Advertisement

ಡಾಟಾ ಅನಾಲಿಸ್ಟ್‌ ಬೇಡಿಕೆ ಇದೆ; ಕೌಶಲವಿರಲಿ

11:38 PM Jul 23, 2019 | mahesh |

21ನೇ ಶತಮಾನದಲ್ಲಿ ಎಲ್ಲರೂ ಬಯಸುವುದು ಆನ್‌ಲೈನ್‌ ವಹಿವಾಟು. ಪುಸಕ್ತ, ಪೆನ್ನಿನಲ್ಲಿ ನಡೆಯುತ್ತಿದ್ದ ವ್ಯವಹಾರ ಇಂದು ಕಂಪ್ಯೂಟರ್‌ ಸಾಫ್ಟ್ವೇರ್‌ಗಳಿಗೆ ವರ್ಗವಣೆಗೊಂಡಿದೆ. ಆನ್‌ಲೈನ್‌ ಹಾಗೂ ಕಂಪ್ಯೂಟರ್‌ಗಳಲ್ಲೇ ಎಲ್ಲ ವ್ಯವಹಾರಗಳಾಗುವುದರಿಂದ ಕಂಪ್ಯೂಟೀಕೃತ ಡಾಟಾಗಳ ನಿರ್ವಹಣೆ ಅತೀ ಮುಖ್ಯ. ಹೀಗಾಗಿ ಡಾಟಾ ಅನಾಲಿಸ್ಟ್‌ ಗಳಿಗೂ ಬೇಡಿಕೆ ಹೆಚ್ಚು.

Advertisement

ತಾಂತ್ರಿಕ ಕ್ಷೇತ್ರ ಮುಂದುವರಿಯುತ್ತಿದೆ. ಅಂಗಡಿಗಳಿಗೆ ತೆರಳಿ ಬೇಕಾದ ವಸ್ತು, ಉತ್ಪನ್ನಗಳನ್ನು ಕೊಳ್ಳುವ ಕಾಲ ಮುಗಿದು ಹೋಗಿದೆ. ವೇಗದ ಜಗತ್ತಿನಲ್ಲಿ ಒತ್ತಡದ ನಡುವೆಯೂ ಬದುಕುತ್ತಿರುವ ಮನುಷ್ಯ ಸಂಕುಲಕ್ಕೆ ತಮಗೆ ಬೇಕಾದನ್ನು ಹೋಗಿ ಕೊಳ್ಳುವಷ್ಟು ಸಮಯವೂ ಇರುವುದಿಲ್ಲ. ಮೊಬೈಲ್ ಹಿಡಿದು ಆರ್ಡರ್‌ ಮಾಡಿದರೆ ಕಾಲ ಬುಡಕ್ಕೇ ಬೇಕಾದ ಉತ್ಪನ್ನಗಳು ಬಂದು ತಲುಪುವಂತದ್ದನ್ನೇ ಬಯಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅದಕ್ಕೇ 21ನೇ ಶತಮಾನದ ಜನರು ಬಯಸೋದು ಆನ್‌ಲೈನ್‌ ವಹಿವಾಟು.

ಬಟ್ಟೆ, ಎಲೆಕ್ಟ್ರಾನಿಕ್‌ ಉಪಕರಣಗಳು, ಆಹಾರ, ಮೇಕಪ್‌ ಸಾಮಾಗ್ರಿಯಿಂದ ಹಿಡಿದು ಟಿವಿ, ವಾಶಿಂಗ್‌ ಮೆಶಿನ್‌, ಮೊಬೈಲ್ ಎಲ್ಲವನ್ನೂ ಆನ್‌ಲೈನ್‌ನಲ್ಲೇ ಖರೀದಿ ಮಾಡುವ ಯುಗದಲ್ಲಿ ನಾವಿದ್ದೇವೆ. ಜನರ ಬೇಡಿಕೆಗನುಗುಣವಾಗಿ ಆನ್‌ಲೈನ್‌ ವಹಿವಾಟು ಕುದುರಿದೆ. ಇಂಟನ್‌ನೆಟ್ ಬಳಕೆ ಹೆಚ್ಚಾಗಿದೆ. ಜಗತ್ತೇ ವೆಬ್‌ಮಯವಾಗಿದೆ. ರಾಶಿರಾಶಿ ಡಾಟಾಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎಲ್ಲ ಕಂಪೆನಿಗಳ ಮುಂದಿದೆ. ಸಹಜವಾಗಿಯೇ ಅಂತಹ ಕಂಪೆನಿಗಳಲ್ಲಿ ಡಾಟಾ ಅನಾಲಿಸ್ಟ್‌ಗಳಿಗೂ ಬೇಡಿಕೆ ವೃದ್ಧಿಯಾಗಿದೆ.

ಏನಿದು ಡಾಟಾ ಅನಾಲಿಸ್ಟ್‌?

ಡಾಟಾಬೇಸ್‌ ನಿರ್ವಹಣೆಗೆ ಸಂಬಂಧಿಸಿದ ಉದ್ಯೋಗವಿದು. ಸ್ಟಾಟಿಸ್ಟಿಕಲ್, ಕಂಪ್ಯೂಟರ್‌ ಸೈನ್ಸ್‌, ವ್ಯವಹಾರ ಆಡಳಿತದಲ್ಲಿ ಪದವಿ ಪಡೆದವರಿಗೆ ಈ ಕೋರ್ಸ್‌ ಸುಲಭ. ಗಣಿತ/ಅಂಕಿಅಂಶ ಮತ್ತು ಪ್ರೋಗ್ರಾಮಿಂಗ್‌, ಸಂವಹನ ಪರಿಣತಿ, ವೆಬ್‌ಡಾಟಾ ಸಂಬಂಧಿ ಉಂಟಾಗುವ ತೊಂದರೆಗಳನ್ನು ವ್ಯವಸ್ಥಿತವಾಗಿ ಸರಿಪಡಿಸುವ ಛಾತಿ ಇರಬೇಕು. ಇದಿಷ್ಟು ಕಲೆ ನಿಮ್ಮಲ್ಲಿದ್ದರೆ, ಡೇಟಾ ಅನಾಲಿಸ್ಟ್‌ಗಳಾಗಿ ಗುರುತಿಸಿಕೊಳ್ಳಬಹುದು.

ಇಂಟರ್‌ವ್ಯೂ ಟ್ರೈನಿಂಗ್‌ ಪ್ರೋಗ್ರಾಮ್‌

ವಿಶೇಷವೆಂದರೆ, ಡಾಟಾ ಅನಾಲಿಸಿಸ್‌ ಮಾಡುವ ಕೋರ್ಸ್‌ ಕಲಿತರೆ ಕೆಲವು ಸಂಸ್ಥೆಗಳಲ್ಲಿ ಇಂಟರ್‌ವ್ಯೂ ತರಬೇತಿಯನ್ನೂ ನೀಡುತ್ತಾರೆ. ಇದರಲ್ಲಿ ಅಲ್ಪಾವಧಿ ಕೋರ್ಸ್‌ (1 ತಿಂಗಳು) ಮತ್ತು ದೀರ್ಘಾವಧಿ ಕೋರ್ಸ್‌ ಗಳು (ಆರು ತಿಂಗಳು) ಇರುತ್ತವೆ. ಕಂಪ್ಯೂಟರ್‌ ಸೈನ್ಸ್‌, ಎಂಬಿಎ ಪದವೀಧರರು ಆರು ತಿಂಗಳ ಕೋರ್ಸ್‌ ತೆಗೆದುಕೊಂಡರೆ, ಕೋರ್ಸ್‌ ಬಳಿಕ ಅವರಿಗೆ ಎಂಪ್ಲಾಯ್‌ಮೆಂಟ್ ಟೆಸ್ಟ್‌ ಮತ್ತು ಇಂಟರ್‌ವ್ಯೂ ಡೇಟಾ ಟ್ರೈನಿಂಗ್‌ ಪ್ರೋಗ್ರಾಮ್‌ಗಳನ್ನು ನೀಡಿ ಸಂದರ್ಶನ ಎದುರಿಸಲು ಸಶಕ್ತರನ್ನಾಗಿ ಮಾಡಲಾಗುತ್ತದೆ. ಆಯಾ ಸಂಸ್ಥೆಗಳಲ್ಲಿರುವ ಪ್ಲೇಸ್‌ಮೆಂಟ್ ಸೆಲ್ ಮುಖಾಂತರವೇ ಬಹು ರಾಷ್ಟ್ರೀಯ ಕಂಪೆನಿಗಳ ಸಂದರ್ಶನಕ್ಕೆ ಕಳುಹಿಸಿಕೊಡಲಾಗುತ್ತದೆ.

ಯಶಸ್ವಿ ಸಂದರ್ಶನ ಎದುರಿಸಿ

ಡಾಟಾ ಅನಾಲಿಸ್ಟ್‌ಗಳಿಗೆ ಪ್ರೋಗ್ರಾಮಿಂಗ್‌ ಸ್ಕಿಲ್ ಅವಶ್ಯವಾಗಿ ಬೇಕಾಗಿರುತ್ತದೆ. ಸಂಖ್ಯಾಶಾಸ್ತ್ರದ ಮೂಲಭೂತ ಅಂಶ ಗೊತ್ತಿರಬೇಕು. ಡಾಟಾಗಳ ಅರ್ಥ ವಿವರಣೆಯನ್ನು ಇತರ ಪಾಲುದಾರರ ಜತೆ ಪರಿಣಾಮಕಾರಿಯಾಗಿ ಸಂವಹನ ಮಾಡುವ ಅವಶ್ಯವಿದೆ. ಡಾಟಾ ಬೇಸ್‌ ಡಿಸೈನ್‌, ಡಾಟಾ ಮಾಡೆಲ್ಸ್, ಡೇಟಾ ಮೈನಿಂಗ್‌ ಬಗ್ಗೆ ಆಳವಾದ ಜ್ಞಾನವನ್ನು ಜಾಹೀರುಗೊಳಿಸಬೇಕು. ಕಂಪೆನಿ ಅಭಿವೃದ್ಧಿಯಲ್ಲಿ ಡಾಟಾ ಅನಾಲಿಸ್ಟ್‌ವೊಬ್ಬನ ಜವಾಬ್ದಾರಿಗಳ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಕೌಶಲಭರಿತ ಉತ್ತರ ನೀಡಿದರೆ ಡಾಟಾ ಅನಾಲಿಸ್ಟ್‌ ಆಗಿ ಉದ್ಯೋಗ ನಿರ್ವಹಿಸಬಹುದು.
ಕೌಶಲ ಅಗತ್ಯ

ಸಣ್ಣ ಕಂಪೆನಿಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳ ತನಕ ಡಾಟಾ ಅನಾಲಿಸ್ಟ್‌ಗಳ ನೇಮಕ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದರೆ, ಸುಮ್ಮನೇ ಡಾಟಾ ಅನಾಲಿಸ್ಟ್‌ಗಳಾಗಲು ಸಾಧ್ಯವಿಲ್ಲ. ಅದಕ್ಕೆ ಬೇಕಾದ ಪರಿಶ್ರಮ ಮತ್ತು ಕೌಶಲವೂ ಅಷ್ಟೇ ಅಗತ್ಯ. ಮುಖ್ಯವಾಗಿ ಮ್ಯಾಥಮ್ಯಾಟಿಕಲ್ ಮತ್ತು ಅನಾಲಿಟಿಕಲ್ ಕೌಶಲ ಇರುವವರು ಡಾಟಾ ಅನಾಲಿಸ್ಟ್‌ಗಳಾಗಿ ಭವಿಷ್ಯ ರೂಪಿಸಿಕೊಳ್ಳಬಹುದು. ಡಾಟಾ ಅರ್ಥ ವಿವರಣೆ ಮಾಡುವ ಚಾಕಚಕ್ಯತೆ ಮತ್ತು ಸಂವಹನ ಕೌಶಲವಿದ್ದರೆ ಈ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬಹುದು.

ಪ್ರಾಕ್ಟಿಕಲ್ ಪರೀಕ್ಷೆ

ಯಶಸ್ವಿ ಸಂದರ್ಶನವೊಂದೇ ಡಾಟಾ ಅನಾಲಿಸ್ಟ್‌ಗಳಿಗೆ ಮಾನದಂಡವಲ್ಲ. ಪ್ರಾಕ್ಟಿಕಲ್ ಪರೀಕ್ಷೆಯನ್ನೂ ಎದುರಿಸಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ಕೌಶಲವಿದೆಯೋ ಅದರ ಬಗ್ಗೆ ನಿರರ್ಗಳ ಮಾತನಾಡಬಹುದು. ಆದರೆ ಪ್ರಾಕ್ಟಿಕಲ್ ವಿಚಾರಕ್ಕೆ ಬಂದಾಗ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಸಂದರ್ಶಕರು ಒಂದು ಪ್ರೋಗ್ರಾಮ್‌ ನೀಡಿ ನಿಗದಿತ ಅವಧಿಯೊಳಗೆ ಪರಿಹರಿಸುವಂತೆ ಹೇಳುತ್ತಾರೆ. ಸಂದರ್ಶಕರ ಆಣತಿಯಂತೆ ಇದನ್ನೂ ಯಶಸ್ವಿಯಾಗಿ ನಿಭಾಯಿಸಿದರೆ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಅತ್ಯುತ್ತಮ ಹೆಜ್ಜೆಯಾಗುತ್ತದೆ ಎನ್ನುತ್ತಾರೆ ಎನ್‌ಐಐಟಿ ಬಿಜೈ ಸೆಂಟರ್‌ನ ಬಿಸಿನೆಸ್‌ ಪಾರ್ಟನರ್‌ ವಿಕಾಸ್‌. ಮಂಗಳೂರಿನಲ್ಲಿ ಎನ್‌ಐಐಟಿ, ಸ್ಮಾರ್ಟ್‌ ರೋಬೋಟಿಕ್ಸ್‌ ಟೆಕ್ನಾಲಜಿ, ಡಿಎಂ ಲಾಜಿಕ್ಸ್‌ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಈ ಕೋರ್ಸ್‌ ಲಭ್ಯವಿದೆ.

-ಧನ್ಯಾ ಬಾಳೆಕಜೆ
Advertisement

Udayavani is now on Telegram. Click here to join our channel and stay updated with the latest news.

Next