Advertisement

ದತ್ತಾಜಿ ಸರಕಾರ್ಯವಾಹ : ಆರೆಸ್ಸೆಸ್‌ 2ನೇ ಅತ್ಯುನ್ನತ ಹುದ್ದೆಗೆ ನೇಮಕವಾದ ದ್ವಿತೀಯ ಕನ್ನಡಿಗ

12:31 AM Mar 21, 2021 | Team Udayavani |

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಅತೀ ಉನ್ನತ ಹುದ್ದೆಗೆ ರಾಜ್ಯದ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗಿದ್ದಾರೆ.

Advertisement

ಬೆಂಗಳೂರಿನ ಹೊರವಲಯದ ಚೆನ್ನೇನಹಳ್ಳಿ ವಿದ್ಯಾಕೇಂದ್ರದಲ್ಲಿ ನಡೆದ ಆರೆಸ್ಸೆಸ್‌ ಅಖೀಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್‌) ದಲ್ಲಿ ಶನಿವಾರ ಈ ಹುದ್ದೆಗೆ ಚುನಾವಣೆ ನಡೆದಿದ್ದು, ಹೊಸಬಾಳೆಯವರ ಹೆಸರು ಪ್ರಸ್ತಾವವಾಗಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಆರೆಸ್ಸೆಸ್‌ ತಿಳಿಸಿದೆ.

ಸರಸಂಘಚಾಲಕ್‌ ಅನಂತರದ ಹುದ್ದೆ ಸರ ಕಾರ್ಯವಾಹರದು. ಈ ಮೊದಲು ಹೊ.ವೆ. ಶೇಷಾದ್ರಿ ಹಲವು ವರ್ಷ ಸರ ಕಾರ್ಯವಾಹ ರಾಗಿದ್ದರು. ಅವರ ಬಳಿಕ ರಾಜ್ಯದಿಂದ ಈ ಹುದ್ದೆ ಅಲಂಕರಿಸುತ್ತಿರುವ ಖ್ಯಾತಿಗೆ ಹೊಸಬಾಳೆ ಪಾತ್ರರಾಗುತ್ತಿದ್ದಾರೆ. ಇದುವರೆಗೆ ಸುರೇಶ್‌ ಭೈಯಾಜಿ ಜೋಶಿಯವರು ಈ ಹುದ್ದೆಯಲ್ಲಿದ್ದರು. 3 ವರ್ಷಗಳಿಗೊಮ್ಮೆ ಈ ಹುದ್ದೆಗೆ ಚುನಾವಣೆ ನಡೆಯುತ್ತದೆ.

ಅಂತರ್ಜಾತಿ ವಿವಾಹಕ್ಕೆ ಸಹಮತ :

ಮತಾಂತರ ಉದ್ದೇಶದಿಂದ ಅಂತರ್ಜಾತಿ ವಿವಾಹ ತಪ್ಪು. ಸಹಬಾಳ್ವೆಗಾಗಿ ಅಂತರ್ಜಾತಿ ವಿವಾಹ ಮಾಡಿಕೊಂಡರೆ ಅದಕ್ಕೆ ಸಹಮತವಿದೆ. ಸಂಘ ಪರಿವಾರದ ಅನೇಕರು ವಿವಿಧ ಜಾತಿಗಳ ಯುವತಿಯರನ್ನು ವಿವಾಹವಾಗಿದ್ದಾರೆ. ಆರೆಸ್ಸೆಸ್‌ ಹಿಂದೂ ಸಮಾಜ ಒಂದು ಎಂದು ಪ್ರತಿಪಾದಿಸುತ್ತದೆ ಎಂಬುದಾಗಿ ದತ್ತಾತ್ರೇಯ ಹೊಸಬಾಳೆ ಹೇಳಿದರು.

Advertisement

ಅಸ್ಪೃಶ್ಯತೆ ನಿವಾರಣೆಯ ನಿಟ್ಟಿನಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥರಿಂದ ನಾವೆಲ್ಲರೂ ಪ್ರೇರಣೆ ಪಡೆದಿದ್ದೇವೆ. ಈ ನಿಟ್ಟಿನಲ್ಲಿ ಅವರು ಹಲವು ಕಾರ್ಯ ಕ್ರಮಗಳನ್ನು ನಡೆಸಿದ್ದರು ಮತ್ತು ಸಮಾಜ ದಲ್ಲಿ ಈ ಬಗ್ಗೆ ಬಹಳ ದೊಡ್ಡ ಜಾಗೃತಿ ಮೂಡಿಸಿದ್ದಾರೆ. ಸಂಘವು ಅಸ್ಪೃಶ್ಯತೆ ನಿವಾರಣೆ ಸಂಬಂಧ ಹಿಂದಿ ನಿಂದಲೂ ಕಾರ್ಯ ನಿರ್ವ ಹಿಸುತ್ತ ಬಂದಿದೆ ಎಂದು ಎಬಿಪಿಎಸ್‌ ನಿರ್ಣಯಗಳ ಕುರಿತು ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ರಾಮಮಂದಿರ ನಿರ್ಮಾಣಕ್ಕೆ ಎಲ್ಲ ಸಮಾಜದವರೂ ನಿಧಿ ಸಮರ್ಪಣೆ ಮಾಡಿದ್ದಾರೆ. ನಿಧಿ ಸಮರ್ಪಣೆ ಸಂದರ್ಭ ದಲ್ಲಿ ರಾಜಕೀಯ ಕಾರಣಕ್ಕಾಗಿ ಕೆಲವರು ಇದನ್ನು ವಿರೋಧಿಸಿರಬಹುದು. ಆದರೆ ದೇಣಿಗೆಯನ್ನು ಎಲ್ಲ ಸಮಾಜದವರು ನೀಡಿದ್ದಾರೆ ಎಂದು ಹೇಳಿದರು.

ಇವರು ದತ್ತಾಜಿ  ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮದವರಾದ ದತ್ತಾತ್ರೇಯ ಹೊಸಬಾಳೆ “ದತ್ತಾಜಿ’ ಎಂದೇ ಸಂಘದ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. 1954ರ ಡಿ. 1ರಂದು ಜನಿಸಿದ ಅವರು, ಶಿಕ್ಷಣವನ್ನು ಸಾಗರದಲ್ಲಿ ಪಡೆದರು. ಬೆಂಗಳೂರಿನಲ್ಲಿ ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

1972ರಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರಾದರು. 1977-88ರಲ್ಲಿ ಎಬಿವಿಪಿ ರಾಜ್ಯ ಜಂಟಿ ಕಾರ್ಯದರ್ಶಿಯಾಗಿದ್ದರು. 1978ರಲ್ಲಿ ರಾಜ್ಯ ಸಂಘಟನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ 1982ರ ವರೆಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.

ಅನಂತರ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1985ರಲ್ಲಿ ಅಂತಾರಾಷ್ಟ್ರೀಯ ಯುವ ವರ್ಷದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಬೃಹತ್‌ ಯುವ ಸಮಾವೇಶದಲ್ಲಿ ವಿಶ್ವವಿದ್ಯಾರ್ಥಿ ಮತ್ತು ಯುವ ವೇದಿಕೆ (ವೋಸಿ) ಸಂಚಾಲಕರಾಗಿ ಆಯ್ಕೆಯಾಗಿ, ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.

1986ರಿಂದ 1991ರ ವರೆಗೆ ಎಬಿವಿಪಿ ದಕ್ಷಿಣ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿಯಾಗಿ, 1991-92ರಲ್ಲಿ ಸಹ ಸಂಘಟನ ಕಾರ್ಯದರ್ಶಿಯಾಗಿ, 1992ರಿಂದ 2002ರ ವರೆಗೆ ಅಖೀಲ ಭಾರತೀಯ ಸಂಘಟನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಅವರಿಗೆ ಮತ್ತೆ ಆರೆಸ್ಸೆಸ್‌ ಜವಾಬ್ದಾರಿ ನೀಡಲಾಯಿತು. 2003ರಿಂದ 2009ರವರೆಗೆ ಅಖೀಲ ಭಾರತೀಯ ಸಹ ಬೌದ್ಧಿಕ್‌ ಪ್ರಮುಖ್‌ ಆಗಿ ಸೇವೆ ಸಲ್ಲಿಸಿದ್ದು, 2009ರಿಂದ ಸಹ ಸರಕಾರ್ಯವಾಹರಾಗಿ ಸೇವೆ ಸಲ್ಲಿಸುತ್ತಿದ್ದರು.

ಸಂಘಟನೆ, ಸಾಮಾಜಿಕ ಸಾಮರಸ್ಯ, ಸಾಹಿತ್ಯ ಮತ್ತು ಕಲೆ ಹೊಸಬಾಳೆಯವರ ಆಸಕ್ತಿಯ ಕ್ಷೇತ್ರಗಳು. ಉತ್ತಮ ವಾಗ್ಮಿಗಳು, ಸಂಘಟಕರಾಗಿದ್ದು, ಹಲವು ಲೇಖನಗಳನ್ನು ಬರೆದಿದ್ದಾರೆ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮೀಸಾ ಬಂಧನಕ್ಕೆ ಒಳಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next