗಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯಪಡೆಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಗ್ರಾಮಮಟ್ಟದ ಕಾರ್ಯಪಡೆಯಲ್ಲಿ ಗ್ರಾಮದ ಮತಗಟ್ಟೆ ಅಧಿಕಾರಿಗಳು ಸಂಚಾಲಕರಾಗಿದ್ದಾರೆ. ಉಳಿದಂತೆ ವೈದ್ಯಾಧಿಕಾರಿಗಳು ಅಥವಾ ಅವರ ಪ್ರತಿನಿಧಿ, ಗ್ರಾಮ ಲೆಕ್ಕಿಗರು, ಗ್ರಾಮದ ಎಲ್ಲ ಆಶಾ ಕಾರ್ಯಕರ್ತೆಯರು, ವಾಟರ್ ಮ್ಯಾನ್ (ನೀರುಗಂಟಿ), ಎಲ್ಲ ಕೊರೊನಾ ಯೋಧರು ಈ ಕಾರ್ಯಪಡೆಯ ಸದಸ್ಯರಾಗಿದ್ದಾರೆ.