Advertisement

ಶೋಷಿತರನ್ನು ನುಂಗಿ ಜೀವಿಸುವ ಹುನ್ನಾರ: ಡಾ|ಖರ್ಗೆ

04:26 PM Apr 17, 2019 | Team Udayavani |

ಕಲಬುರಗಿ: ಸಂವಿಧಾನ ಬದಲಿಸುವ ಮತ್ತು ಮೀಸಲಾತಿ ರದ್ದುಗೊಳಿಸುವ ಮಾತನಾಡುತ್ತಿರುವ ಬಿಜೆಪಿಯವರು ಶೋಷಿತರನ್ನು ನುಂಗಿ ಜೀವಿಸುವ ಹುನ್ನಾರ ಹೊಂದಿದ್ದಾರೆ ಎಂದು ದಲಿತ ಹಿರಿಯ ನಾಯಕ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದ ಮುಂಭಾಗದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಸಮುದಾಯದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಸ್ಪೃಶ್ಯರು, ಶೋಷಿತರು ದೇಶದ ಮಣ್ಣಿನ ಮಕ್ಕಳು. ಅಂಬೇಡ್ಕರ್‌ ಬರೆದಿರುವ ಸಂವಿಧಾನವಿಲ್ಲದೇ ದೇಶದ ಜನತೆಗೆ ಯಾವುದೇ ಹಕ್ಕುಗಳು ಇರುವುದಿಲ್ಲ, ಸರ್ವರಿಗೆ ಸ್ವಾತಂತ್ರ್ಯಾ, ಸಮಾನತೆ ಮತ್ತು ಬಂಧುತ್ವವನ್ನು ಕೊಟ್ಟಿರುವ ಸಂವಿಧಾನ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ಬಿಜೆಪಿ ಆಡಳಿತ ಹೊಂದಿದ್ದ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ದಲಿತರ ಮೇಲೆ ದಾಳಿ ನಡೆದಿದ್ದವು. ಗುಜರಾತ್‌ನಲ್ಲಿ ದನದ ಮಾಂಸ ತೆಗೆಯುತ್ತಿದ್ದ ಯುವಕರನ್ನು ಬೆತ್ತಲೆಗೊಳಿಸಿ ಥಳಿಸಿದರು. ಇದಕ್ಕೆ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ಸಹಕಾರ ಇತ್ತು ಎಂದು ದೂರಿದ ಅವರು, ಸಂವಿಧಾನ ಬದಲಿಸುವ ಮಾತನಾಡಿದ್ದ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ, ನಾನು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕ್ಷಮೆಯಾಚಿಸಿದರು ಎಂದರು.

ಕೇಂದ್ರದಲ್ಲಿರುವ ಸುಳ್ಳು ಸರ್ಕಾರವನ್ನು ತೆಗೆಯಬೇಕಿದೆ. ಪ್ರಜಾಪ್ರಭುತ್ವ ಉಳಿಸುವ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ. ಅದಕ್ಕಾಗಿ ತಮಗೆ ಮತ ನೀಡುವಂತೆ ಸಮುದಾಯವರಿಗೆ ಖರ್ಗೆ ಮನವಿ ಮಾಡಿದರು.

ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಲು ಬಂಡೆ ಇದ್ದಂತೆ. ಅವರನ್ನು ಒಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿಯವರಿಗೆ ಹೇಳಿ ಬಂದಿದ್ದೇನೆ. ನಮ್ಮ ಜೀವ ಹೋದರೂ ಪರವಾಗಿಲ್ಲ ಖರ್ಗೆ ಅವರ ಜೀವ ಉಳಿಸಲು ಅಡ್ಡ ನಿಲ್ಲುತ್ತೇವೆ ಎಂದರು.

Advertisement

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮುಖಂಡರಾದ ಅಲ್ಲಮಪ್ರಭುಪಾಟೀಲ, ಹೆಣ್ಣೂರು ಶ್ರೀನಿವಾಸ, ಶ್ಯಾಮರಾವ ಪ್ಯಾಟಿ, ವಿಜಯಕುಮಾರ, ಚಂದ್ರಿಕಾ ಪರಮೇಶ್ವರಿ, ಲಿಂಗರಾಜು ತಾರ್‌ಫೈಲ್‌, ಶಾಮನಾಟೀಕರ್‌, ಪರಮೇಶ್ವರ ಖಾನಪೂರೆ, ಸಿದ್ಧಾರ್ಥ್, ಗೋಪಿಕೃಷ್ಣ, ಬಸವರಾಜ ಜವಳಿ, ಸತೀಶ ಮುಂತಾದವರು ಇದ್ದರು.

ಮಲ್ಲಿಕಾರ್ಜುನ ಖರ್ಗೆ ನ್ಯಾ.ಸದಾಶಿವ ಆಯೋಗದ ವಿರೋಧಿ ಎಂದು ಬಿಜೆಪಿ ಪ್ರಾಯೋಜಿತರು ಹೇಳುತ್ತಿದ್ದಾರೆ. ಅದಕ್ಕಾಗಿ ಬಿಜೆಪಿ ಅವರನ್ನು ನೇಮಿಸಿದೆ.
ಎಲ್‌.ಹನುಮಂತಯ್ಯ, ರಾಜ್ಯಸಭಾ ಸದಸ್ಯ

ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಎರಡೂ ವರ್ಗದವರು ಒಟ್ಟಾಗಿ ಇರಬೇಕು. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಸಮುದಾಯದ ಎರಡು ವರ್ಗದವರೂ ಕುಳಿತುಕೊಂಡು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೊಣ. ಹೋಗುವುದಾದರೆ ಎರಡೂ ವರ್ಗದವರು ಒಗ್ಗಟ್ಟಾಗಿ ಹೋಗೋಣ.

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next