Advertisement

ದತ್ತಾತ್ರೇಯ ದೇವರಿಗೆ ಸಿಎಂ ವಿಶೇಷ ಪೂಜೆ

11:25 PM May 14, 2019 | Team Udayavani |

ಅಫಜಲಪುರ: ಬರಗಾಲದಿಂದ ತತ್ತರಿಸಿರುವ ನಾಡಿನ ಜನತೆಗೆ ಉತ್ತಮ ಮಳೆ ಬೆಳೆಯಾಗಿ ಸುಖೀಯಾಗಿರಲೆಂದು ಪ್ರಸಿದ್ಧ ಪುಣ್ಯಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದೇವರಿಗೆ ವಿಶೇಷ ಪೂಜೆ ಮಾಡಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಆವರಿಸಿ ಜನ ಜಾನುವಾರುಗಳು ತತ್ತರಿಸಿವೆ.

ಕುಡಿಯಲು ನೀರಿಲ್ಲದೆ ಜನಸಾಮಾನ್ಯರು ಪರದಾಡುವಂತಾಗಿದೆ. ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಿದೆ. ಹೀಗಾಗಿ ಕಲ್ಪವೃಕ್ಷ ದತ್ತಾತ್ರೇಯ ದೇವರ ಸನ್ನಿಧಿಗೆ ಬಂದು ವಿಶೇಷ ಪೂಜೆ ಮಾಡಿಸಿ, ಜನತೆಗೆ ಒಳಿತಾಗಲೆಂದು ಬೇಡಿಕೊಂಡಿದ್ದೇನೆ ಎಂದರು.

ಇದೆ ವೇಳೆ ಮುಖ್ಯಮಂತ್ರಿಗೆ ಸಾರ್ವಜನಿಕರು ತಾಲೂಕಿನ ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ಮೂಲಸೌಕರ್ಯಗಳ ಸಮಸ್ಯೆ ಕುರಿತು ಅಹವಾಲು ನೀಡಿದರು. ಅಹವಾಲು ಸ್ವೀಕರಿಸಿದ ಸಿಎಂ, “ಕುಡಿಯುವ ನೀರು, ಮೇವಿನ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ.

ಎಲ್ಲಿಯಾದರೂ ಗಂಭೀರ ಸಮಸ್ಯೆ ಇದ್ದರೆ, ಸಂಬಂಧಪಟ್ಟವರು ಕೂಡಲೇ ಭೇಟಿ ನೀಡಿ ಪರಿಹಾರ ಕಲ್ಪಿಸಬೇಕು. ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

Advertisement

ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಮಾತನಾಡಿ, ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ಸನ್ನಿಧಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿದ್ದು, ಯಾವುದೇ ರಾಜಕೀಯ ಉದ್ದೇಶದಿಂದಲ್ಲ.

ಬರಗಾಲ ನಿಮಿತ್ತ ಬಸವಳಿದ ಜನತೆಗೆ ಒಳ್ಳೆಯ ದಿನಗಳು ಬರಲಿ ಎಂದು ದೇವರಲ್ಲಿ ಮೊರೆ ಹೋಗಿದ್ದಾರೆ. ದೇವೇಗೌಡರ ಕುಟುಂಬಸ್ಥರು ದೇವರ ಮೇಲೆ ಬಹಳ ನಂಬಿಕೆ ಇಟ್ಟವರು. ಹೀಗಾಗಿ ಇಲ್ಲಿನ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.

ಸಚಿವರಾದ ಎಂ.ಸಿ. ಮನಗೂಳಿ, ಶಾಸಕ ಎಂ.ವೈ. ಪಾಟೀಲ, ಮುಖಂಡರಾದ ಕೋನರೆಡ್ಡಿ, ಕೇದಾರಲಿಂಗಯ್ಯ ಹಿರೇಮಠ, ರೇವುನಾಯಕ್‌ ಬೆಳಮಗಿ, ಬಸವರಾಜ ತಡಕಲ್‌, ದೇವೇಗೌಡ ತೆಲ್ಲೂರ, ಅನೀಲ ರೆಡ್ಡಿ, ರಾಜಕುಮಾರ ಬಡದಾಳ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next