ಬೆಂಗಳೂರು: ಪೋಷಕರು ಚಾಕಲೇಟ್ ಖರೀದಿಗೆ ಹಣ ಕೊಡಲಿಲ್ಲ ಎಂದು ಕೋಪಗೊಂಡು ನಾಪತ್ತೆಯಾಗಿದ್ದ ಅಪ್ರಾಪ್ತ ಸಹೋದರರಿಯರು ಧರ್ಮಸ್ಥಳದಲ್ಲೇ ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ಇಬ್ಬರನ್ನು ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.
9 ಮತ್ತು 11 ವರ್ಷದ ಸಹೋದರಿಯರು ಜೂ.16 ರಂದು ಮನೆಯಿಂದ ಹೊರ ಬಂದು ಕೋಣನಕುಂಟೆ ಸಮೀಪದ ಗೊಟ್ಟಿಗೆರೆ ಅಂಗಡಿಯೊಂದರಲ್ಲಿ ಚಾಕಲೇಟ್ ತೆಗೆದುಕೊಳ್ಳಲು ಹೋಗಿದ್ದರು. ಆದರೆ, ಅವರ ಬಳಿ ಹಣ ಇರಲಿಲ್ಲ. ಅಂಗಡಿ ಮಾಲೀಕರು ಬಾಲಕಿಯರ ತಂದೆಗೆ ಕರೆ ಮಾಡಿ ಮಕ್ಕಳು ಹಣವಿಲ್ಲದೇ ಬಂದು ಚಾಕಲೇಟ್ ಕೇಳುತ್ತಿದ್ದಾರೆ ಎಂದಿದ್ದರು. ಅದರಿಂದ ಕೋಪಗೊಂಡ ತಂದೆ ಮನೆಬಿಟ್ಟು ಅಲ್ಲಿಗೆ ಯಾಕೆ ಹೋಗಿದ್ದೀರಾ? ಮನೆಗೆ ಬಂದ ಮೇಲೆ ನಿಮಗೆ ಇದೆ ಎಂದು ರೇಗಿದ್ದಾರೆ. ಅದರಿಂದ ಹೆದರಿದ ಬಾಲಕಿಯರು ಮನೆಗೆ ಹೋಗಲು ಹಿಂದೇಟು ಹಾಕಿ, ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಓಡಾಡಬಹುದು ಎಂದು ಇಬ್ಬರು ಬಿಎಂಟಿಸಿ ಬಸ್ ಹತ್ತಿ ನೇರ ಮೆಜೆಸ್ಟಿಕ್‌ಗೆ ಬಂದಿದ್ದರು. ನಂತರ ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋಗಿದ್ದರು.
ಇತ್ತ ಮಕ್ಕಳು ಕಾಣದೆ ಗಾಬರಿಗೊಂಡಿದ್ದ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಬಿಎಂಟಿಸಿ ಬಸ್ ಹತ್ತಿ ಹೋಗಿರುವುದು ಪತ್ತೆಯಾಗಿದೆ. ಹಾಗೆಯೇ ಸಿಸಿ ಕ್ಯಾಮೆರಾಗಳ ದೃಶ್ಯಗಳ ಆಧರಿಸಿ ತನಿಖೆ ನಡೆಸಿದಾಗ ಧರ್ಮಸ್ಥಳಕ್ಕೆ ಹೋಗಿರುವುದು ಗೊತ್ತಾಗಿದೆ.
ಇದೇ ವೇಳೆ ಧರ್ಮಸ್ಥಳದಲ್ಲೇ ಬಾಲಕಿಯರ ಓಡಾಟ ಕಂಡು ಅವರಿಂದಲೇ ತಂದೆಯ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯ ಪೊಲೀಸರ ಸಹಾಯದಿಂದ ಸಹೋದರಿಯರನ್ನು ನಗರಕ್ಕೆ ಕರೆತರಲಾಗಿದೆ.
ವಿಚಾರಣೆ ವೇಳೆ ಚಾಕಲೇಟ್ ಕೊಡಿಸದ ವಿಚಾರ ತಿಳಿದು ಬಂದಿದೆ. ಅಲ್ಲದೆ, ಸರ್ಕಾರ ಶಕ್ತಿ ಯೋಜನೆ ಬಗ್ಗೆ ಮಾಹಿತಿಯಿದ್ದು, ಬಸ್‌ನಲ್ಲಿ ಪ್ರಯಾಣಿಸಿದೇವು ಎಂದು ಹೇಳಿಕೆ ನೀಡಿ ಪೊಲೀಸರು ಮತ್ತು ಪೋಷಕರಲ್ಲಿ ಅಚ್ಚರಿಮೂಡಿಸಿದ್ದಾರೆ. ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.