ಸ್ತ್ರೀ ದೇವರ ವಿಶೇಷ ಸೃಷ್ಟಿ ಎಂಬುದು ಒಂದಿಲ್ಲೊಂದು ರೀತಿಯಲ್ಲಿ ನಮಗೆ ಅನುಭವಕ್ಕೆ ಬಂದಿರುತ್ತದೆ. ತಾಯಿಯಲ್ಲಿ ದೇವತೆಯನ್ನು ಕಂಡ ನಾನು ಈಗ ಮಗಳಲ್ಲಿ ಈ ಅದ್ಭುತ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ತಾಯಿಯ ಸ್ಥಾನವನ್ನು ಮಗಳು ತುಂಬಿದ್ದಾಳೆ. ಆಕೆಗಾಗಿ ಪ್ರತಿ ನಿಮಿಷವೂ ಮನಸ್ಸು ಮಿಡಿಯುತ್ತದೆ. ಆಕೆಯೇ ನನ್ನ ಬದುಕಿನ ದೊಡ್ಡ ಭಾಗವಾಗಿದ್ದಾಳೆ. ಆಕೆಯಿಂದಾಗಿ ಬೇಸರ ಬೇಸರ ವೆನಿಸುವುದಿಲ್ಲ, ಕಷ್ಟ ಭಾರವಾಗುವುದಿಲ್ಲ.
ಹೆಣ್ಣಾಗಲಿ ಗಂಡಾಗಲಿ ಹೆತ್ತವರಿಗೆ ಮಕ್ಕಳೇ ನಿಧಿಗಳು. ಆದರೆ ಕಾಲದ ಮಹಿ ಮೆಯೋ, ಸೃಷ್ಟಿಯ ಗರಿಮೆಯೋ, ಹೆಣ್ಣು ಮಗು ಜನಿಸಿದೆ ಎಂದಾಗ ಮನೆಗೆ ಮಹಾಲಕ್ಷ್ಮೀ ಬಂದಳು ಎಂದು ಎಲ್ಲರೂ ಸಂಭ್ರಮಿಸುತ್ತಾರೆ. ಧಾನ್ಯದಲ್ಲಿ ಕಲ್ಲುಗಳೂ ಇದ್ದಂತೆ ಹೆಣ್ಣು ಮಗು ಎಂದರೆ ಹೀಗಳೆಯುವವರು ಈಗಲೂ ಇದ್ದಾರೆ. ಮಾನವೀಯತೆಯೇ ಇಲ್ಲದ ಜನರು ಮೋರಿಯಲ್ಲೊ, ಕಸದ ರಾಶಿಯಲ್ಲೋ ಬಿಸಾಡಿ ಹೋಗುತ್ತಾರೆ.
ಆದರೂ ಇತ್ತೀಚಿನ ದಿನಗಳಲ್ಲಿ ಗಂಡಿಗೆ ಸಮನಾಗಿ ಹೆಣ್ಣು ಮಕ್ಕಳು ನಿಂತು ವ್ಯವಹಾರ ನಡೆಸುತ್ತಾ ಒಬ್ಬಂಟಿಯಾಗಿ ಮನೆಯನ್ನು, ಮಕ್ಕಳನ್ನು, ಹೆತ್ತವರನ್ನು ನೋಡಿಕೊಳ್ಳುತ್ತಿರುವ ಉದಾಹರಣೆಗಳಿವೆ.
ಆಗಾಗ ನನ್ನ ತಾಯಿ ಹೇಳುತ್ತಿದ್ದ ಮಾತು ಈಗ ನಿಜ ಅನಿಸುತ್ತಿದೆ. ನಾಳೆ ದಿನ ನೀನು ತಾಯಿಯಾದಾಗ ಗೊತ್ತಾಗುತ್ತೆ ನನ್ನ ಬೆಲೆ ಏನೆಂದು. ಹೌದಲ್ಲವೇ ಹೆಣ್ಣಿಗೂ, ಗಂಡಿಗೂ ತಮ್ಮ ಹೆತ್ತವರ ಮೇಲೆ ಪ್ರೀತಿ ಇಮ್ಮಡಿಯಾಗುವುದು ತಾವು ತಂದೆ, ತಾಯಿಯಾದ ಮೇಲೆ ಎಂದರೆ ತಪ್ಪಾಗಲಾರದು.
ಅದರಲ್ಲೂ ಮಗಳು ಮನದಲ್ಲಿ- ಮನೆಯಲ್ಲಿ ಸಂಭ್ರಮ, ಪ್ರೀತಿ ತುಂಬುತ್ತಾಳೆ. ಇದು ನನ್ನ ಅನುಭವಕ್ಕೂ ಬಂದ ಮಾತು. ಹಾಗಾಗಿ ಹೆಣ್ಣು ಮಗು ಎಂಬ ಅಸಡ್ಡೆ ತೋರದೆ ಆಕೆಗೂ ಸಮಾಜದಲ್ಲಿ ಸಮಾನವಾದ ಸ್ಥಾನ ಮಾನ ನೀಡುವ ನೆಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ.
-ಗ್ರೀಷ್ಮಾ
ಮಂಗಳೂರು