ಇಂದು ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಸಾಮಾಜಿಕ ಜಾಲತಾಣಗಳು ಸೇರಿದಂತೆ ಸ್ಮಾರ್ಟ್ ಫೋನಿನ ಮೂಲಕ ವಿವಿಧ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ವಿವಿಧ ಅಪ್ಲಿಕೇಶನ್ ಗಳ ಮುಖಾಂತರ ಸಂದೇಶ, ಪೋಟೋ, ವಿಡಿಯೋಗಳ ಮೂಲಕ ವ್ಯವಹರಿಸುತ್ತಿರುತ್ತಾರೆ.
ಗಮನಿಸಬೇಕಾದ ಅಂಶವೆಂದರೇ ಪ್ರತಿಯೊಂದು ಆ್ಯಪ್ ಗಳು ಕೂಡ ಬಳಕೆದಾರರ ಡೇಟಾ ಅಥವಾ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತವೆ. ಮಾತ್ರವಲ್ಲದೆ ಥರ್ಢ್ ಪಾರ್ಟಿಗಳಿಗೆ ಮಾರಾಟ ಮಾಡುತ್ತಿರುತ್ತವೆ. ಹಾಗಾದರೇ ಯಾವೆಲ್ಲಾ ಆ್ಯಪ್ ಗಳು ಎಷ್ಟೆಷ್ಟು ಡೇಟಾ ಸಂಗ್ರಹಿಸುತ್ತಿವೆ ಎಂಬುದು ತಿಳಿದಿದೆಯೇ ? ಇಲ್ಲಿದೆ ಮಾಹಿತಿ.
ಬಳಕೆದಾರರ ಡೇಟಾ ಸಂಗ್ರಹಿಸುವುದರಲ್ಲಿ ಜನಪ್ರಿಯ ಇನ್ ಸ್ಟಾಗ್ರಾಂ ಆ್ಯಪ್ ಅಗ್ರಪಂಕ್ತಿಯಲ್ಲಿದೆ. ಇದು ಸುಮಾರು 79% ರಷ್ಟು ಮಾಹಿತಿ ಸಂಗ್ರಹಿಸಿ ಥರ್ಡ್ ಪಾರ್ಟಿಗಳಿಗೆ ಮಾರುತ್ತವೆ. ಇದರಲ್ಲಿ ಸರ್ಚ್ ಹಿಸ್ಟರಿ, ಲೊಕೇಶನ್, ಕಾಂಟ್ಯಾಕ್ಟ್ ನಂಬರ್ ಗಳು, ಜೊತೆಗೆ ನಿಮ್ಮ ಹಣಕಾಸಿನ ಮಾಹಿತಿ ಹಾಗೂ ಆನ್ ಲೈನ್ ಮೂಲಕ ಖರೀದಿಸಿದ ವಸ್ತುಗಳ ಬಗ್ಗೆ ಮಾಹಿತಿ ಕಲೆಹಾಕುತ್ತವೆ.
ಸೇಫ್ಟಿ ಸೆಂಟ್ರಿಕ್ ಕ್ಲೌಡ್ ಸ್ಟೋರೇಜ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಒಂದಾದ pCloud, ಆ್ಯಪ್ ಗಳು ಸಂಗ್ರಹಿಸುವ ಡೇಟಾ ಗಳ ಕುರಿತು ಮಾಹಿತಿ ಕಲೆಹಾಕಿದ್ದು, ಕೆಲವೊಂದು ಆಘಾತಕಾರಿ ವಿಚಾರಗಳು ಕೂಡ ಹೊರಬಿದ್ದಿದೆ.
ಇನ್ನು ಸಾಮಾಜಿಕ ಜಾಲತಾಣಗಳ ದೈತ್ಯ ಎಂದೇ ಕರೆಯಲ್ಪಡುವ ಫೇಸ್ ಬುಕ್ ಕೂಡ ಬರೋಬ್ಬರಿ 57% ರಷ್ಟು ಡೇಟಾ ಸಂಗ್ರಹಿಸಿ ಮಾರಾಟ ಮಾಡುತ್ತಿದೆ. ಇದರ ಹೊರತಾಗಿ ತನ್ನದೇ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಜಾಹೀರಾತು ನೀಡಲು ಶೇ. 86 ರಷ್ಟು ಮಾಹಿತಿ ಸಂಗ್ರಹ ಮಾಡುತ್ತಿದೆ.
ಗಮನಿಸಬೇಕಾದ ಅಂಶವೆಂದರೇ 80% ಆ್ಯಪ್ ಗಳು ತಮ್ಮದೇ ಉತ್ಪನ್ನಗಳನ್ನು ಮಾರಾಟ ಮಾಡಲೆಂದೇ ಬಳಕೆದಾರರ ಡೇಟಾಗಳನ್ನು ಕಲೆಕ್ಟ್ ಮಾಡಿಕೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳು ವಾಣಿಜ್ಯ ಉದ್ದೇಶದಿಂದ ಡೇಟಾ ಸಂಗ್ರಹಿಸುವ ಪ್ರಮಾಣವನ್ನು ಪ್ರತಿವರ್ಷ ಹೆಚ್ಚಿಸಿಕೊಳ್ಳುತ್ತಿದ್ದು, ಬಿಗೋ ಲೈವ್, ಲೈಕೀ ಮೊದಲಾದ ಸೋಶಿಯಲ್ ಮೀಡಿಯಾಗಳು ಅಷ್ಟೇನೂ ಡೇಟಾ ಕಲೆ ಹಾಕುತ್ತಿಲ್ಲ ಎಂದು ವರದಿ ತಿಳಿಸಿದೆ.
ಗೌಪ್ಯತೆ ಅಥವಾ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಆ್ಯಪ್ ಗಳು ಎಂದು ಗುರುತಿಸಿಕೊಂಡಿರುವ ಸಿಗ್ನಲ್, ಟೆಲಿಗ್ರಾಂ, ವಿಡಿಯೋ ಕಾನ್ಫರೆನ್ಸ್ ಫ್ಲ್ಯಾಟ್ ಫಾರ್ಮ್ ಗಳಾದ ಜೂಮ್, ಸ್ಕೈಪ್, ಮೈಕ್ರೋ ಸಾಫ್ಟ್ ಟೀಮ್ಸ್ , ಓಟಿಟಿ ದೈತ್ಯ ನೆಟ್ ಫ್ಲಿಕ್ಸ್ ಮೊದಲಾದವು ಅತೀ ಕಡಿಮೆ ಡೇಟಾ ಸಂಗ್ರಹಿಸುತ್ತವೆ ಎಂದು ಸಮೀಕ್ಷೆ ತಿಳಿಸಿದೆ.
ಇದರ ಹೊರತಾಗಿ, ಫುಡ್ ಡೆಲಿವರಿ ಆ್ಯಪ್ ಜಸ್ಟ್ ಈಟ್, ಗ್ರಬ್ ಹಬ್, ಮೈ ಮೆಕ್ ಡೊನಾಲ್ಡ್ ಮುಂತಾದವೂ ಗ್ರಾಹಕರ ಒಂದಿನಿತೂ ಮಾಹಿತಿ ಕಲೆಹಾಕುವುದಿಲ್ಲ ಎಂದು ತಿಳಿದುಬಂದಿದೆ. ಇದಕ್ಕೆ ವಿರುದ್ದವಾಗಿ ಊಬರ್ ಈಟ್ಸ್, ಲಿಂಕ್ಡ್ ಇನ್, ಯ್ಯೂಟ್ಯೂಬ್ , ಇ-ಬೇ ಮೊದಲಾದವೂ ಕೆಲವೊಂದು ಡೇಟಾಗಳ ಸಂಗ್ರಹ ಕಾರ್ಯದಲ್ಲಿ ನಿರತವಾಗಿದೆ.
ಹಾಗಾದರೇ ಡೇಟಾ ಸಂಗ್ರಹದಲ್ಲಿ ಗೂಗಲ್ ಪಾಲು ಎಷ್ಟು?
ಆ್ಯಪಲ್ ಸಂಸ್ಥೆಯೂ, ಆ್ಯಪ್ ಡೆವಲಪರ್ ಗಳಿಗಾಗಿ ಹೊಸ ಪ್ರೈವೆಸಿ ಲೇಬಲ್ ಒಂದನ್ನು ಬಿಡುಗಡೆ ಮಾಡಿ, ಎಷ್ಟು ಪ್ರಮಾಣದಲ್ಲಿ ಡೇಟಾ ಟ್ರ್ಯಾಕ್ ಮಾಡುತ್ತಿರುವಿರಾ ? ಎಂಬ ಪ್ರಶ್ನೆ ಕೇಳಿತ್ತು. ಇದಾದ ಒಂದು ತಿಂಗಳ ಬಳಿಕ ಗೂಗಲ್ ತನ್ನ ಪ್ರೈವೆಸಿ ಲೇಬಲ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಳಕೆದಾರರ ಲೊಕೇಶನ್, ಹಣಕಾಸಿನ ಮಾಹಿತಿ, ಬ್ರೌಸಿಂಗ್ ಹಿಸ್ಟರಿ ಹಾಗೂ ಆಡಿಯೋ ಡೇಟಾಗಳನ್ನು ಕಲೆಕ್ಟ್ ಮಾಡುವುದಾಗಿ ತಿಳಿಸಿದೆ.
ಪ್ರೈವೆಸಿ ಕೇಂದ್ರಿಕೃತವಾದ ಸರ್ಚ್ ಇಂಜಿನ್ ಗಳಲ್ಲಿ ಒಂದಾದ ‘ಡಕ್ ಡಕ್ ಗೋ’, ಗೂಗಲ್ ಬಳಕೆದಾರರ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎಂದು ಆರೋಪಿಸಿದೆ. ಮಾತ್ರವಲ್ಲದೆ ಟ್ವೀಟ್ ಒಂದನ್ನು ಮಾಡಿ ಕ್ರೋಮ್ ಹಾಗೂ ಗೂಗಲ್ ಆ್ಯಪ್ ಮೇಲೆ ಕಿಡಿಕಾರಿದೆ.