ವಿಜಯಪುರ: ಚಿಕ್ಕಮಗಳೂರ ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಪೀಠ ಹಿಂದೂಗಳ ಶೃದ್ಧಾ ಕೇಂದ್ರವಾಗಿದ್ದು ಸರ್ಕಾರ ಈ ಪೀಠವನ್ನು ಹಿಂದೂಗಳ ಪವಿತ್ರ ಕ್ಷೇತ್ರದ ಪೀಠ ಎಂದು ಘೋಷಿಸುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.
ಶ್ರೀರಾಮ ಸೇನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಕುಲಕರ್ಣಿ ಮಾತನಾಡಿ, ದತ್ತಪೀಠ ಸಂಪೂರ್ಣ ರಕ್ಷಣೆಯಾಗಬೇಕು, ಪೀಠದ ಗುಹಾಂತರ ದೇವಾಲಯದಲ್ಲಿ ಹಿಂದೂ ಅರ್ಚಕರ ನೇಮಕ ಮಾಡಿ ತ್ರಿಕಾಲ ಪೂಜೆ ನಡೆಯಬೇಕು.
ದತ್ತ ಪೀಠದಲ್ಲಿ ಯಾವುದೇ ರೀತಿಯಲ್ಲಿ ಇಸ್ಲಾಮಿಕ್ ಧರ್ಮದ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ದತ್ತ ಪೀಠದಲ್ಲಿ ಮೂಲ ಪ್ರಾಚೀನ ವಿಗ್ರಹಗಳು, ಕಾಣಿಕೆ ವಸ್ತಗಳು, ಕಾಣೆಯಾಗಿರುವ ಆಸ್ತಿ ಪಾಸ್ತಿ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ಅಕ್ರಮವಾಗಿ ಆಸ್ತಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪೀಠಕ್ಕೆ ಬರುವ ಹಿಂದೂ ಭಕ್ತಾದಿಗಳಿಗೆ, ಸ್ವಾಮೀಜಿಗಳಿಗೆ, ಪೂಜೆಗೆ ಮುಕ್ತ ಅವಕಾಶ ಕಲ್ಪಿಸಬೇಕು. ಚಿಕ್ಕಮಗಳೂರಿನ ದತ್ತಪೀಠವನ್ನು ಹಿಂದೂ ಪೀಠವೆಂದು ಘೋಷಿಸದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆ ಜಿಲ್ಲಾ ಕಾರ್ಯದ್ಯಕ್ಷ ಬಸವರಾಜ ಕಲ್ಯಾಣಪ್ಪಗೋಳ, ಬಸು ಪಾಟೀಲ, ಪ್ರತೀಕ ಪಿರಾಪುರ, ಕಿರಣ ಕಾಳೆ, ಶಾಂತು ಮಲಗೊಂಡ, ಚೇತನ ವಾಟರಕರ, ಶ್ಯಾಮ ಪಾಲ್ಗೊಂಡಿದ್ದರು.