ದಾವಣಗೆರೆ: ಅಕ್ಷರ, ಅನ್ನ, ಆಶ್ರಯದ ತ್ರಿವಿಧ ದಾಸೋಹಿ ಸಿದ್ಧಗಂಗೆಯ ಡಾ| ಶಿವಕುಮಾರ ಮಹಾಸ್ವಾಮಿಗಳವರ ಮೂರನೇ ವರ್ಷದ ಸ್ಮರಣೋತ್ಸವವನ್ನು ಶುಕ್ರವಾರ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ದಾಸೋಹ ದಿನವಾಗಿ ಆಚರಿಸಲಾಯಿತು.
ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಮಾತನಾಡಿ, ಸಿದ್ಧಗಂಗಾ ಮಠ ಜಗತøಸಿದ್ಧವಾಗಲು ಪೂಜ್ಯ ಡಾ| ಶಿವಕುಮಾರ ಸ್ವಾಮೀಜಿಯವರು ನಿರಂತರ ನಡೆಸಿಕೊಂಡು ಬಂದ ಅನ್ನ, ವಸತಿ, ಅಕ್ಷರ ದಾಸೋಹವೇ ಕಾರಣ. ಸಿದ್ಧಗಂಗಾ ಶ್ರೀಗಳವರ ಮಾತೃ ಹೃದಯದ ಆರೈಕೆಯಲ್ಲಿ ಬೆಳೆದ ಕೋಟ್ಯಾಂತರ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಶ್ರೀಕ್ಷೇತ್ರದ ಋಣದಲ್ಲಿದ್ದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಭೀಕರ ಬರಗಾಲದಲ್ಲೂ ಸಿದ್ಧಗಂಗಾ ಮಠದಲ್ಲಿ ತ್ರಿವಿಧ ದಾಸೋಹವನ್ನು ತಮ್ಮ ಜೋಳಿಗೆಯ ನೆರವಿನಿಂದ ನಡೆಸಿಕೊಂಡು ಬಂದ ಕೀರ್ತಿ ಡಾ| ಶಿವಕುಮಾರ ಸ್ವಾಮೀಜಿಯವರದು. ಅವರ ದಿವ್ಯ ದರ್ಶನ ಪಡೆದ ನಾವೆಲ್ಲರೂ ಧನ್ಯರು. ಎಂ.ಎಸ್. ಶಿವಣ್ಣನವರು 1970ರಲ್ಲಿ ಸ್ಥಾಪಿಸಿದ ಸಿದ್ಧಗಂಗಾ ಸಂಸ್ಥೆಗೆ ಸಿದ್ಧಗಂಗಾ ಶ್ರೀಗಳು ಹಲವಾರು ಬಾರಿ ಭೇಟಿ ನೀಡಿದ್ದರು ಎಂದು ಸ್ಮರಿಸಿದರು.
ಸಿದ್ಧಗಂಗಾ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಜಿ. ಸಿ. ನಿರಂಜನ್, ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಪ್ರಶಾಂತ್, ಕಾರ್ಯದರ್ಶಿ ಡಿ.ಎಸ್. ಹೇಮಂತ್, ನಿರ್ದೇಶಕ ಡಾ| ಡಿ.ಎಸ್. ಜಯಂತ್, ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಂಗೀತ ಶಿಕ್ಷಕಿ ರುದ್ರಾಕ್ಷಿಬಾಯಿ ಮತ್ತು ಶಾಲೆಯ ಮಕ್ಕಳು ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು