Advertisement

ಬೇಡ ಜಂಗಮರು ಸಂಘಟಿತರಾಗಲಿ

04:02 PM Feb 21, 2021 | |

ಚನ್ನಗಿರಿ: ಆಧುನಿಕ ಕಾಲಘಟದಲ್ಲೂ ಬೇಡ ಜಂಗಮ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಶೋಷಣೆಯನ್ನು ಅನುಭವಿಸುತ್ತಿದೆ. ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ಸಿಗದಿರುವುದೇ ಇದಕ್ಕೆ ಕಾರಣ ಎಂದು ತಾವರಕೆರೆ ಶಿಲಾ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

Advertisement

ಪಟ್ಟಣದ ಚನ್ನಮ್ಮಾಜಿ ಕ್ರೀಡಾಂಗಣದಲ್ಲಿ ನಡೆದ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಸಮ್ಮೇಳನದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಪರಿಶಿಷ್ಟ ಜಾತಿ ಮೀಸಲಾತಿ ಕಲ್ಪಿಸುವಂತೆ ಹಲವು ದಶಕಗಳಿಂದ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ ಯಾವ ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸಂವಿಧಾನಾತ್ಮಕವಾಗಿ
ಮೀಸಲಾತಿಯನ್ನು ಕೇಳುತ್ತಿದ್ದೇವೆಯೇ ವಿನಃ ಬೇರೆ ಯಾವುದೇ ಉದ್ದೇಶವಿಲ್ಲ. ಸಮುದಾಯದ ಅಭಿವೃದ್ಧಿಗೆ ಮೀಸಲಾತಿ ಅವಶ್ಯಕ. ಇಲ್ಲಿಯವರೆಗೂ ಸುಮ್ಮನಿದ್ದೆವು. ಮುಂದೆಯೂ ಹೀಗೆಯೇ ಇರುತ್ತೇವೆ ಎಂಬುದು ಭ್ರಮೆ. ಯಾವುದೇ ಕಾರಣಕ್ಕೂ ಮೀಸಲಾತಿ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ತಕ್ಷಣ ಸಮುದಾಯದ ಮುಖಂಡರು, ಯುವಕರು ಸಂಘಟಿತರಾಗಬೇಕು. ನಮ್ಮ ಹಕ್ಕನ್ನು ಪಡೆದೇ ತೀರುವ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ರಾಜ್ಯ ಬೇಡ ಜಂಗಮ ಸಂಘಟನಾ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲೇ ಬೇಡ ಜಂಗಮ
ಸಮುದಾಯದವರಿಗೆ ಪರಿಶಿಷ್ಟ ವರ್ಗದ ಮೀಸಲಾತಿ ಕಲ್ಪಿಸುವಂತೆ ಉಲ್ಲೇಖವಿದೆ. ಆದರೆ ಮೀಸಲಾತಿ ನೀಡದೇ ಸಮುದಾಯಕ್ಕೆ
ಅನ್ಯಾಯ ಮಾಡಲಾಗಿದೆ. ಸರ್ಕಾರಗಳು ಮೀಸಲಾತಿ ನೀಡಲು ಮೀನಾಮೇಷ ಎಣಿಸುತ್ತಿವೆ. ರಾಜಕೀಯವಾಗಿ ಎಷ್ಟೇ ಹುನ್ನಾರ ನಡೆಸಿ ಬೇಡ
ಜಂಗಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದರೂ ನಮ್ಮ ಹಕ್ಕನ್ನು ಪಡೆದೇ ತೀರುತ್ತೇವೆ. ಮುಂಬರುವ ಚುನಾವಣೆಗಳಲ್ಲಿ ರಾಜಕೀಯವಾಗಿಯೇ ಉತ್ತರ ಕೊಡಲು ಸಮುದಾಯ ಸಿದ್ಧವಿದೆ ಎಂದರು.

ಕೆಎಸ್‌ಡಿಎಲ್‌ ಅಧ್ಯಕ್ಷ ಹಾಗೂ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ, ಬೇಡರ ಜಂಗಮ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಹೋರಾಟಕ್ಕೆ ನನ್ನ ಬೆಂಬಲವಿದೆ. ಮೀಸಲಾತಿ ಕಲ್ಪಿಸುವಂತೆ ಸರ್ಕಾರದ ಮಟ್ಟದಲ್ಲೂ ಒತ್ತಡ ತರುವುದಾಗಿ ಭರವಸೆ ನೀಡಿದರು. ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಗಂಗಾ ಬಸವರಾಜ್‌ ಮಾತನಾಡಿ, ಬೇಡರ ಜಂಗಮ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವುದು
ಸರ್ಕಾರದ ಜವಾಬ್ದಾರಿ. ಕೇವಲ ಅಶ್ವಾಸನೆಗಳನ್ನು ನೀಡಿ ಸಮುದಾಯಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ತಕ್ಷಣ ಮೀಸಲಾತಿ ಕೂಗನ್ನು ಪರಿಶೀಲಿಸಿ ಬೇಡರ ಜಂಗಮ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಇತ್ತಾಯಿಸಿದರು.

ಹಿರೇಮಠದ ಶ್ರೀ ಜಯಸಿದ್ದೇಶ್ವರ ಸ್ವಾಮೀಜಿ, ಅಖೀಲ ಭಾರತ ಬೇಡ ಜಂಗಮ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಶಾಂತವೀರ ಸ್ವಾಮೀಜಿ, ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಹಿರೇಮಠದ ಶ್ರೀ ಶಿವಶಾಂತವೀರ ಸ್ವಾಮೀಜಿ, ಹಾಲಸ್ವಾಮಿ ವಿರಕ್ತಮಠದ ಶ್ರೀ ಬಸವ
ಜಯಚಂದ್ರ ಸ್ವಾಮೀಜಿ, ಬಸವಕಲ್ಯಾಣದ ಶ್ರೀ ಅಂದೋಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Advertisement

ಜೆಡಿಎಸ್‌ ಮುಖಂಡ ಹೊದಿಗೆರೆ ರಮೇಶ್‌, ಜೆ.ಎಂ. ಪ್ರಸನ್ನಕುಮಾರ್‌, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಮಾಡಾಳ್‌ ಮಲ್ಲಿಕಾರ್ಜುನ್‌, ನಿವೃತ್ತ ಡಿಜಿಪಿ ಜ್ಯೋತಿಪ್ರಕಾಶ್‌ ಮಿರ್ಜಿ, ರಾಜ್ಯ ಬೇಡ ಜಂಗಮ ಸಂಸ್ಥೆ ಕಾರ್ಯದರ್ಶಿ ಜಿ.ಎಂ. ವಿಶ್ವನಾಥ್‌ ಸ್ವಾಮಿ, ಹಾಲಸ್ವಾಮಿ ಮತ್ತಿತರರು ಇದ್ದರು.

ಓದಿ : ದೇಣಿಗೆ ನೀಡುವುದಿಲ್ಲವಾದರೆ ಸಿದ್ದು, HDK ಬಾಯಿ ಮುಚ್ಚಿಕೊಂಡು ತೆಪ್ಪಗಿರಲಿ: ಪ್ರಹ್ಲಾದ್ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next