Advertisement

ಮಗಳು ಟೆನ್ಶನ್‌ ಅಲ್ಲ-ಟೆನ್‌ ಸನ್‌ಗೆ ಸಮ; ಭೀಮಸೇನ್‌

05:55 PM Feb 01, 2021 | Team Udayavani |

ಕಲಬುರಗಿ: ಹೆಣ್ಣು ಮಗಳು ಟೆನ್ಶನ್‌ ಅಲ್ಲ, ಟೆನ್‌ ಸನ್ಸ್‌ಗಳಿಗೆ ಸಮ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರ ಭೀಮಸೇನ್‌ ಹೇಳಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

2015ರಲ್ಲಿ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ರಕ್ಷಣೆಗಾಗಿ “ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನ ಜಾರಿಗೊಳಿಸಿದೆ. ಇದರ ಪರಿಣಾಮ 2014-15ರಲ್ಲಿ ಪ್ರತಿ ಸಾವಿರ ಬಾಲಕರಿಗೆ 918 ಬಾಲಕಿಯರಿದ್ದರೆ, 2019-20ರ ವೇಳೆಗೆ ಹೆಣ್ಣು ಮಕ್ಕಳ ಅನುಪಾತ 934ಕ್ಕೆ ಏರಿಕೆಯಾಗಿದೆ.

ತಲತಲಾಂತರಗಳಿಂದ ಬಂದ ಲಿಂಗ ತಾರತಮ್ಯ ಕೊನೆಗಾಣಿಸಿ ಹೆಣ್ಣು-ಗಂಡು ಬೇಧವಿಲ್ಲದೆ ಸರಿ ಸಮಾನವಾಗಿ ಕಾಣಬೇಕಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಪಿ. ಬಾಡಗಂಡಿ ಮಾತನಾಡಿ, ಹೆಣ್ಣು ಈ ಜಗದ ಸುಂದರ ಸೃಷ್ಟಿ, ಪ್ರಕೃತಿ ಹಾಗೂ ಸಂಸ್ಕೃತಿ ಪ್ರತೀಕ. ಹೆಣ್ಣು ಮಕ್ಕಳಿಗೆ ಅವಕಾಶ ಕೊಟ್ಟರೆ ಎಲ್ಲ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಸೈ ಎನಿಸಿಕೊಳ್ಳುವರು. ಅವರಿಗೆ ಸೂಕ್ತ ವೇದಿಕೆ ಮತ್ತು ಅವಕಾಶದ ಅವಶ್ಯಕತೆಯಿದೆ ಎಂದು ಹೇಳಿದರು.

ಶಿಕ್ಷಣಾಧಿಕಾರಿ ಮಾರುತಿ ಹುಜರತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳಾ ಕಲ್ಯಾಣಾಧಿಕಾರಿ ಉಮಾ ಪೂಜಾರಿ “ಹೆಣ್ಣು ಮಕ್ಕಳು ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆ’ ಕುರಿತು ಉಪನ್ಯಾಸ ನೀಡಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ, ಮೂರು ವರ್ಷ ತುಂಬಿದ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಭಾಗ್ಯಲಕ್ಷ್ಮೀ ಬಾಂಡ್‌ ವಿತರಣೆ ಮತ್ತು “ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೇ ಆಳಬಲ್ಲದು’ ಎಂಬುದಕ್ಕೆ ಸಾಕ್ಷಿಯಾಗಿ ಮಹಿಳಾ ಸಾಧಕಿಯರ ವೇಷಭೂಷಣ ಧರಿಸಿದ ಅಂಗನವಾಡಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.

ಜಿ.ಪಂ ಡಿಆರ್‌ಡಿಎ ಸಹಾಯಕ ಯೋಜನಾಧಿಕಾರಿ ರಮೇಶ ಸುಲಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ, ಜಿಲ್ಲಾ ಸಮನ್ವಯಾಧಿಕಾರಿ ಶಿವರಾಮ ಚವ್ಹಾಣ, ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಪ್ರೇಮಾ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕಿ ವಿಜಯಲಕ್ಷ್ಮೀ ಸೇರಿದಂತೆ ವಿವಿಧ ಶಾಲೆಗಳಿಂದ ಆಗಮಿಸಿದ 8ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು
ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next