ನರಗುಂದ: ಹಸಿವು ಎಂದು ಬಂದವರಿಗೆ ನಮ್ಮ ನಾಡಿನ ಮಠ, ಮಂದಿರಗಳಲ್ಲಿನ ನಿತ್ಯ ದಾಸೋಹ ಸೇವೆ ಮಾದರಿಯಾಗಿದೆ. ಅಂತೆಯೇ, ಭಕ್ತರಲ್ಲಿ ಧಾರ್ಮಿಕ ಭಾವನೆಗಳನ್ನು ಬಿತ್ತಿ ಬೆಳೆಯುವಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿವೆ. ಇದಕ್ಕೆ 11 ದಿನಗಳ ಶಿವಲಿಂಗ ಪೂಜಾ ಕೈಂಕರ್ಯವೇ ಸಾಕ್ಷಿಯಾಗಿದೆ ಎಂದು ಲೋಕೋಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಜಾಗೃತ ಕೇಂದ್ರ ಸುಕ್ಷೇತ್ರ ವಿರಕ್ತಮಠದ ಕತೃಲಿಂ.ಚನ್ನಬಸವ ಶಿವಯೋಗಿಗಳ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ 1111111 ಶಿವಲಿಂಗಗಳ ಪೂಜಾ ಕೈಂಕರ್ಯದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಚಿವರು ಮಾತನಾಡಿದರು.
11 ದಿನಗಳ ಪರ್ಯಂತ ಪ್ರತಿದಿನ ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ನೂರಾರು ಸಂಖ್ಯೆಯಲ್ಲಿ ತಾಯಂದಿರು ಪಾಲ್ಗೊಂಡು ಶಿವಲಿಂಗ ಪೂಜೆಯಲ್ಲಿ ತೊಡಗಿಸಿಕೊಂಡಿದ್ದು ಬಂಡಾಯ ನಾಡಿನ ಭಕ್ತಿ ಪರಂಪರೆಯನ್ನು ಸಾಕ್ಷೀಕರಿಸಿದೆ. ಇದೊಂದು ಅದ್ಭುತ ಕಾರ್ಯಕ್ರಮ ಎಂದು ಬಣ್ಣಿಸಿದರು.
ಹಿಂದಿನಿಂದಲೂ ಮನೆಗೆ ಸ್ವಾಮಿಗಳು ಪಾದವಿಟ್ಟ ಬಳಿಕ ಪ್ರಸಾದ ಮಾಡುವ ಕೈಂಕರ್ಯ ಇಂದು ಮರೆಯಾಗುತ್ತಿದೆ. ಅಂತಹ ಸಂಸ್ಕೃತಿ ಮತ್ತೆ ಆರಂಭಗೊಳ್ಳಬೇಕು. ಕೇಳುವ ಕೈಗಳಲ್ಲಿ ನಿಯತ್ತಿದ್ದರೆ ಕೊಡುವ ಕೈಗಳಿಗೆ ಈ ನಾಡಿನಲ್ಲಿ ಕೊರತೆಯಿಲ್ಲ. ಇಲ್ಲಿ ನಡೆದ ಪೂಜಾ ಕೈಂಕರ್ಯದ ಪರಂಪರೆ ಮನೆ ಮನೆಗಳಲ್ಲಿ ನಿತ್ಯವೂ ಮುಂದುವರೆಯಲಿ ಎಂದು ಶುಭ ಕೋರಿದರು. ಮಾಜಿ ಶಾಸಕ ಬಿ.ಆರ್.ಯಾವಗಲ್ಲ ಅವರು ಮಾತನಾಡಿ, ಇದು ಜಗತ್ತಿನ ಕಲ್ಯಾಣಕ್ಕಾಗಿ
ಮಾಡಿದ ಮಹಾಯಜ್ಞ. ಭಕ್ತರಲ್ಲಿ ಭಕ್ತಿಯ ಅಲೆ ವೃದ್ಧಿಸುವಲ್ಲಿ ಈ ಪರಂಪರೆ ದೊಡ್ಡದಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಜುನಾಥ ಬೆಳಗಾವಿ, ಗಂಡುಮೆಟ್ಟಿನ ನಾಡಿನಲ್ಲಿ ಶಿವಲಿಂಗ ಪೂಜಾ ಕಾರ್ಯ 11 ದಿನಗಳ ಕಾಲ ವೈಭವದಿಂದ ನೆರವೇರಿದೆ. ಈ ಕಾರ್ಯಕ್ಕೆ ತಾಯಂದಿರು ಒಂದೂವರೆ ತಿಂಗಳ ತಯಾರಿ ನಡೆಸಿದ್ದಾರೆ. ಶಿವಲಿಂಗ ಪೂಜೆಗೆ 25 ಸಾವಿರ ಮೊಳ ಹತ್ತಿಯಿಂದ ಗೆಜ್ಜೆ ವಸ್ತ್ರ ತಯಾರಿಕೆ, ಭಕ್ತರ ಮನೆಯಿಂದಲೇ ಪ್ರತಿದಿನ ನೈವೇದ್ಯಕ್ಕೆ ಮಾದಲಿ ಪ್ರಸಾದ ಹಾಗೂ ಪ್ರತಿದಿನ ರಾತ್ರಿ 2 ಗಂಟೆಯಿಂದಲೇ ಪೂಜಾ ಕೈಂಕರ್ಯಕ್ಕೆ ಶ್ರೀಮಠದ ಸದ್ಭಕ್ತರ ಸಿದ್ಧತೆ ಅದ್ಭುತವಾಗಿ ನೆರವೇರಿದೆ ಎಂದು ಹೇಳಿದರು.
ಶಿವಲಿಂಗ ಪೂಜಾ ಕೈಂಕರ್ಯದ ಬೃಹತ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಅಂತೂರ-ಬೆಂತೂರ ಬೂದೀಶ್ವರ ಮಠದ ಶ್ರೀ ಶಿವಕುಮಾರ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿರಕ್ತಮಠದ ಲಿಂ.ಚನ್ನಬಸವ ಶಿವಯೋಗಿಗಳ ಭಾವಚಿತ್ರ ಹಾಗೂ ಬೃಹತ್ ಈಶ್ವರ ಲಿಂಗುವಿಗೆ ಪುಷ್ಪಾರ್ಚನೆ ಮೂಲಕ ಸಚಿವ ಸಿ.ಸಿ.ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೂರಾರು ಸಂಖ್ಯೆಯಲ್ಲಿ ತಾಯಂದಿರು, ಶ್ರೀಮಠದ ಸದ್ಭಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.