Advertisement

ದತ್ತಪೀಠ ವಿವಾದ: ಸರಕಾರದ ನಿರ್ಣಯ ಹೈಕೋರ್ಟ್‌ಗೆ ಸಲ್ಲಿಕೆ

10:17 PM Aug 22, 2022 | Team Udayavani |

ಬೆಂಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ/ಪೀಠದಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಪ್ರಕಾರ ಧಾರ್ಮಿಕ ವಿಧಿ ಹಾಗೂ ಆಚರಣೆಗಳನ್ನು ನೆರವೇರಿಸಲು ಅವಕಾಶ ಕಲ್ಪಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

Advertisement

ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ತಮ್ಮನ್ನು ನೇಮಿಸಿ 2018ರಲ್ಲಿ ಅಂದಿನ ಸರಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಶಾಖಾದ್ರಿ ಸಯ್ಯದ್‌ ಗೌಸ್‌ ಮೊಹಿದ್ದೀನ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾ| ಅಲೋಕ್‌ ಆರಾಧೆ ಹಾಗೂ ನ್ಯಾ| ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಸರಕಾರದ ಪರ ವಕೀಲರು ಮೆಮೊ ಸಲ್ಲಿಸಿ ನಿರ್ಣಯದ ಮಾಹಿತಿಯನ್ನು ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸರಕಾರದ ನಿರ್ಣಯ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಮೆಮೋ ಪ್ರತಿಯನ್ನು ಮೇಲ್ಮನವಿದಾರರಿಗೆ ಒದಗಿಸಲು, ಸರಕಾರದ ನಿರ್ಣಯದ ಬಗ್ಗೆ ಅರ್ಜಿದಾರರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಹೇಳಿ ಎಂದು ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿತು.

ಅಲ್ಲದೆ, ಸಮಿತಿಯ ನಿರ್ಣಯವು ಈ ಮೇಲ್ಮನವಿ ಕುರಿತ ವಿಭಾಗೀಯ ಪೀಠದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಒಂದೊಮ್ಮೆ ಈ ಅವಧಿಯಲ್ಲಿ ಸರಕಾರವು ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಾನದಲ್ಲಿ ಯಾವುದೇ ಮಾರ್ಪಾಡು ಮಾಡಿದರೆ, ಆ ಕುರಿತು ಪ್ರಶ್ನಿಸಿ ಸೂಕ್ತ ಅರ್ಜಿ ಸಲ್ಲಿಸಲು ಪಕ್ಷಗಾರರಿಗೆ ಅವಕಾಶವಿದೆ ಎಂದು ತಿಳಿಸಿ 2022ರ ಮೇ 31ರಂದು ಹೊರಡಿಸಿರುವ ಆದೇಶವು ಸೆ.5ರ ವರೆಗೆ ಮುಂದುವರಿಯುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next