Advertisement
ನೀವೀಗ ಓದಲಿರುವುದು, ಕೌಸರ್ ಹುಸೇನ್ ಎಂಬಾತನ ಕಥೆ. ಅವನೊಳಗಿರುವ ಒಬ್ಬ ಜವಾಬ್ದಾರಿಯುತ ತಂದೆ, ವಿಧಿಯಾಟದಿಂದ ನಲುಗಿದ ಶ್ರೀಸಾಮಾನ್ಯ ಹಾಗೂ ಅಸಹಾಯಕ ಭಿಕ್ಷುಕ… ಈ ಮೂರು ಬಗೆಯ ವ್ಯಕ್ತಿತ್ವದ ಪರಿಚಯ ಆಗುವುದು ಈ ಬರಹದ ವೈಶಿಷ್ಟ್ಯ. ಒಂದು ಕಾಲದಲ್ಲಿ ಕೌಸರ್ ಹುಸೇನ್ ಕೂಡ ಉಳಿದೆಲ್ಲರಂತೆಯೇ ಇದ್ದ. ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಅವನದು ಚಿಕ್ಕ- ಚೊಕ್ಕ (ಹೆಂಡತಿ, ಮಗ, ಮಗಳು) ಕುಟುಂಬ. ಅದೊಂದು ರಾತ್ರಿ ಈತ ಕೆಲಸ ಮುಗಿಸಿಕೊಂಡುಮನೆಗೆ ವಾಪಸಾಗುತ್ತಿದ್ದಾಗ, ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಯಿತು. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ- ಹುಸೇನ್‌ನ ಬಲಗೈ ತುಂಡಾಗಿ ಹೋಗಿತ್ತು. ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದರೆ, ಆಪತ್ಕಾಲಕ್ಕೆಂದು ಕೂಡಿಟ್ಟಿದ್ದ ಹಣವೆಲ್ಲಾ ಖರ್ಚಾಗಿ ಹೋಯಿತು. ಹಿಂದೆಯೇ, ಶಾಶ್ವತ ಅಂಗವೈಕಲ್ಯವೂ ಜೊತೆಯಾಯಿತು. ಇಷ್ಟಾದ ಮೇಲೆ, ಕುಟುಂಬವನ್ನು ಸಾಕುವ ಜವಾಬ್ದಾರಿಯಿತ್ತಲ್ಲ; ಅದಕ್ಕಾಗಿ ಹುಸೇನ್ ಭಿಕ್ಷೆ ಬೇಡಲು ಆರಂಭಿಸಿದ!
Related Articles
Advertisement
ನನ್ನ ಮಕ್ಕಳನ್ನು ಸ್ಕೂಲ್‌ನಿಂದ ಹೊರಗೆ ನಿಲ್ಲಿಸ್ತಾರಂತೆ. ಆಗೆಲ್ಲಾ ಮಕ್ಕಳು- “ಅಪ್ಪಾ, ಫಿಸ್ ಕಟ್ಟಿಲ್ಲ ಅಂತ ಇವತ್ತು ಸ್ಕೂಲಲ್ಲಿ ಆಚೆ ನಿಲ್ಲಿಸಿದ್ರು/ ಎಕ್ಸಾಂ ಹಾಲ್‌ನಿಂದ ಆಚೆ ಕಳಿಸಿಬಿಟ್ರಾ’ ಎಂದೆಲ್ಲಾ ದುಃಖದಿಂದ ಹೇಳ್ತಾರೆ. ಆಗೆಲ್ಲಾ ತುಂಬಾ ಸಂಕಟ ಆಗುತ್ತೆ. ಅದನ್ನೇನೂ ತೋರಗೊಡದೆ- “ಪರೀಕ್ಷೆ ತಪ್ಪಿ ಹೋಯ್ತು ಅಂತ ಕಂಗಾಲಾಗಬೇಡಿ. ಬದುಕು ಎಂಬ ಪರೀಕ್ಷೆಯನ್ನು ದಿನವೂ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಿ’ ಅನ್ನುತ್ತೇನೆ. ಹೊಟ್ಟೆಪಾಡಿಗಾಗಿ ಕಂಡವರ ಮುಂದೆಲ್ಲಾ ಕೈ ಒಡ್ಡಬೇಕಲ್ಲ; ಅಂಥ ವೇಳೆಯಲ್ಲಿ ಛೇ, ನನ್ನದೂ ಒಂದು ಬದುಕಾ ಅನ್ನಿಸಿ ಹಿಂಸೆ ಆಗುತ್ತೆ. ಎಷ್ಟೋ ಬಾರಿ ಸತ್ತು ಹೋಗಬೇಕು ಅಂತಲೂ ಅಂದುಕೊಂಡಿದ್ದೇನೆ. ಆದರೆ, ಮಕ್ಕಳೊಂದಿಗೆ ಮಲಗಿದ್ದಾಗ, ನಡುರಾತ್ರಿಯಲ್ಲಿ, ನಿದ್ದೆಗಣ್ಣಿನಲ್ಲಿ ಮಕ್ಕಳು ನನ್ನ ಕೈ ಹಿಡಿದುಕೊಂಡು- ಅಪ್ಪಾ… ಅಪ್ಪಾ… ಎಂದು ಕನವರಿಸುವುದನ್ನು ಕಂಡಾಗ, ಅಕಸ್ಮಾತ್ ನಾನು ಸತ್ತುಹೋದ್ರೆ ಈ ಮಕ್ಕಳ ಗತಿ ಏನು ಅನ್ನಿಸಿಬಿಡುತ್ತೆ. ಅದೆಷ್ಟು ಕಷ್ಟ ಬರುತ್ತೋ ಬರಲಿ, ಆಯುಸ್ಸು ಇದ್ದಷ್ಟು ದಿನ ಬದುಕಿಬಿಡೋಣ ಅಂತ ನನಗೆ ನಾನೇ ಹೇಳ್ಕೊಳ್ಳುತ್ತೇನೆ.
ಭಿಕ್ಷೆ ಬೇಡಲು ನಾನು ಹೋಗ್ತಿನಲ್ಲ; ಅಲ್ಲಿಂದ ಕೆಲವೇ ಮೀಟರುಗಳ ಅಂತರದಲ್ಲಿ ನನ್ನ ಮಗಳು ಕಾವಲು ನಿಂತಿರ್ತಾಳೆ. ರಸ್ತೆಯಲ್ಲಿ ವೇಗವಾಗಿ ಬರುವ ಕಾರ್, ಬೈಕ್, ಲಾರಿ ಅಥವಾ ಬಸ್ಸು ನನಗೆ ಢಿಕ್ಕಿ ಹೊಡೆಯಬಹುದು ಎಂಬ ಆತಂಕ ಅವಳದು. ತಂದೆಯಾದವನು ಭಿಕ್ಷೆ ಬೇಡುವುದನ್ನು ಯಾವ ಮಗು ತಾನೆ ನೋಡಲು ಇಷ್ಟಪಡುತ್ತೆ? ಹಾಗೆಯೇ ಮಗಳ ಮುಂದೆಯೇ ಅಮ್ಮಾ ಭಿಕ್ಷೆ ಹಾಕಿ ಎನ್ನಲು ಯಾವ ತಂದೆಗೂ ಮನಸ್ಸು ಬರಲ್ಲ ಅಲ್ವ? ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ನಾನೂ, ನನ್ನ ಮಗಳೂ ಪರಸ್ಪರ ಮುಖ ನೋಡುವುದಿಲ್ಲ. ಆದರೂ ಮಧ್ಯೆ ಮಧ್ಯೆ- “ಅಪ್ಪಾ, ಬೈಕ್ ಬರ್ತಾ ಇದೆ. ಸೈಡ್‌ಗೆ ಬಾ. ಅಪ್ಪಾ, ಬಿಸಿಲು ಜಾಸ್ತಿ ಆಯ್ತು. ನೆರಳಿಗೆ ಹೋಗು, ಹುಷಾರು ಕಣಪ್ಪಾ…’ ಅನ್ನುವ ಮಾತುಗಳು ಕೇಳುತ್ತಲೇ ಇರುತ್ತವೆ. ಸಂಜೆಯಾಗುತ್ತಿದ್ದಂತೆಯೇ ನನ್ನ ಕೈಡಿದುಕೊಂಡು ಮನೆಗೆ ಕರ್ಕೊಂಡು ಹೋಗ್ತಾಳೆ. ಕೆಲವು ದಿನ ನಾಲ್ಕು ಕಾಸು ಸಂಪಾದನೆ ಆಗಿರುತ್ತೆ. ಒಂದೊಂದ್ಸಲ ನಯಾಪೈಸೆಯೂ ಸಿಕ್ಕಿರೋದಿಲ್ಲ. ದುಡ್ಡಿದ್ದಾಗ ಮನೆಗೆ ಏನಾದ್ರೂ ತರಕಾರಿ ತಗೊಂಡು ಹೋಗ್ತೀನೆ. ಆಗೆಲ್ಲಾ ಮಗಳು ತನ್ನ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಾಳೆ. ನಾನು ಬೇಗ ದೊಡ್ಡವಳಾಗಿ ಬಿಡ್ತೀನಪ್ಪಾ. ಚೆನ್ನಾಗಿ ಓದಿ ಯಾವುದಾದ್ರೂ ಕೆಲಸಕ್ಕೆ ಸೇರೊತೇನೆ. ಆಗ ನೀನು ಆರಾಮಾಗಿ ಮನೇಲಿ ಇದ್ದುಬಿಡು ಅನ್ನುತ್ತಾಳೆ. ಭಿಕ್ಷೆಯ ರೂಪದಲ್ಲಿ ನಯಾಪೈಸೆಯೂ ಸಿಕ್ಕೋದಿಲ್ಲವಲ್ಲ; ಅವತ್ತು ತುಂಬಾ ಸಂಕಟ ಆಗುತ್ತೆ. ಆಗೆಲ್ಲಾ ನಾನೂ- ಮಗಳೂ ಮೌನವಾಗಿ ನಡೀತಾ ಇರ್ತೀವಿ. ಅಂಥಾ ಸಂದರ್ಭಗಳಲ್ಲೆಲ್ಲಾ, ದೇವರೇ, ನಾನೀಗ ಸಮಾಧಾನವಾಗುವಷ್ಟು ಅತ್ತು ಬಿಡಬೇಕು. ಆದ್ರೆ ನಾನು ಅಳುವುದು ಮಗಳಿಗೆ ಕಾಣಿಸಬಾರದು. ಅದೊಂದೇ ಕಾರಣಕ್ಕಾದರೂ ಈಗ ಮಳೆ ಸುರಿಸು. ಸುರಿವ ಮಳೆಯಲ್ಲಿ ಅಳುತ್ತಾ ನಡೆದರೆ ಅದು ನನ್ನ ಮಗಳಿಗೆ ಕಾಣಿಸುವುದಿಲ್ಲ ಎಂದು ಪ್ರಾರ್ಥಿಸುತ್ತೇನೆ. ಅಕಸ್ಮಾತ್ ಮಳೆ ಬಂದೇಬಿಟ್ಟರೆ, ಏನೂ ಆಗಿಯೇ ಇಲ್ಲ ಎಂಬಂತೆ ನಡೆದುಬಿಡುತ್ತೇನೆ. ಮಗಳು, ಮೌನವಾಗಿ ನನ್ನೊಂದಿಗೇ ಬರುತ್ತಾಳೆ. ಆಗ ಅವಳೂ ಅಳುತ್ತಾ ಇರ್ತಾಳಾ? ಅದನ್ನು ಪರೀಕ್ಷಿಸುವ ಗೋಜಿಗೆ ಹೋಗಿಲ್ಲ… ಇಷ್ಟು ದಿನ, ಮಗಳೊಂದಿಗೆ ನಡೆದುಹೋಗುವಾಗ ಸಂಕೋಚವಾಗ್ತಿತ್ತು. ನಾಚಿಕೆ ಆಗ್ತಿತ್ತು. ಆದರೆ ಇವತ್ತು ಖುಷಿಯಾಗುತ್ತಿದೆ. ಯಾಕೆ ಗೊತ್ತಾ? ನಾನಿವತ್ತು ಭಿಕ್ಷುಕನಲ್ಲ. ಒಂದು ಆಸೆಯನ್ನು ಈಡೇರಿಸಿಕೊಂಡ ಸಂತೃಪ್ತ ತಂದೆ. ಹೊಸ ಬಟ್ಟೆ ಧರಿಸಿ ರಾಜಕುಮಾರಿಯ ಥರಾ ಮಗಳು ಖುಷಿಪಡುವುದನ್ನು ನೋಡಬೇಕು ಅಂತ ಆಸೆಯಿತ್ತು. ಅದೀಗ ಈಡೇರಿದೆ. ನಾವು ಖುಷಿಪಡಲಿಕ್ಕೆ ಇಷ್ಟು ಕಾರಣ ಸಾಕು ಸಾರ್…’
ಭಿಕ್ಷೆಯ ರೂಪದಲ್ಲಿ ನಯಾಪೈಸೆಯೂ ಸಿಕ್ಕೋದಿಲ್ಲವಲ್ಲ; ಅವತ್ತು ತುಂಬಾ ಸಂಕಟ ಆಗುತ್ತೆ. ಆಗೆಲ್ಲಾ ನಾನೂ- ಮಗಳೂ ಮೌನವಾಗಿ ನಡೀತಾ ಇರ್ತಿವಿ. ಅಂಥಾ ಸಂದರ್ಭಗಳಲ್ಲೆಲ್ಲಾ, ದೇವರೇ, ನಾನೀಗ ಸಮಾಧಾನವಾಗುವಷ್ಟು ಅತ್ತು ಬಿಡಬೇಕು. ಆದ್ರೆ ನಾನು ಅಳುವುದು ಮಗಳಿಗೆ ಕಾಣಿಸಬಾರದು. ಅದೊಂದೇ ಕಾರಣಕ್ಕಾದರೂ ಈಗ ಮಳೆ ಸುರಿಸು. ಸುರಿವ ಮಳೆಯಲ್ಲಿ ಅಳುತ್ತಾ ನಡೆದರೆ ಅದು ನನ್ನ ಮಗಳಿಗೆ ಕಾಣಿಸುವುದಿಲ್ಲ ಎಂದು ಪ್ರಾರ್ಥಿಸುತ್ತೇನೆ.
– ಎ.ಆರ್. ಮಣಿಕಾಂತ್