ಹೊನ್ನಾಳಿ: ಸಂಗೀತ ಮನಸ್ಸಿಗೆ ಮುದ ನೀಡುವ ಅನನ್ಯ ಕಲೆಯಾಗಿದೆ ಎಂದು ಹಿರೇಕಲ್ಮಠದ ಒಡೆಯರ್ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ದಿಡಗೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ “ಅಂಜಿಕೆ ಕಳೆವನು ಹನುಮಂತ’ ಎಂಬ ಶೀರ್ಷಿಕೆಯ ಧ್ವನಿಸುರುಳಿ ಬಿಡುಗಡೆ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.
ಸಂಗೀತವನ್ನು ಚಿಕಿತ್ಸಾ ಪದ್ಧತಿಯನ್ನಾಗಿಯೂ ಬಳಸಲಾಗುತ್ತಿದೆ. ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡಿದ ಉದಾಹರಣೆಗಳು ಇವೆ. ಎಲ್ಲರೂ ಸಂಗೀತವನ್ನು ಆಲಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ರಂಗಕರ್ಮಿ ದಿ| ಏಣಗಿ ಬಾಳಪ್ಪ ಅವರ ಮೊಮ್ಮಗ ಆನಂದ್ ಮನಗೂಳಿ ಅವರಿಗೆ ಸೇರಿದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಗೀತ ರಚನೆಕಾರ ದಿಡಗೂರು ಗ್ರಾಮದ ಡಿ.ಎಂ. ಮೋಹನ್‌ಕುಮಾರ್ ಉದ್ಯೋಗಿಯಾಗಿದ್ದಾರೆ.
ಆನಂದ್ ಮನಗೂಳಿಯವರು ಡಿ.ಎಂ. ಮೋಹನ್‌ಕುಮಾರ್ ಅವರಿಗೆ ಒಂದು ಲಕ್ಷ ರೂ. ಚೆಕ್ ನೀಡಿದರು. ಆನಂದ್ ಮನಗೂಳಿ ಅವರನ್ನು ಸನ್ಮಾನಿಸಲಾಯಿತು. ದಿಡಗೂರು ಗ್ರಾಮದ ಸಿದ್ಧಾರೂಢ ಮಠದ ಶ್ರೀ ಪಾಂಡುರಂಗಾನಂದ ಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಬಿಜೆಪಿ ಮುಖಂಡ ಎಂ.ಪಿ. ರಮೇಶ್, ಹೊನ್ನಾಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಬಿ. ವೇದಮೂರ್ತಿ, ಎಪಿಎಂಸಿ ನಿರ್ದೇಶಕ ಎ.ಜಿ.ಪ್ರಕಾಶ್, ಹಾನಗಲ್‌ನ ಡಾ| ವೆಂಕಟೇಶ್ ವಿ. ಪೂಜಾರ್, ಎಂ.ಬಿ. ತಿಪ್ಪೇಶಪ್ಪ, ಅಂಜನಾ ಗುರುಮೂರ್ತಿ, ಎಂ.ಬಿ. ಹನುಮಂತಪ್ಪ, ಬಿ.ಎಚ್. ಗೋಪಾಲಪ್ಪ ಮತ್ತಿತರರು ಮಾತನಾಡಿದರು.
ದಿಡಗೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಅಣ್ಣಪ್ಪ ಸ್ವಾಮೀಜಿ, ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಎ.ಜಿ. ಚನ್ನಪ್ಪ ನಂದೇರ, ಮಾಜಿ ಸೈನಿಕ ಹನುಮಂತಪ್ಪ, ಹರಳಹಳ್ಳಿ ಗ್ರಾಪಂ ಅಧ್ಯಕ್ಷೆ ನಿರ್ಮಲಾ ವಿರೂಪಾಕ್ಷಪ್ಪ, ಉಪಾಧ್ಯಕ್ಷ ಡಿ. ಹಾಲೇಶ್, ಸದಸ್ಯರಾದ ಎನ್. ನಿಂಗಪ್ಪ, ಸವಿತಾ ರಾಜಪ್ಪ, ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದೇಶ್, ರೈತ ಮುಖಂಡ ಡಿ.ಎಂ. ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.
ಓದಿ :
ಪಂಚರಾಜ್ಯ ಚುನಾವಣೆ : ಫೇಸ್ ಬುಕ್ ಜಾಹಿರಾತು : ಅತಿ ಹೆಚ್ಚು ಖರ್ಚು ಮಾಡಿದ ಪಕ್ಷ ಯಾವುದು ?