Advertisement

ಆಸ್ಟ್ರೇಲಿಯದಲ್ಲಿ ಡೇ-ನೈಟ್‌ ಟೆಸ್ಟ್‌ ಆಡಲಿದೆ ಭಾರತ

10:01 AM Feb 18, 2020 | sudhir |

ಹೊಸದಿಲ್ಲಿ: ಈ ವರ್ಷಾಂತ್ಯ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಅಲ್ಲಿ ಹಗಲು-ರಾತ್ರಿ ಟೆಸ್ಟ್‌ ಪಂದ್ಯವೊಂದನ್ನು ಆಡಲಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ. ಆದರೆ ಇದರ ಅಧಿಕೃತ ಪ್ರಕಟನೆಯಷ್ಟೇ ಬಾಕಿ ಇದೆ.

Advertisement

“ಆಸ್ಟ್ರೇಲಿಯದ ಯಾವುದೇ ಅಂಗಳದಲ್ಲಿ ಡೇ-ನೈಟ್‌ ಟೆಸ್ಟ್‌ ಆಡಲು ನಾವು ಸಿದ್ಧರಿದ್ದೇವೆ’ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿರುವುದು ವಿಶೇಷ.

“ಹೌದು, ಮುಂಬರುವ ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತ ಡೇ-ನೈಟ್‌ ಟೆಸ್ಟ್‌ ಪಂದ್ಯವೊಂದನ್ನು ಆಡಲಿದೆ. ಇದನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುವುದು’ ಎಂದು ಸೌರವ್‌ ಗಂಗೂಲಿ ತಿಳಿಸಿದರು. ಈ ಪಂದ್ಯ ಅಡಿಲೇಡ್‌ ಅಥವಾ ಪರ್ತ್‌ ನಲ್ಲಿ ನಡೆಯಲಿದೆ.

“ಭಾರತದ ಮುಂದಿನ ಪ್ರತಿಯೊಂದು ಟೆಸ್ಟ್‌ ಸರಣಿ ವೇಳೆಯೂ ಕನಿಷ್ಠ ಒಂದು ಹಗಲು-ರಾತ್ರಿ ಟೆಸ್ಟ್‌ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಪ್ರಯತ್ನಿಸಲಿದೆ. ಅದರಂತೆ ಇಂಗ್ಲೆಂಡ್‌ ಎದುರಿನ ಮುಂಬರುವ ತವರಿನ ಸರಣಿಯ ದ್ವಿತೀಯ ಟೆಸ್ಟ್‌ ಪಂದ್ಯ ಡೇ-ನೈಟ್‌ ಆಗಿರಲಿದೆ’ ಎಂಬುದಾಗಿ ಗಂಗೂಲಿ ಹೇಳಿದರು.

2015ರಿಂದ ಮೊದಲ್ಗೊಂಡು ಈ ತನಕ 14 ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ಆಡಿದ್ದು ಒಂದು ಪಂದ್ಯ ಮಾತ್ರ. ಇದು ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದಿತ್ತು.

Advertisement

ಅಂದು ಆಹ್ವಾನ ತಿರಸ್ಕರಿಸಿದ್ದ ಭಾರತ
ಭಾರತ 2018-19ರ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡ್‌ನ‌ಲ್ಲಿ ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನು ಆಡಬೇಕಿತ್ತಾದರೂ ಬಿಸಿಸಿಐ “ಕ್ರಿಕೆಟ್‌ ಆಸ್ಟ್ರೇಲಿಯ’ದ ಆಹ್ವಾನವನ್ನು ತಿರಸ್ಕರಿಸಿತ್ತು.

ಈ ವರ್ಷಾರಂಭದ ಏಕದಿನ ಸರಣಿಯ ವೇಳೆ ಆಸ್ಟ್ರೇಲಿಯದ ಕ್ರಿಕೆಟ್‌ ನಿಯೋಗವೊಂದು ಭಾರತಕ್ಕೆ ಬಂದು ಬಿಸಿಸಿಐ ಜತೆ ಹಗಲು-ರಾತ್ರಿ ಟೆಸ್ಟ್‌ ಪಂದ್ಯದ ಆಯೋಜನೆ ಕುರಿತು ಮಾತುಕತೆ ನಡೆಸಿತ್ತು. ಇದಕ್ಕೀಗ ಹಸಿರು ನಿಶಾನೆ ಲಭಿಸಿದಂತಿದೆ.

ವಿರಾಟ್‌ ಕೊಹ್ಲಿ ಆಸಕ್ತಿ
ಆಸ್ಟ್ರೇಲಿಯ ಪ್ರವಾಸದ ವೇಳೆ ಡೇ-ನೈಟ್‌ ಟೆಸ್ಟ್‌ ಪಂದ್ಯವಾಡಲು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಆಸಕ್ತರಾಗಿದ್ದಾರೆ. ಕಳೆದ ಆಸ್ಟ್ರೇಲಿಯ ಸರಣಿಯ ಏಕದಿನ ಪಂದ್ಯವೊಂದರ ವೇಳೆ ಅವರು ಈ ಕುರಿತು ಹೇಳಿಕೆಯನ್ನೂ ನೀಡಿದ್ದರು. “ಆಸ್ಟ್ರೇಲಿಯದಲ್ಲಿ ಡೇ-ನೈಟ್‌ ಟೆಸ್ಟ್‌ ಆಡಲು ನಾವು ರೆಡಿ. ಅದು ಬ್ರಿಸ್ಬೇನ್‌, ಪರ್ತ್‌… ಎಲ್ಲೇ ಆಗಿರಬಹುದು, ನಮಗೆ ಸಮಸ್ಯೆ ಇಲ್ಲ. ಟೆಸ್ಟ್‌ ಸರಣಿ ವೇಳೆ ಹೊನಲು ಬೆಳಕಿನಲ್ಲಿ ಆಡುವುದು ರೋಮಾಂಚಕಾರಿ ಸಂಗತಿ’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next