Advertisement

ಖೇಲೋ ಇಂಡಿಯಾ ಕ್ರೀಡಾಕೂಟ: ಚಾಯ್‌ವಾಲಾ ಪುತ್ರಿಗೆ ಮೊದಲ ಚಿನ್ನ

11:02 PM Jun 06, 2022 | Team Udayavani |

ಪಂಚಕುಲ: ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಇಬ್ಬರು ಕ್ರೀಡಾಪಟುಗಳು ಸುದ್ದಿಯಾಗಿದ್ದಾರೆ. ಇವರಲ್ಲೊಬ್ಬರು, ಕೂಟದ ಮೊದಲ ಬಂಗಾರ ಗೆದ್ದ ಮಹಾರಾಷ್ಟ್ರದ ಕಾಜೋಲ್‌ ಸರ್ಗರ್‌.

Advertisement

ಈಕೆ ಪುಟ್ಟದೊಂದು ಚಹಾ ಅಂಗಡಿ ಇರಿಸಿಕೊಂಡಾತನ ಮಗಳು. ಹಾಗೆಯೇ ಕಬಡ್ಡಿಯಲ್ಲಿ ಮೊದಲ ರೈಡ್‌ ಮಾಡುವುದಕ್ಕಿಂತ ಮೊದಲೇ ಸುದ್ದಿಯಾದ ಜಾರ್ಖಂಡ್‌ನ‌ ಈತು ಮಂಡಲ್‌ ಅತೀ ಕಿರಿಯ ಆ್ಯತ್ಲೀಟ್‌ ಎಂಬ ದಾಖಲೆ ಸ್ಥಾಪಿಸಿದ್ದಾರೆ. ಈಕೆಯ ವಯಸ್ಸು ಕೇವಲ 13 ವರ್ಷ.

ವೇಟ್‌ಲಿಫ್ಟಿಂಗ್‌ ಸಾಧಕಿ
ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ 16 ವರ್ಷದ ಕಾಜೋಲ್‌ ಸರ್ಗರ್‌ ಮಹಾರಾಷ್ಟ್ರದ ಸಾಂಗ್ಲಿಯವರು. ಇಲ್ಲಿ ಈಕೆಯ ತಂದೆ ಪುಟ್ಟದೊಂದು ಚಹಾ ಅಂಗಡಿ ಇರಿಸಿಕೊಂಡಿದ್ದಾರೆ. ಈಕೆಗೆ 3 ವರ್ಷಗಳ ಹಿಂದಿನ ತನಕ ಕ್ರೀಡಾ ಸಂಪರ್ಕವೇ ಇರಲಿಲ್ಲ. ಅಣ್ಣ ಸಂಕೇತ್‌ ಸರ್ಗರ್‌ ಸ್ಥಳೀಯ ಜಿಮ್‌ ಒಂದಕ್ಕೆ ತೆರಳಿ ವೇಟ್‌ಲಿಫ್ಟಿಂಗ್‌ ಅಭ್ಯಾಸ ಮಾಡುತ್ತಿದ್ದುನ್ನು ಕಂಡ ಬಳಿಕ ಕಾಜೋಲ್‌ಗೆ ಕ್ರೀಡಾಸಕ್ತಿ ಮೂಡಿತು.

2019 ರಲ್ಲಿ ಪುಣೆ ಆತಿಥ್ಯದಲ್ಲಿ ನಡೆದ ಖೇಲೋ ಇಂಡಿಯಾ ಯುತ್‌ ಗೇಮ್ಸ್‌ನಲ್ಲಿ ಸಾಂಗ್ಲಿಯವರೇ ಆದ ರೂಪಾ ಹಾಂಗಂಡಿ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕವಂತೂ ಕಾಜೋಲ್‌ ತುಡಿತ ತೀವ್ರಗೊಂಡಿತು. ರೂಪಾ ಅವರೇ ಈಕೆಗೆ ಸ್ಫೂರ್ತಿಯಾದರು.

“ಸಂಕೇತ್‌ ನನಗಿಂತ 5 ವರ್ಷ ಹಿರಿಯವನು. ಆದರೆ ನಾನು ಆತನೊಂದಿಗೆ ಯಾವತ್ತೂ ಕ್ರೀಡೆ ಬಗ್ಗೆ ಮಾತಾಡುತ್ತಿರಲಿಲ್ಲ. ರೂಪಾ ಅವರ ಚಿನ್ನದ ಸಾಧನೆಯೇ ನನಗೆ ಪ್ರೇರಣೆ. ನಾನೂ ವೇಟ್‌ಲಿಫ್ಟಿಂಗ್‌ನಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆಂಬ ನಿರ್ಧಾರಕ್ಕೆ ಬಂದೆ. ಇದರ ಫ‌ಲ ಈಗ ಸಿಕ್ಕಿದೆ. ಬಹಳ ಖುಷಿಯಾಗಿದೆ’ ಎಂಬುದು ಕಾಜೋಲ್‌ ಪ್ರತಿಕ್ರಿಯೆ.

Advertisement

ಖೇಲೋ ಇಂಡಿಯಾದ ವನಿತಾ 40 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಕಾಜೋಲ್‌ 113 ಕೆಜಿ ಭಾರವನ್ನೆತ್ತಿ ಚಿನ್ನದ ಪದಕ ಗೆದ್ದರು. ಪ್ರಸ್ತುತ ಇವರು ಮಯೂರ್‌ ಸಿಂಹಾಸನೆ ಬಳಿ ತರಬೇತಿ ಪಡೆಯುತ್ತಿದ್ದಾರೆ. ಪಟಿಯಾಲದಲ್ಲಿ ನಡೆದ 2021ರ ಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಾಜೋಲ್‌ ಕಂಚಿನ ಪದಕ ಜಯಿಸಿದ್ದರು.

“ನನ್ನ ತಂದೆ ಪುಟ್ಟ ಅಂಗಡಿಯಲ್ಲಿ ಚಹಾ ಮತ್ತು ಪರೋಟ ಮಾರಾಟ ಮಾಡುತ್ತ ನಮ್ಮನ್ನೆಲ್ಲ ಈ ಹಂತಕ್ಕೆ ಬೆಳೆಸಿದ್ದಾರೆ. ನಮ್ಮ ಸಾಧನೆ ಅವರ ಪರಿಶ್ರಮದ ಫ‌ಲ. ನಮಗೆ ಎರಡು ಎಕರೆ ಜಮೀನು ಕೂಡ ಇದೆ. ಅಮ್ಮ ಮತ್ತು ನಾನು ಕೂಡ ಟೀ ಸ್ಟಾಲ್‌ನಲ್ಲಿ ದುಡಿಯುತ್ತೇವೆ’ ಎಂದು ಕಾಜೋಲ್‌ ಹೇಳಿದರು.

ಅಪ್ಪ ಮಹಾದೇವ ಸರ್ಗರ್‌ ಸಂತಸಕ್ಕೆ ಪಾರವೇ ಇಲ್ಲ. ಅವರು ಚಹಾದಂಗಡಿಗೆ ಬಂದ ಗ್ರಾಹಕರ ಬಳಿಯೆಲ್ಲ ಮಗಳ ಸಾಧನೆಯನ್ನು ಹೇಳಿಕೊಳ್ಳುತ್ತಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next