ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖಾದ್ಯಪ್ರಿಯರನ್ನು ಆಕರ್ಷಿಸುತ್ತಿರುವ ದಸರಾ ಆಹಾರ ಮೇಳದಲ್ಲಿ ಶುಕ್ರವಾರ ಅತ್ತೆ-ಸೊಸೆಯಂದಿರ ಅಡುಗೆ ತಯಾರಿಯ ಅಬ್ಬರ ಕಂಡುಬಂತು. ಅತ್ತೆ-ಸೊಸೆ ಎಂದೊಡನೆ ತಟ್ಟನೆ ನೆನಪಾಗುವುದು ಜಗಳ, ಒಬ್ಬರನ್ನೊಬ್ಬರು ದ್ವೇಷಿಸುವ ದೃಶ್ಯಗಳೇ ಹೆಚ್ಚಾಗಿ ಕಾಣುತ್ತದೆ. ಆದರೆ, ಇಂತಹ ಯಾವುದೇ ಜಗಳ, ದ್ವೇಷವಿಲ್ಲದೆ ಪರಸ್ಪರ ಪ್ರೀತಿ, ಆತ್ಮೀಯತೆ ಹೊಂದಿರುವ ಅಪರೂಪದ ಅತ್ತೆ-ಸೊಸೆ ದರ್ಶನಕ್ಕೆ ವೇದಿಕೆಯಾಗಿದ್ದು ದಸರಾ ಆಹಾರ ಮೇಳ.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ದಸರಾ ಆಹಾರ ಮೇಳದ ಅಂಗವಾಗಿ ಆಯೋಜಿಸಿದ್ದ ಅತ್ತೆ-ಸೊಸೆಯರ ಅಡುಗೆ ತಯಾರಿಸುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅತ್ತೆ-ಸೊಸೆ ಒಟ್ಟಿಗೆ ಸೇರಿ ನಗುಮೊಗದಿಂದಲೇ ಅಡುಗೆ ತಯಾರಿಸಿ ಎಲ್ಲರಿಗೂ ಉಣ ಬಡಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು 6 ಜೋಡಿ ಅತ್ತೆ-ಸೊಸೆಯರು ಅಕ್ಕಿ ರೊಟ್ಟಿ, ಎಣ್ಣೆಗಾಯಿ ಪಲ್ಯ ತಯಾರಿಸಿ ತಮ್ಮ ಕೈ ರುಚಿ ತೋರಿಸಿದರು. ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಅತ್ತೆ-ಸೊಸೆಯರ ನಡುವಿನ ಹೊಂದಾಣಿಕೆ, ತಯಾರಿಕೆಗೆ ಬಳಕೆ ಮಾಡಿದ ಸಮಯ, ಸ್ವತ್ಛತೆ, ತಯಾರಿಸಿದ ಪದಾರ್ಥಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಹಾಗೂ ರುಚಿಯನ್ನು ಆಧಾರವಾಗಿಟ್ಟುಕೊಂಡು ಬಹುಮಾನ ನೀಡಲಾಯಿತು.
ಸ್ಪರ್ಧೆಯ ವಿಜೇತರ ವಿವರ
ವಿವಿಧ ಕಡೆಗಳಿಂದ ಬಂದಿದ್ದ ಅತ್ತೆ-ಸೊಸೆಯಂದಿರುವ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಕೊಡಗು ಜಿಲ್ಲೆ ಶೋಭಾರಾಣಿ-ಅಂಬಿಕಾ(ಪ್ರಥಮ), ಕುವೆಂಪುನಗರದ ಲಲಿತಾ-ಸೋನಿ(ದ್ವಿತೀಯ), ಕುವೆಂಪುನಗರದ ಅನಿತಾ ರಮೇಶ್-ಸ್ವಾತಿ(ತೃತೀಯ) ಬಹುಮಾನ ಪಡೆದರು. ಇವರೊಂದಿಗೆ ಸ್ಪರ್ಧೆಯಲ್ಲಿ ವಿದ್ಯಾರಣ್ಯಪುರಂನ ಎಂ.ಸಿ.ನಾಗರತ್ನ-ನಾಗಶ್ರೀ, ರಾಮಕೃಷ್ಣನಗರದ ಸರಳಾ ಕುಮಾರಿ-ಕುಮುದ, ವಿಶ್ವೇಶ್ವರನಗರದ ಗೀತಾಮಣಿ-ಸುಮಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.