Advertisement

ಹಂಪಿ ಉತ್ಸವಕ್ಕೆ ಕೊನೆಗೂ ಡೇಟ್ ಫಿಕ್ಸ್‌!

10:15 AM Feb 07, 2019 | Team Udayavani |

ಹೊಸಪೇಟೆ: ಬರಗಾಲದ ನೆಪವೊಡ್ಡಿ ಹಂಪಿ ಉತ್ಸವವನ್ನು ಮುಂದೂಡುತ್ತ ಬರುತ್ತಿದ್ದ ಮೈತ್ರಿ ಸರ್ಕಾರ, ಕೊನೆಗೂ ಮಾ.2 ಮತ್ತು 3ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ದಿನಾಂಕ ನಿಗದಿ ಮಾಡಿದೆ.

Advertisement

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಫೆ.7ರಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಹಂಪಿ ಉತ್ಸವ ಆಚರಣೆಗೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಲಿದೆ. ಈ ಸಂಬಂಧ ಜಿಲ್ಲಾಡಳಿತ ಜಿಲ್ಲಾಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸುವಂತೆ ಬುಧವಾರ ಸುತ್ತೋಲೆ ಹೊರಡಿಸಿದೆ.

ಆರಂಭದಲ್ಲೇ ಎದುರಾಗಿದ್ದ ವಿಘ್ನ: ಪ್ರತಿವರ್ಷ ನ.3ರಿಂದ 5ರವರೆಗೆ ನಡೆಯುತ್ತಿದ್ದ ಐತಿಹಾಸಿಕ ಹಂಪಿ ಉತ್ಸವಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿತ್ತು. ಕಳೆದ ಮೂರು ತಿಂಗಳಿಂದ ಚುನಾವಣೆ ನೀತಿ ಸಂಹಿತೆ, ಅನುದಾನ ಕೊರತೆ ಸೇರಿದಂತೆ ನಾನಾ ವಿಘ್ನಗಳು ಎದುರಾಗಿದ್ದು ಒಂದೆಡೆಯಾದರೆ, ಬರಗಾಲ ನೆಪವೊಡ್ಡಿ ಉತ್ಸವ ರದ್ದುಗೊಳಿಸುವ ಮೂಲಕ ಮೈತ್ರಿ ಸರ್ಕಾರ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ಬರಗಾಲ ಹಿನ್ನೆಲೆಯಲ್ಲಿ ರದ್ದಾಗಿದ್ದ ಉತ್ಸವಕ್ಕೆ ಭಿಕ್ಷಾಟನೆ ಮಾಡಿಯಾದರೂ ಉತ್ಸವ ಆಚರಿಸುತ್ತೇವೆ ಎಂದು ವಿಪಕ್ಷಗಳ ಹೇಳಿಕೆ ಹಾಗೂ ಈ ಭಾಗದ ಕಲಾವಿದರ ಆಗ್ರಹಕ್ಕೆ ಮಣಿದ ಮೈತ್ರಿ ಸರ್ಕಾರ, ಕಳೆದ ಜ.12 ಮತ್ತು 13ರಂದು ದಿನಾಂಕ ದಿನಾಂಕ ನಿಗದಿ ಮಾಡಿತ್ತು. ಆದರೆ ನಿಗದಿಪಡಿಸಿ ದಿನಾಂಕದಂದು ಉತ್ಸವ ನಡೆಯಲಿಲ್ಲ.

ಪುನಃ ಉತ್ಸವ ಆಚರಣೆಗೆ ಸಾರ್ವಜನಿಕರಿಂದ ಹೋರಾಟ, ಪ್ರತಿಭಟನೆ ಹಾಗೂ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ಫೆ.15 ಮತ್ತು 16 ರಂದು ಉತ್ಸವಕ್ಕೆ ದಿನಾಂಕ ನಿಗದಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರ್ಕಾರದಿಂದ ಯಾವುದೇ ಗ್ರೀನ್‌ ಸಿಗ್ನಲ್‌ ಸಿಕ್ಕಿರಲಿಲ್ಲ.

ಮತ್ತೆ ಕನ್ನಡಪರ ಸಂಘಟನೆಗಳು, ಕಲಾವಿದರು ಹಾಗೂ ಸಾರ್ವಜನಿಕರಿಂದ ಉತ್ಸವ ಆಚರಣೆಗೆ ಒತ್ತಡ ಹೆಚ್ಚಿದ್ದರಿಂದ ಇದೀಗ ಸರ್ಕಾರ ಮಾ.2 ಮತ್ತು 3ರಂದು ಉತ್ಸವ ಆಚರಿಸಲು ದಿನಾಂಕ ನಿಗದಿ ಮಾಡಿದೆ, ಜಿಲ್ಲಾಡಳಿತದಿಂದ ಘೋಷಣೆಯೊಂದೇ ಬಾಕಿ ಉಳಿದಿದೆ.

Advertisement

2.10 ಕೋಟಿ ರೂ. ಬಿಡುಗಡೆ: ಹಂಪಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಜಿಲ್ಲಾಡಳಿತ 8 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ 1.50 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 60 ಲಕ್ಷ ರೂ. ಸೇರಿ ಒಟ್ಟು 2.10 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆ ಮಾಡಿದೆ.

• ಬರ ನೆಪದಲ್ಲಿ ಹಂಪಿ ಉತ್ಸವ ರದ್ದುಗೊಳಿಸಿದ್ದ ಸರ್ಕಾರ
• ಮಂಗಳವಾರ ಉತ್ಸವಕ್ಕಾಗಿ ಮಲಗಿ ಪ್ರತಿಭಟಿಸಿದ್ದ ವಾಟಾಳ್‌
• ಅಂತೂ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಮೈತ್ರಿ ಸರ್ಕಾರ
• ಹಂಪಿ ಉತ್ಸವಕ್ಕೆ ಸರ್ಕಾರದಿಂದ 2.10 ಕೋಟಿ ರೂ. ಬಿಡುಗಡೆ

ಐತಿಹಾಸಿಕ ಹಂಪಿ ಉತ್ಸವ ಉತ್ತರ ಕರ್ನಾಟಕದ ಪ್ರಾತಿನಿಧಿಕ ಉತ್ಸವವಾಗಿದೆ. ಈ ಭಾಗದ ಕಲಾವಿದರ ಪ್ರತಿಭೆ ಆನಾವರಣಗೊಳಿಸುವ ಬಹುದೊಡ್ಡ ಉತ್ಸವ ಎನಿಸಿದೆ. ಸರ್ಕಾರ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಎಂಬ ತಾರತ್ಯಮ ನೀತಿ ಕೈಬಿಡಬೇಕು. ಮೈಸೂರು ದಸರಾ ಉತ್ಸವಕ್ಕೆ ನೀಡಿದ ಮಹತ್ವವನ್ನು ಹಂಪಿ ಉತ್ಸವಕ್ಕೂ ನೀಡಬೇಕು. ಪ್ರತಿವರ್ಷ ಕಡ್ಡಾಯವಾಗಿ ಹಂಪಿ ಉತ್ಸವ ಆಚರಿಸಬೇಕು.
• ಮ.ಬ.ಸೋಮಣ್ಣ, ಸಾಹಿತಿ, ರಂಗಕರ್ಮಿ, ಮರಿಯಮ್ಮನಹಳ್ಳಿ.

ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next