ಹತ್ತು ವರ್ಷದ ಸ್ವಾತಿಯನ್ನು ಶಾಲೆಯಿಂದ ಟಿಸಿ ಕೊಟ್ಟು ಕಳಿಸಬೇಕೆಂದು ನಿರ್ಧಾರವಾಗಿದೆ. ಸ್ವಾತಿಯ ವಿಚಿತ್ರ ವರ್ತನೆಯನ್ನು ಶಾಲೆಯವರಿಗೆ ನಿಯಂತ್ರಣದಲ್ಲಿಡಲು ಸಾಧ್ಯವಾಗಿಲ್ಲ. ತರಗತಿಯಲ್ಲಿ ಚೂಪಾದ ಪೆನ್ಸಿಲನ್ನು, ಅವಳ ಕುತ್ತಿಗೆಗೆ ಹಿಡಿದು, ನಾನು ಸಾಯಬೇಕು ಅನ್ನುತ್ತಾಳೆ. ಇಲ್ಲವೇ ಅನ್ಯಮನಸ್ಕಳಾಗಿ, ಲ್ಲೋ ನೋಡುತ್ತಾ ಕುಳಿತಿರುತ್ತಾಳೆ. ಯಾವ ಪುಸ್ತಕ ಕೇಳಿದರೂ ಕಳೆದುಹೋಗಿದೆ ಎಂಬ ಒಂದೇ ಉತ್ತರ. ಟೀಚರ್ ಬಯ್ದಾಗ ದುರುಗುಟ್ಟಿ ನೋಡುವುದು ಅಥವಾ ಬೇರೆ ಮಕ್ಕಳಿಗೆ ಬಯ್ಯುವುದು, ಚುಚ್ಚಿ ಮಾತನಾಡೋದು ಅಥವಾ ಮತ್ತು ಕೆಟ್ಟ ಪದಗಳ ಬಳಕೆಯಿಂದ, ಬೇರೆ ಪೋಷಕರು ಇವಳ ಬಗ್ಗೆ ದೂರು ಕೊಟ್ಟಿದ್ದಾರೆ. ಸ್ವಾತಿಯ ತಂದೆ ಶಾಲೆಯಲ್ಲಿ ಪ್ರಾಂಶುಪಾಲರನ್ನು ಭೇಟಿ ಮಾಡಿ, ಕ್ಷಮಾಪಣೆ ಕೇಳಿಕೊಂಡರೂ ಶಾಲೆಯವರು ತಮ್ಮ ನಿರ್ಧಾರ ಬದಲಾಯಿಸಲಿಲ್ಲ.
ಸ್ವಾತಿಯ ತಾಯಿ ಬೇರೆ ಮನೆ. ತಂದೆ ಬೇರೆ ಮನೆಯಲ್ಲಿದ್ದಾರೆ. ಮಗು ವಾರಕ್ಕೆ ಮೂರು- ಮೂರು ದಿನವನ್ನು ತಂದೆ- ತಾಯಿಯ ನಡುವೆ ಹಂಚಿಕೊಳ್ಳಬೇಕು. ಈ ವಿಚಾರ ಶಾಲೆಯವರಿಗೆ ತಿಳಿದಿಲ್ಲ. ವೈಮನಸ್ಯವಿಲ್ಲದಿದ್ದರೂ ತಾಯಿಗೆ ಗಂಡನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎನಿಸಿದೆ. ತಂದೆ- ತಾಯಿ ವಿಚ್ಚೇದನವನ್ನು ಪಡೆದಿಲ್ಲ ಅಥವಾ ಪಡೆಯುವ ಸಂದರ್ಭವೂ ಇಲ್ಲ.
ಗಿರಿಜಾಗೆ ಔದ್ಯೋಗಿಕವಾಗಿ ಮುಂದೆ ಬರಬೇಕೆಂಬ ಕನಸು. ಗಿರೀಶ್ ಮಹತ್ವಾಕಾಂಕ್ಷಿಯಲ್ಲ. ಸೋಮಾರಿ ಮತ್ತು ಉಡಾಫೆ ಮನುಷ್ಯ. ಮನೆಗೆಲಸದಲ್ಲೂ ಸಹಾಯ ಮಾಡಲಾರ, ಅತ್ತ ತನ್ನ ವೃತ್ತಿಯಲ್ಲೂ ಮುಂದೆ ಬರಲಾರ. ಸದಾ ಟೀವಿ ವೀಕ್ಷಿಸುವುದೇ ಅವನ ಪ್ರಿಯವಾದ ಟೈಂಪಾಸ್. ಮನೆ- ಮಗು- ವೃತ್ತಿ ಮೂರನ್ನೂ ಏಕಕಾಲಕ್ಕೆ ನಿಭಾಯಿಸಲಾಗದೆ, ಗಂಡನಿಂದಲೂ ಸಹಾಯ ಸಿಗದೇ ಹತಾಶಳಾಗಿ ಇನ್ನೊಂದು ಮನೆ ಮಾಡಿದರೆ, ಗಂಡ ದಾರಿಗೆ ಬರಬಹುದೆಂದು ಮನೆ ಬಿಟ್ಟು ಹೊರಟುಹೋದಳು. ಈಗ, ಅತ್ತೆ ಗಿರೀಶ್ ಮನೆಯ ಬೇಕುಬೇಡಗಳನ್ನು ನೋಡಿಕೊಳ್ಳುತ್ತಾರೆ. ಗಿರೀಶ್ ಬದಲಾಗಲೇ ಇಲ್ಲ. ಸೊಸೆ ಇದ್ದಾಗ ಸಹಾಯ ಮಾಡದ ಅತ್ತೆ, ಸೊಸೆ ಮನೆ ಬಿಟ್ಟು ಹೋದ ಮೇಲೆ ಮಗನ ಮನೆಗೆ ಬಂದಿ¨ªಾರೆ.
ಮಕ್ಕಳ ಸಮಸ್ಯೆಯನ್ನು ಬಿಡಿಸಲು ಕೌಟುಂಬಿಕ ಸಾಮರಸ್ಯದ ಕಡೆಗೆ ಗಮನ ಹರಿಸಬೇಕು. ಮಗುವಿಗೆ ಸಮಾಧಾನ- ಸಲಹೆ ಮಾಡುವುದಲ್ಲ. ಈ ಮನೆಯಿಂದ ಆ ಮನೆಗೆ ಮಗು ಸ್ವಾತಿ ಗೂಢಚಾರಿಯಾಗಿದ್ದಳು. ಒತ್ತಡವಾಗಿ, ಮಗುವಿಗೆ ಸಿಟ್ಟು ಜಾಸ್ತಿಯಾಗಿತ್ತು. ತನ್ನ ಪ್ರತಿಯೊಂದು ಸಾಮಾನು- ಬಟ್ಟೆಯನ್ನು ಇಲ್ಲಿಂದಲ್ಲಿಗೆ ತೆಗೆದುಕೊಂದು ಹೋಗುವುದು ಸ್ವಾತಿಗೆ ಕಷ್ಟವಾಗುತಿತ್ತು. ಕೆಲವು ಪುಸ್ತಕಗಳು ಕಳೆದುಹೋಗುತ್ತಿದ್ದವು. ಗಿರಿಜಾ ಬೇರೆ ಮನೆ ಮಾಡಿದ್ದರೂ ಈಗ ನೆಮ್ಮದಿಯಿಲ್ಲದಂತಾಗಿತ್ತು. ಗಿರೀಶ್ ತಮ್ಮ ತಪ್ಪನ್ನು ಅರ್ಥಮಾಡಿಕೊಂಡರು. ಗಿರೀಶ್ ತಾಯಿ ಕೂಡಾ ಟೀಂ ವರ್ಕ್ ಬಗ್ಗೆ ತಿಳಿದುಕೊಂಡರು. ಸೊಸೆಯೊಬ್ಬಳೇ ಮನೆ ನಿಭಾಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಕುಟುಂಬದವರ ಸಹಾಯ ಬೇಕೇ ಬೇಕು. ಇಲ್ಲಿ ಗಂಡಸರು ಸೋಮಾರಿಯಾಗಿ ಕುಳಿತರೆ ಪ್ರಯೋಜನವಾಗುವುದಿಲ್ಲ. ಮನೆ ಕೆಲಸ ರೇಜಿಗೆಯಾದದ್ದು. ಎಲ್ಲರೂ ಕೂಡಿ ಮಾಡಿದರೆ ಸ್ವರ್ಗ ಸುಖ.
ಶುಭಾ ಮಧುಸೂದನ್, ಮನೋರೋಗ ವಿಜ್ಞಾನಿ