ದಾವಣಗೆರೆ: ಕೊರೊನಾದ ಸಣ್ಣ ಪ್ರಮಾಣದಲ್ಲಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಪರೀಕ್ಷೆ ಮಾಡಿಸಿಕೊಂಡು ಆಸ್ಪತ್ರೆಗೆ ದಾಖಲಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಮನವಿ ಮಾಡಿದ್ದಾರೆ.
ಮಂಗಳವಾರ ಮೋತಿ ವೀರಪ್ಪ ಕಾಲೇಜಿನ ಲಸಿಕಾಕರಣ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದ ಲಕ್ಷಣಗಳು ಕಾಣಿಸಿಕೊಂಡ ನಂತರವೂ ಕೆಲವರು ಸ್ವಯಂ ಚಿಕಿತ್ಸೆ ಪಡೆದುಕೊಳ್ಳುವುದು, ಜ್ವರ ಮತ್ತಿತರೆ ಸಮಸ್ಯೆಗೆ ಸಣ್ಣಪುಟ್ಟ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡು ಸಮಸ್ಯೆ ಉಲ್ಬಣವಾದಾಗ ಆಸ್ಪತ್ರೆಗೆ ಬರುವುದು ಕಂಡು ಬರುತ್ತಿದೆ. ಸಣ್ಣ ಪ್ರಮಾಣದಲ್ಲಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಪರೀಕ್ಷೆ ಮಾಡಿಸಿಕೊಂಡು ಆಸ್ಪತ್ರೆಗೆ ದಾಖಲಾಗಬೇಕು ಎಂದು ಮನವಿ ಮಾಡಿದರು.
ಕೋವಿಡ್‌ನ ಮೊದಲನೇ ಅಲೆಯಲ್ಲಿ ಜ್ವರ, ಕೆಮ್ಮು, ಸುಸ್ತು ಮುಂತಾದ ಲಕ್ಷಣಗಳು ಕಂಡು ಬರುತ್ತಿದ್ದವು. ಕೊರೊನಾದ 2ನೇ ಅಲೆಯಲ್ಲಿ ಲಕ್ಷಣಗಳು ಬದಲಾಗಿವೆ. ತಲೆನೋವು, ಭೇದಿ, ಕಣ್ಣು ಕೆಂಪಾಗುವುದು ಮುಂತಾದ ಲಕ್ಷಣ ಕಂಡು ಬರುತ್ತಿವೆ ಎಂದು ತಜ್ಞ ವೈದ್ಯರ ಸಮಿತಿ ತಿಳಿಸಿದೆ. ಹಾಗಾಗಿ ಲಕ್ಷಣಗಳು ಕಂಡ ಬಂದ ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಆಸ್ಪತ್ರೆಗೆ ದಾಖಲಾಗಬೇಕು ಎಂದರು. ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಬೆಡ್‌ಗಳ ಕೊರತೆಯೇ ಇಲ್ಲ. ತಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ. ಈವರೆಗೆ ಯಾವುದೇ ರೋಗಿ ವೆಂಟಿಲೇಟರ್‌ಗೆ ಹೋಗಿಲ್ಲ. ಶೇ.60 ರಷ್ಟು ಆಕ್ಸಿಜನ್ ಬೆಡ್ ಖಾಲಿ ಇವೆ. ಆಕ್ಸಿಜನ್ ಬೆಡ್‌ಗಳ ನಿರ್ವಹಣೆಗಾಗಿಯೇ ಸಮಿತಿ ಇದೆ. ಆಕ್ಸಿಜನ್ ಬೆಡ್‌ಗಳನ್ನು ಸಹ ಬಹಳ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಯಾರಿಗೆ ಆಕ್ಸಿಜನ್, ಎಷ್ಟು ಗಂಟೆ ಬೇಕಾಗುತ್ತದೆಯೋ ಅಷ್ಟು ಗಂಟೆ ಆಕ್ಸಿಜನ್ ಬೆಡ್‌ನಲ್ಲಿ ವ್ಯವಸ್ಥೆ ಮಾಡಲಾಗುವುದು. ನಂತರದಲ್ಲಿ ಬೇರೆಯವರಿಗೆ ಆಕ್ಸಿಜನ್ ಬೆಡ್ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಗೆ ಈ ಹಿಂದೆ 7 ಸಾವಿರ ಡೋಸ್ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬರುತ್ತಿತ್ತು. ಪ್ರಾರಂಭಿಕ ಹಂತದಲ್ಲಿ ಜನರು ಲಸಿಕೆ ಪಡೆದುಕೊಳ್ಳಲಿಕ್ಕೆ ಮುಂದೆ ಬರುತ್ತಿರಲಿಲ್ಲ. ಸ್ವತಃ ನಾನು, ಜಿಲ್ಲಾ ರಕ್ಷಣಾಧಿಕಾರಿ ಇತರರು ಮಾದರಿಯಾಗಿ ಲಸಿಕೆ ಪಡೆದುಕೊಂಡು, ಏನು ಆಗುವುದಿಲ್ಲ ಎಂದು ತಿಳಿಸಿದರು ಜನರು ಬರುತ್ತಾ ಇರಲಿಲ್ಲ. ಕೊರೊನಾ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಾದಿಯಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲಾಡಳಿತ ಎಲ್ಲರಿಗೂ ಕೋವಿಡ್ ಲಸಿಕೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದೆ.
ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು. ಸೋಮವಾರ ದಾವಣಗೆರೆ ಜಿಲ್ಲೆಗೆ 6 ಸಾವಿರ ಡೋಸ್ ಲಸಿಕೆ ಬಂದಿವೆ. ದಾವಣಗೆರೆಗೆ 4 ಸಾವಿರ ಡೋಸ್ ನೀಡಲಾಗಿದೆ. ಇನ್ನುಳಿದ ಕಡೆ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿತ್ತು. ಈಗ ದಿನಕ್ಕೆ 150, 200 ಕೊರೊನಾ ಸೋಂಕಿತರು ಬರುತ್ತಿದ್ದಾರೆ.
ಅಂತಹ ಕಡೆ ಹಿರಿಯ ನಾಗರಿಕರು ಗಂಟೆ, ಅರ್ಧ ಗಂಟೆ ಇದ್ದಾಗ ಅವರಿಗೆ ಏನಾದರೂ ಆದರೆ ಎಂದು ವೈದ್ಯರು ಹೇಳಿದ್ದರಿಂದ ಮೋತಿ ವೀರಪ್ಪ ಕಾಲೇಜಿನಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆ ಹೊರತುಪಡಿಸಿ ಇನ್ನುಳಿದ ಲಸಿಕಾ ಕೇಂದ್ರದಲ್ಲಿ ಲಸಿಕಾಕರಣ ಮುಂದುವರಿಯಲಿದೆ ಎಂದು ತಿಳಿಸಿದರು.
ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದ ಮಹಿಳೆ ವೆಂಟಿಲೇಟರ್ ದೊರೆಯದೆ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ಮಿತ್ರರು ಹೇಳುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಯಿಂದ ಮಾಹಿತಿ ಪಡೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.