ಹಿರಿಯ ಕಲಾವಿದ ದತ್ತಣ್ಣ ಅಂದಾಕ್ಷಣ, ಜುಬ್ಬಾ ಪೈಜಾಮದಲ್ಲಿ ತಂದೆಯಾಗಿಯೋ, ತಾತನಾಗಿಯೋ ಅಥವಾ ಅಂಕಲ್ ಆಗಿ ನೆನಪಾಗುವ ಅಪರೂಪದ ನಟ. ತಮ್ಮ ಅಭಿನಯಕ್ಕೆ ರಾಷ್ಟ್ರಶಸ್ತಿಗಳನ್ನು ಪಡೆದ ದತ್ತಣ್ಣ, ಇದುವರೆಗೆ ತರಹೇವಾರಿ ಪಾತ್ರ ನಿರ್ವಹಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನ “ಮಿಷನ್ ಮಂಗಲ್’ ಚಿತ್ರದಲ್ಲೂ ನಟಿಸಿ ಎಲ್ಲರ ಗಮನಸೆಳೆದಿದ್ದಾರೆ. ಅಷ್ಟಕ್ಕೂ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆಂದರೆ, ಅವರೀಗ ಚಿತ್ರವೊಂದರಲ್ಲಿ ಯಂಗ್‌ಲುಕ್‌ನಲ್ಲಿ ಮಿಂಚಿದ್ದಾರೆ.
ಹೌದು, ಈಗ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ “ಮುಂದಿನ ನಿಲ್ದಾಣ’ ಚಿತ್ರದಲ್ಲಿ ಅವರು ಎನರ್ಜಿ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೊಂದು ವಿಭಿನ್ನ ಪಾತ್ರವಾಗಿದ್ದು, ಈಗಿನ ಟ್ರೆಂಡಿ ಕಾಸ್ಟ್ಯೂಮ್ ಮೂಲಕ ಸಿನಿಮಾದ ಹೈಲೈಟ್ ಆಗಿದ್ದಾರೆ. ಇತ್ತೀಚೆಗೆ ಅವರ ಯಂಗ್‌ಲುಕ್‌ನಲ್ಲಿರುವ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ವಿನಯ್ ಭಾರಧ್ವಾಜ್ ಅವರು, ದತ್ತಣ್ಣ ಅವರಿಗೊಂದು ವಿಶೇಷ ಪಾತ್ರ ಹೆಣೆದಿದ್ದು, ಚಿತ್ರದಲ್ಲಿ ಅವರು ನಾಯಕನಿಗೆ ಮಾರ್ಗದರ್ಶನ ನೀಡುವ ಪಾತ್ರ ನಿರ್ವಹಿಸಿದ್ದಾರೆ.
ಈಗಿನ ಕಾಲದ ತುಂಬಾ ಕೂಲ್ ವ್ಯಕ್ತಿಯಾಗಿ ದತ್ತಣ್ಣ ತೆರೆಯ ಮೇಲೆ ಕಚಗುಳಿ ಇಡಲಿದ್ದಾರೆ ಎಂಬುದು ನಿರ್ದೇಶಕರ ಮಾತು. ದತ್ತಣ್ಣ ಅವರಿಗೂ “ಮುಂದಿನ ನಿಲ್ದಾಣ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅದಕ್ಕೆ ಕಾರಣ, ಅವರು, ನಟಿಸಿರುವ ಬಹುತೇಕ ಚಿತ್ರಗಳ ಪೈಕಿ, ಶೇ.30 ರಷ್ಟು ಯುವ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಬಗ್ಗೆ ಹೇಳುವ ಅವರು, “ಹೊಸಬರ ಚಿತ್ರದಲ್ಲಿ ವಿಷಯದ ಜೊತೆಗೆ ಸಾಕಷ್ಟು ಕಲಿಯುವ ಅವಕಾಶವೂ ಸಿಕ್ಕಿದೆ.
ಚಿತ್ರದ ಪಾತ್ರ ಒಂದು ರೀತಿ ಸದಾ ಮಜ ಕೊಡುವಂತಹ ಪಾತ್ರವಾಗಿದ್ದು, ಇಲ್ಲಿಯವರೆಗೆ ಸಿಕ್ಕ ಪಾತ್ರಗಳಲಿ ಜುಬ್ಬಾ-ಪೈಜಾಮ ಹಾಕಿ ಕ್ಯಾಮೆರಾ ಮುಂದೆ ನಿಲ್ಲಿಸುವ ನಿರ್ದೇಶಕರ ನಡುವೆ, ವಿನಯ್ ಅವರು ಮಾಡ್ರನ್ ಕಾಸ್ಟ್ಯೂಮ್ ಹಾಕಿಸಿ, ಯಂಗ್ ಲುಕ್ ಕೊಟ್ಟಿದ್ದಾರೆ. ನಿರ್ದೇಶಕರು ಹಲವು ದೇಶ ಸುತ್ತಿರುವುದರಿಂದ, ಅವರಿಗೆ, ಪಾತ್ರಗಳ ಕಲ್ಪನೆಯ ಹಿಡಿತವಿದೆ. ಹಾಗಾಗಿ, ಈ ಚಿತ್ರದ ಪ್ರತಿ ಪಾತ್ರದಲ್ಲೂ ವಿಶೇಷತೆ ಇದೆ. ಇಲ್ಲಿ ಮಜವೂ ಇದೆ, ಒಳ್ಳೆಯ ಸಂದೇಶವೂ ಇದೆ’ ಎಂಬುದು ಅವರ ಮಾತು.
ಚಿತ್ರದಲ್ಲಿ “ಚೂರಿಕಟ್ಟೆ’ ಪ್ರವೀಣ್‌ತೇಜ್, ಅನನ್ಯ ಕಶ್ಯಪ್, ರಾಧಿಕಾ ನಾರಾಯಣ್ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಈಗಾಗಲೇ ಮೊದಲ ಪೋಸ್ಟರ್ ಮತ್ತು ಟೀಸರ್‌ನಲ್ಲಿ ಗಮನಸೆಳೆದ ಚಿತ್ರದ ಏಳು ಹಾಡುಗಳಿರುವ ಆಡಿಯೋ ಹಕ್ಕನ್ನು ಪಿಆರ್‌ಕೆ ಸಂಸ್ಥೆ ಪಡೆದಿದೆ. ಇಷ್ಟರಲ್ಲೇ ಆಡಿಯೋ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡವಿದೆ. ಇದು ಕೋಸ್ಟಲ್ ಬ್ರಿಡ್ಜ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿದೆ.